ದೆಹಲಿ: ಕಾನೂನು ವಿದ್ಯಾರ್ಥಿ ರಿಷಭ್ ಶರ್ಮಾ ಅವರು ಚಳುವಳಿ ನಿರತ ರೈತರನ್ನು ತೆರವುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಮತ್ತು ನ್ಯಾಯಮೂರ್ತಿ ವಿ. ರಾಮಸುಬ್ರಹ್ಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ದೆಹಲಿ ಚಲೋ ತೆರವುಗೊಳಿಸಲು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಳ್ಳಲಿದೆ.
ಸುಪ್ರೀಂ ಪೀಠ ಉಭಯ ಕಡೆಯವರಿಗೂ ನೋಟಿಸ್ ನೀಡಿ, ಒಂದಷ್ಟು ತಿಳಿವಳಿಕೆ/ಕಿವಿಮಾತು ಹೇಳುವ ಕೆಲಸವನ್ನು ಇದಕ್ಕೂ ಮುನ್ನ ಮಾಡಿದೆ. ಇಂದು ಇನ್ನೂ ವಾದ-ಪ್ರತಿವಾದ ಮುಂದುವರಿಯಲಿದೆ. ಅದಾದ ನಂತರ ಜಡ್ಜ್ಮೆಂಟ್ ಅಥವಾ ಸಮಂಜಸ ನಿರ್ದೇಶನ ನೀಡಲಿದೆ ಸುಪ್ರೀಂ ನ್ಯಾಯಪೀಠ. ಇಂದು ಬೆಳಗ್ಗೆ 11.30ರಿಂದ ವಿಚಾರಣೆ ಕೈಗೆತ್ತಿಕೊಳ್ಳಲ್ಲಿದೆ.
ಇತ್ತ ರೈತ ಸಂಘಟನೆಗಳು ರೈತರ ಸಮಸ್ಯೆ ಪರಿಹರಿಸಲು ನ್ಯಾಯಾಲಯದ ಬಳಿ ಸಾಧ್ಯವಿಲ್ಲ. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ಪಾರಾಗಲು ನ್ಯಾಯಾಲಯದ ಹೆಗಲಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಿದೆ ಎಂದು ದೂರಿವೆ. ಸರ್ವೋಚ್ಛ ನ್ಯಾಯಾಲಯದ ಮಧ್ಯಸ್ಥಿಕೆಯಿಲ್ಲದೇ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕಿತ್ತು. ಬಂಡವಾಳಶಾಹಿಗಳ ಆಸೆಗೆ ಮಣಿದು ಜಾರಿಗೊಳಿಸಿದ ಕಾಯ್ದೆಯನ್ನು ನ್ಯಾಯಾಲಯದ ಅಂಗಳದಲ್ಲಿ ಇರಿಸಲಾಗಿದೆ.
ರೈತರ ಬೇಡಿಕೆ ಈಡೇರಿಸಿ ಚಳುವಳಿ ಅಂತ್ಯಗೊಳಿಸುವಲ್ಲಿ ನ್ಯಾಯಾಲಯದ ಯಾವುದೇ ಪಾತ್ರವಿಲ್ಲ. ಕೇವಲ ರಾಜಕೀಯ ನಾಯಕತ್ವದಿಂದ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ. ನ್ಯಾಯಾಲಯಕ್ಕೆ ಜವಾಬ್ದಾರಿ ಹಸ್ತಾಂತರಿಸಿ ಸರ್ಕಾರದ ನುಸುಳಿಕೊಳ್ಳುವ ಪ್ರಯತ್ನ ನಡೆಸಿದೆ ಎಂದು ಆಲ್ ಇಂಡಿಯಾ ಕಿಸಾನ್ ಸಂಘರ್ಷ ಕೋರ್ಡಿನೇಶನ್ ಕಮಿಟಿ ಸರ್ಕಾರವನ್ನು ದೂರಿದೆ.
‘ದೆಹಲಿ ಚಲೋ ಕೊರೊನಾ ಹರಡುವಿಕೆಗೆ ಕಾರಣವಾಗುವುದಿಲ್ಲವೇ?‘ ಕೇಂದ್ರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್