ಕೇಂದ್ರ ಸರ್ಕಾರ ನನ್ನ ಅಧಿಕೃತ ನಿವಾಸವನ್ನು 2ನೇ ಬಾರಿ ಕಿತ್ತುಕೊಂಡಿದೆ; ದೆಹಲಿ ಸಿಎಂ ಅತಿಶಿ ಆರೋಪ

|

Updated on: Jan 07, 2025 | 6:23 PM

ದೆಹಲಿ ಸಿಎಂ ಅತಿಶಿ ಇಂದು ಕೇಂದ್ರ ಸರ್ಕಾರ ತಮ್ಮ ಅಧಿಕೃತ ನಿವಾಸದಿಂದ ತಮ್ಮನ್ನು ಹೊರಗೆ ಹಾಕಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಆಯೋಗವು ದೆಹಲಿಯ ಚುನಾವಣಾ ದಿನಾಂಕಗಳನ್ನು ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಅತಿಶಿ, ಕೇಂದ್ರ ಸರ್ಕಾರವು ನನ್ನನ್ನು ಅಧಿಕೃತ ನಿವಾಸದಿಂದ ಹೊರಗೆ ಹಾಕಬಹುದು. ಆದರೆ, ದೆಹಲಿಯ ಜನರ ಹೃದಯದಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ನನ್ನ ಅಧಿಕೃತ ನಿವಾಸವನ್ನು 2ನೇ ಬಾರಿ ಕಿತ್ತುಕೊಂಡಿದೆ; ದೆಹಲಿ ಸಿಎಂ ಅತಿಶಿ ಆರೋಪ
Atishi
Follow us on

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಿನ್ನೆ ಸಂಜೆ ತನ್ನ ಅಧಿಕೃತ ನಿವಾಸದಿಂದ ತನ್ನನ್ನು ಹೊರಹಾಕಿದೆ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಇಂದು ಆರೋಪ ಮಾಡಿದ್ದಾರೆ. ಈ ಮೊದಲು ಕೂಡ ಅತಿಶಿ ಅವರ ಅಧಿಕೃತ ನಿವಾಸದಿಂದ ಅವರ ವಸ್ತುಗಳನ್ನು ಹೊರಗೆ ಹಾಕಲಾಗಿತ್ತು. ಚುನಾಯಿತ ಸರ್ಕಾರದ ಚುನಾಯಿತ ಮುಖ್ಯಮಂತ್ರಿಯನ್ನು ಅಧಿಕೃತ ನಿವಾಸದಿಂದ ಹೊರಗೆ ಹಾಕಿದ ಈ ರೀತಿಯ ಘಟನೆ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಹಿಂದೆ ಎಂದಿಗೂ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅತಿಶಿ, ಅಧಿಕೃತ ನಿವಾಸದ ಹಂಚಿಕೆ ರದ್ದುಗೊಂಡಿರುವುದರಿಂದ ಮನೆ ಖಾಲಿ ಮಾಡುವಂತೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಅಧಿಕಾರಿಗಳಿಂದ ನಿನ್ನೆ ಸಂಜೆ ಪತ್ರ ಬಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಚುನಾವಣೆ: ಆಮ್​ ಆದ್ಮಿ ಪಕ್ಷ ಗೆದ್ದರೆ ದೇವಸ್ಥಾನಗಳ ಅರ್ಚಕರ ಗೌರವಧನ 18 ಸಾವಿರ ರೂ.ಗೆ ಏರಿಕೆ: ಕೇಜ್ರಿವಾಲ್

ಕೆಲವು ತಿಂಗಳ ಹಿಂದೆ ನಾನು ದೆಹಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನನ್ನ ಅಧಿಕೃತ ನಿವಾಸದಿಂದ ನನ್ನ ವಸ್ತುಗಳನ್ನು ಹೊರಹಾಕಿದ್ದು ನಿಮಗೆ ನೆನಪಿರಬಹುದು. ನಿನ್ನೆ ಸಂಜೆಯೂ ಸಹ ನನ್ನ ಅಧಿಕೃತ ನಿವಾಸದ ಹಂಚಿಕೆಯನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳಿಂದ ಪತ್ರ ಬಂದಿದ್ದರಿಂದ ಇದೇ ರೀತಿಯ ಘಟನೆ ಸಂಭವಿಸಿದೆ. ಚುನಾಯಿತ ಸರ್ಕಾರದ ಚುನಾಯಿತ ಮುಖ್ಯಮಂತ್ರಿಯ ಅಧಿಕೃತ ನಿವಾಸವನ್ನು ಕಿತ್ತುಕೊಳ್ಳುವ ಈ ರೀತಿಯ ಘಟನೆ ದೇಶದಲ್ಲಿ ಎಂದಿಗೂ ಸಂಭವಿಸಿರಲಿಲ್ಲ ಎಂದು ಸಿಎಂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದರು.


ಇದನ್ನೂ ಓದಿ: ಜನರಿಗಾಗಿ ಕೆಲಸ ಮಾಡುವವರು ಇತರರನ್ನು ನಿಂದಿಸುವುದಿಲ್ಲ; ದುರಂತ ಸರ್ಕಾರ ಎಂಬ ಮೋದಿ ಹೇಳಿಕೆಗೆ ಕೇಜ್ರಿವಾಲ್ ತಿರುಗೇಟು

ನನ್ನನ್ನು ಮತ್ತು ನನ್ನ ಕುಟುಂಬ ಸದಸ್ಯರನ್ನು ನಿಂದಿಸಿ ನನ್ನ ಅಧಿಕೃತ ನಿವಾಸದಿಂದ ಹೊರಹಾಕಿದರೆ ದೆಹಲಿಯ ಜನರಿಗಾಗಿ ನಮ್ಮ ಕೆಲಸಕ್ಕೆ ಅಡ್ಡಿಯಾಗುತ್ತದೆ ಎಂದು ಬಿಜೆಪಿ ಭಾವಿಸಿದರೆ ಅದು ತಪ್ಪಾಗುತ್ತದೆ. ನಮ್ಮ ಅಧಿಕೃತ ನಿವಾಸದಿಂದ ನಮ್ಮನ್ನು ತೆಗೆದುಹಾಕಬಹುದು, ಆದರೆ ಜನರ ಹೃದಯದಿಂದ ನಮ್ಮನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಅವರು ಗೊತ್ತಿರಲಿ. ದೆಹಲಿಯ ಜನರು ದೊಡ್ಡ ಹೃದಯವನ್ನು ಹೊಂದಿದ್ದಾರೆ. ನಾನು ಯಾವುದೇ ನಿವಾಸಕ್ಕೆ ಹೋಗಬಹುದು. ಅದೇ ಉತ್ಸಾಹದಿಂದ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.

ಇದಕ್ಕೂ ಮುನ್ನ ದೆಹಲಿ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಫೆಬ್ರವರಿ 5ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ