AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸ್ಮಾರಕಕ್ಕೆ ಸ್ಥಳ ಮಂಜೂರು; ಮೋದಿಗೆ ಧನ್ಯವಾದ ಹೇಳಿದ ಶರ್ಮಿಷ್ಠಾ ಮುಖರ್ಜಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತ್ಯಕ್ರಿಯೆ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸ್ಮಾರಕ ನಿರ್ಮಾಣ ಹಾಗೂ ಅವರಿಗೆ ಕಾಂಗ್ರೆಸ್ ನೀಡಿದ ಗೌರವದ ಬಗ್ಗೆ ಪ್ರಣಬ್ ಮುಖರ್ಜಿ ಅವರ ಮಗಳು ಶರ್ಮಿಷ್ಠಾ ನೀಡಿದ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೀಗ ದೆಹಲಿಯ ರಾಜ್ ಘಾಟ್‌ನಲ್ಲಿ ಪ್ರಣಬ್ ಮುಖರ್ಜಿ ಅವರ ಸ್ಮಾರಕಕ್ಕೆ ಕೇಂದ್ರ ಸರ್ಕಾರ ಸ್ಥಳವನ್ನು ಅನುಮೋದಿಸಿದೆ. ಆಗಸ್ಟ್ 2020ರಲ್ಲಿ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಮಾರಕಕ್ಕಾಗಿ ದೆಹಲಿಯ ರಾಜ್‌ಘಾಟ್ ಸಂಕೀರ್ಣದೊಳಗಿನ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಕೇಂದ್ರ ಸರ್ಕಾರವು ಭೂಮಿಯನ್ನು ಮಂಜೂರು ಮಾಡಿದೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸ್ಮಾರಕಕ್ಕೆ ಸ್ಥಳ ಮಂಜೂರು; ಮೋದಿಗೆ ಧನ್ಯವಾದ ಹೇಳಿದ ಶರ್ಮಿಷ್ಠಾ ಮುಖರ್ಜಿ
Pranab Mukherjee
ಸುಷ್ಮಾ ಚಕ್ರೆ
|

Updated on: Jan 07, 2025 | 7:44 PM

Share

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಮಾರಕದ ಕುರಿತಾಗಿ ಇತ್ತೀಚೆಗೆ ತೀವ್ರ ಚರ್ಚೆಗಳು ನಡೆದಿತ್ತು. ಅದರ ಬೆನ್ನಲ್ಲೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಮಾರಕವನ್ನು ಸ್ಥಾಪಿಸಲು ದೆಹಲಿಯ “ರಾಷ್ಟ್ರೀಯ ಸ್ಮೃತಿ” ಸಂಕೀರ್ಣದಲ್ಲಿ ಸ್ಥಳವನ್ನು ಮಂಜೂರು ಮಾಡಲು ಅನುಮೋದನೆ ನೀಡಿದೆ. ಇಂದು ಪ್ರಣಬ್ ಮುಖರ್ಜಿ ಅವರ ಮಗಳು ಶರ್ಮಿಷ್ಠಾ ಅವರು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಭೂಮಿ ಮತ್ತು ಅಭಿವೃದ್ಧಿ ಕಚೇರಿಯಿಂದ ಜನವರಿ 1ರಂದು ತಮಗೆ ಬಂದ ಪತ್ರವನ್ನು ಹಂಚಿಕೊಂಡಿದ್ದಾರೆ. ತಮ್ಮ ತಂದೆಯ ಸ್ಮಾರಕಕ್ಕೆ ಮೋದಿ ಸರ್ಕಾರ ನೀಡಿರುವ ಅನುಮೋದನೆಯ ಬಗ್ಗೆ ತಿಳಿಸಿದ್ದಾರೆ.

ಇಂದು ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಹೇಳಲು ಭೇಟಿಯಾದ ಶರ್ಮಿಷ್ಠಾ, ನಾವು ಕೇಳದಿದ್ದರೂ ನೀವು ಪರಿಗಣಿಸಿ ಸ್ಮಾರಕ ಮಂಜೂರು ಮಾಡಿರುವುದು ಹೆಚ್ಚು ಸಂತಸ ತಂದಿದೆ. ಪ್ರಧಾನಿಯವರ ಈ ಅನಿರೀಕ್ಷಿತ ನಿರ್ಧಾರದಿಂದ ಮನಸು ತುಂಬಿ ಬಂದಿದೆ. ನನ್ನ ತಂದೆ ರಾಜ್ಯ ಗೌರವಗಳನ್ನು ಕೇಳಬಾರದು, ಅವುಗಳನ್ನು ಸರ್ಕಾರವೇ ನೀಡಬೇಕೆಂದು ಹೇಳುತ್ತಿದ್ದರು. ಅಪ್ಪನ ಸ್ಮರಣೆಯನ್ನು ಗೌರವಿಸಲು ಪಿಎಂ ಮೋದಿ ಅವರು ಇದನ್ನು ಮಾಡಿದ್ದಾರೆ ಎಂದು ನಾವು ಭಾವಿಸುತ್ತೇವೆ. ಅವರಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.

ಇದನ್ನೂ ಓದಿ: ಡಾ. ಮನಮೋಹನ್ ಸಿಂಗ್ ಅಂತ್ಯಕ್ರಿಯೆ, ಸ್ಮಾರಕ ವಿಚಾರದಲ್ಲೂ ವಿವಾದ: ಕಾರಣ ಇಲ್ಲಿದೆ ನೋಡಿ

2012ರಿಂದ 2017ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಪ್ರಣಬ್ ಮುಖರ್ಜಿ ಅವರು ಐದು ದಶಕಗಳ ರಾಜಕೀಯ ಜೀವನವನ್ನು ನಡೆಸಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹಿರಿಯ ನಾಯಕರಾದ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಮೊದಲು 2009ರಿಂದ 2012ರವರೆಗೆ ಹಣಕಾಸು ಮಂತ್ರಿ ಸೇರಿದಂತೆ ಪ್ರಮುಖ ಸಚಿವ ಖಾತೆಗಳನ್ನು ಹೊಂದಿದ್ದರು.

ಪ್ರಣಬ್ ಮುಖರ್ಜಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು 2019ರಲ್ಲಿ ಅವರ ಉತ್ತರಾಧಿಕಾರಿಯಾದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪ್ರದಾನ ಮಾಡಿದ್ದರು. ಸ್ವತಃ ಮಾಜಿ ಕಾಂಗ್ರೆಸ್ ನಾಯಕಿ ಶರ್ಮಿಷ್ಠಾ ಅವರು ಈ ಹಿಂದೆ ತಮ್ಮ ತಂದೆಯ ಸಾವಿನ ಬಳಿಕ ಕಾಂಗ್ರೆಸ್ ಪಕ್ಷದ ನಡೆದುಕೊಂಡ ರೀತಿಯ ಬಗ್ಗೆ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಅಪ್ಪ ನಿಧನರಾದಾಗ ಕಾಂಗ್ರೆಸ್ ಸಂತಾಪ ಸಭೆಯನ್ನೂ ಕರೆಯಲಿಲ್ಲ; ಪ್ರಣಬ್ ಮುಖರ್ಜಿ ಮಗಳ ಬೇಸರ

ಮನಮೋಹನ್ ಸಿಂಗ್ ನಿಧನದ ವೇಳೆ ಪ್ರಣಬ್ ಮುಖರ್ಜಿ ಸಾವಿನ ಬಗ್ಗೆಯೂ ಚರ್ಚೆ ನಡೆದಿತ್ತು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಪ್ರಣಬ್ ಮುಖರ್ಜಿ ಸಾವಿಗೆ ಸಂತಾಪ ಸೂಚಕ ನಿರ್ಣಯವನ್ನು ಅಂಗೀಕರಿಸಲು ಔಪಚಾರಿಕ ಸಭೆಯನ್ನು ಕರೆದಿಲ್ಲ ಎಂದು ಶರ್ಮಿಷ್ಠಾ ಬೇಸರ ಹೊರಹಾಕಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ