ಅಪ್ಪ ನಿಧನರಾದಾಗ ಕಾಂಗ್ರೆಸ್ ಸಂತಾಪ ಸಭೆಯನ್ನೂ ಕರೆಯಲಿಲ್ಲ; ಪ್ರಣಬ್ ಮುಖರ್ಜಿ ಮಗಳ ಬೇಸರ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತ್ಯಕ್ರಿಯೆ ನೆರವೇರಿದೆ. ಆದರೆ, ಅವರ ಸ್ಮಾರಕ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿಯೇ ಚರ್ಚೆಗಳು ಕಾಂಗ್ರೆಸ್ ಧೋರಣೆಯ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಕಾಂಗ್ರೆಸ್ ವಿರುದ್ಧ ಮಾಜಿ ರಾಷ್ಟ್ರಪತಿ ಹಾಗೂ ಕಾಂಗ್ರೆಸ್ ನಾಯಕರಾಗಿದ್ದ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷ ತಮ್ಮ ತಂದೆ ಪ್ರಣಬ್ ಮುಖರ್ಜಿಯವರ ಸಾವಿನ ಸಂದರ್ಭದಲ್ಲಿ ಯಾವ ರೀತಿ ವರ್ತಿಸಿತು ಎಂಬುದನ್ನು ನೆನಪಿಸಿಕೊಂಡಿರುವ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ರಾತ್ರಿ ನವದೆಹಲಿಯ ಏಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆ ನೆರವೇರಿಸಲು ಮತ್ತು ಸ್ಮಾರಕ ನಿರ್ಮಿಸಲು ಕಾಂಗ್ರೆಸ್ ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿತ್ತು. ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲೇ ಸ್ಮಾರಕ ನಿರ್ಮಿಸಲು ಅವಕಾಶ ನೀಡಬೇಕೆಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದರು. ಆದರೆ, ಸ್ಮಾರಕಕ್ಕೆ ಬೇರೆ ಸ್ಥಳ ನಿಗದಿಪಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ, ಇದೀಗ ಕಾಂಗ್ರೆಸ್ ತನ್ನ ಪಕ್ಷದ ನಾಯಕರ ವಿಚಾರದಲ್ಲಿ ತಳೆಯುವ ಧೋರಣೆಯ ಬಗ್ಗೆ ಸ್ವಪಕ್ಷೀಯರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನರಾದಾಗ ಕಾಂಗ್ರೆಸ್ ಸಿಡಬ್ಲುಸಿ ಸಭೆ ಕರೆದು, ಸಂತಾಪ ಸೂಚಕ ಸಭೆಯನ್ನು ನಡೆಸುವ ಔದಾರ್ಯವನ್ನೂ ತೋರಲಿಲ್ಲ ಎಂದು ಪ್ರಣಬ್ ಮುಖರ್ಜಿಯ ಮಗಳು ಶರ್ಮಿಷ್ಠಾ ಆರೋಪಿಸಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು ತಮ್ಮ ತಂದೆಯ ನಿಧನದ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯನ್ನು ಕರೆಯಲು ಕಾಂಗ್ರೆಸ್ ವಿಫಲವಾಗಿತ್ತು ಎಂದು ಟೀಕಿಸಿದ್ದಾರೆ. ತನ್ನ ತಂದೆ ಆಗಸ್ಟ್ 2020ರಲ್ಲಿ ನಿಧನರಾದಾಗ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ಸಂತಾಪ ಸೂಚಕ ಸಭೆಯನ್ನು ಕೂಡ ಕರೆಯಲಿಲ್ಲ ಎಂದು ಅವರು ಹೇಳಿದ್ದಾರೆ. ಆ ಸಮಯದಲ್ಲಿ ಕಾಂಗ್ರೆಸ್ ನಾಯಕರು ಈ ವಿಷಯದಲ್ಲಿ ತನ್ನನ್ನು ದಾರಿ ತಪ್ಪಿಸಿದ್ದರು ಎಂದು ಕೂಡ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಡಾ. ಮನಮೋಹನ್ ಸಿಂಗ್ ಅಂತ್ಯಕ್ರಿಯೆ, ಸ್ಮಾರಕ ವಿಚಾರದಲ್ಲೂ ವಿವಾದ: ಕಾರಣ ಇಲ್ಲಿದೆ ನೋಡಿ
“ಬಾಬಾ ನಿಧನರಾದಾಗ ಕಾಂಗ್ರೆಸ್ ಸಿಡಬ್ಲ್ಯೂಸಿ ಕರೆದು ಸಂತಾಪ ಸೂಚಕ ಸಭೆ ನಡೆಸಲಿಲ್ಲ. ಈ ಬಗ್ಗೆ ಹಿರಿಯ ನಾಯಕರೊಬ್ಬರನ್ನು ಕೇಳಿದಾಗ ರಾಷ್ಟ್ರಪತಿಗಳಿಗೆ ಆ ರೀತಿ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ, ಕೆಆರ್ ನಾರಾಯಣನ್ ಅವರ ನಿಧನದ ನಂತರ ಸಿಡಬ್ಲ್ಯೂಸಿ ಕರೆಯಲಾಗಿತ್ತು ಮತ್ತು ಸಂತಾಪ ಸೂಚಿಸಲಾಗಿತ್ತು ಎಂದು ನನ್ನ ತಂದೆಯ ಡೈರಿಗಳಿಂದ ನನಗೆ ನಂತರ ತಿಳಿಯಿತು. ನನ್ನ ತಂದೆಯವರೇ ಸಂತಾಪ ಸಭೆಯನ್ನು ನಡೆಸಿದ್ದರು” ಎಂದು ಅವರು ಬರೆದಿದ್ದಾರೆ.
Having said that, a memorial for Dr. Singh is a great idea. He deserves it & also Bharat Ratna which baba as President wanted 2 confer on him; but that didn’t happen perhaps due 2 reasons which don’t need to be spelled out. https://t.co/5MhH7k5Smq pic.twitter.com/yUZCEXNMxK
— Sharmistha Mukherjee (@Sharmistha_GK) December 27, 2024
ಭಾರತೀಯ ರಾಷ್ಟ್ರಪತಿಗಳಿಗೆ ಸಂತಾಪ ಸೂಚಿಸುವ ಸಭೆಗಳನ್ನು ನಡೆಸುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. ಈ ಹೇಳಿಕೆಯನ್ನು ಅವರು ಅತ್ಯಂತ ಕೀಳು ಮಟ್ಟದ ಧೋರಣೆ ಎಂದು ಅವರು ಹೇಳಿದ್ದಾರೆ. ಆದರೆ, ತನ್ನ ತಂದೆಗೆ ಆದಂತೆ ಬೇರೆ ನಾಯಕರಿಗೂ ಆಗಬಾರದು ಎಂದಿರುವ ಅವರು 92ನೇ ವಯಸ್ಸಿನಲ್ಲಿ ನಿಧನರಾದ ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕಾಗಿ ಕೇಂದ್ರಕ್ಕೆ ಕಾಂಗ್ರೆಸ್ ಮಾಡಿದ ಮನವಿಯನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ಮನಮೋಹನ್ ಸಿಂಗ್ ಮಾಡಿದ ಆರ್ಥಿಕ ಸುಧಾರಣೆಗಳು ಅಳಿಸಲಾಗದ ಹೆಗ್ಗುರುತಾಗಿವೆ; ಆರ್‌ಬಿಐ ಗವರ್ನರ್ ಮಲ್ಹೋತ್ರಾ
ನನ್ನ ತಂದೆ ಪ್ರಣಬ್ ಮುಖರ್ಜಿ ಅವರು ಡಾ. ಮನಮೋಹನ್ ಸಿಂಗ್ ಅವರಿಗೆ ಭಾರತ ರತ್ನವನ್ನು ನೀಡಲು ಬಯಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎಂದಿರುವ ಶರ್ಮಿಷ್ಠಾ ಮನಮೋಹನ್ ಸಿಂಗ್ ಅವರಿಗೆ ಸ್ಮಾರಕ ನಿರ್ಮಾಣ ಮಾಡಬೇಕೆಂಬ ಬೇಡಿಕೆಯನ್ನು ಬೆಂಬಲಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ