ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ (Delhi) ಬುಧವಾರ ಸಂಜೆ ಮತ್ತೆ ಭೂಕಂಪ (Earthquake) ಸಂಭವಿಸಿದೆ. ಸಂಜೆ ಸುಮಾರು 4.42ಕ್ಕೆ ಭೂಕಂಪನ ಅನುಭವಕ್ಕೆ ಬಂದಿದ್ದು, ಜನರು ಮನೆ, ಕಚೇರಿಗಳಿಂದ ಆತಂಕದಿಂದ ಹೊರಗೋಡಿ ಬಂದಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 2.7ರಷ್ಟು ದಾಖಲಾಗಿದೆ. ಮಂಗಳವಾರ ರಾತ್ರಿ 10.20 ರ ಸುಮಾರಿಗೆ ದೆಹಲಿ ಹಾಗೂ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿತ್ತು. ಸುಮಾರು 6.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದೃಷ್ಟವಶಾತ್ ಸಾವು-ನೋವು ಸಂಭವಿಸಿರಲಿಲ್ಲ. ಪ್ರಬಲ ಕಂಪನದಿಂದಾಗಿ ದೆಹಲಿಯ ಶಕರ್‌ಪುರ ಮತ್ತು ಮೆಟ್ರೋ ಪಿಲ್ಲರ್ ನಂ. 51 ರ ಮುಂಭಾಗದಲ್ಲಿರುವ ಕಟ್ಟಡವು ಬಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಉತ್ತರ ಪ್ರದೇಶದ ಗಾಜಿಯಾಬಾದ್, ವಸುಂಧರಾ ಸೇರಿದಂತೆ ಹಲವು ಕಡೆಗಳಲ್ಲಿಯೂ ಭೂಮಿ ಕಂಪಿಸಿತ್ತು. ಒಂದು ನಿಮಿಷಕ್ಕೂ ಹೆಚ್ಚು ಸಮಯ ಭೂಮಿ ಕಂಪಿಸಿದ ಅನುಭವವಾಗಿತ್ತು.
ಅಫ್ಘಾನಿಸ್ತಾನದಲ್ಲಿ ಸಂಜೆ ಭೂಕಂಪ ಸಂಭವಿಸಿತ್ತು. ಅದಾದ ನಂತರ ರಾತ್ರಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಮಿ ಕಂಪಿಸಿತ್ತು. ತುರ್ಕಮೆನಿಸ್ತಾನ, ಕಜಕಿಸ್ತಾನ, ಪಾಕಿಸ್ತಾನ, ತಜಕಿಸ್ತಾನ, ಉಜ್ಬೇಕಿಸ್ತಾನ, ಚೀನಾ, ಮತ್ತು ಕಿರ್ಗಿಸ್ತಾನ್ ದೇಶಗಳಲ್ಲಿಯೂ ಭೂಕಂಪ ಸಂಭವಿಸಿತ್ತು.
ಭಾರತದಲ್ಲಿ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ದೆಹಲಿಯಲ್ಲಿ ಭೂಕಂಪನದ ಅನುಭವವಾಗಿತ್ತು. ಭೂಕಂಪದ ನಂತರ ಜಮ್ಮುವಿನ ಕೆಲವು ಭಾಗಗಳಲ್ಲಿ ಮೊಬೈಲ್ ಸೇವೆಗಳಿಗೆ ತೊಂದರೆಯಾಗಿದೆ ಎಂದೂ ವರದಿಯಾಗಿತ್ತು.
ಇದನ್ನೂ ಓದಿ: Pakistan Earthquake: ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ 9 ಸಾವು, 150ಕ್ಕೂ ಹೆಚ್ಚು ಜನರಿಗೆ ಗಾಯ
ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಭೂಕಂಪಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ರಿಕ್ಟರ್ ಮಾಪಕದಲ್ಲಿ 4 ಕ್ಕಿಂತ ಹೆಚ್ಚು ತೀವ್ರತೆ ದಾಖಲಿಸಿದ್ದ 6 ಭೂಕಂಪಗಳು ದೇಶದಲ್ಲಿ ಈ ವರ್ಷ ಮಾರ್ಚ್ ತಿಂಗಳಲ್ಲಿ ಸಂಭವಿಸಿವೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Wed, 22 March 23