- Kannada News Photo gallery President Droupadi Murmu presented Padma Awards 2023 at Rashtrapati Bhavan on 22 March; More details in Kannada
Padma Awards 2023: ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಪದ್ಮ ಪ್ರಶಸ್ತಿ ಪ್ರದಾನ; ಪದ್ಮ ವಿಭೂಷಣ ಸ್ವೀಕರಿಸಿದ ಎಸ್ಎಂ ಕೃಷ್ಣ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು (Padma Awards 2023) ಬುಧವಾರ ಪ್ರದಾನ ಮಾಡಿದರು. ಕರ್ನಾಟಕದಿಂದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದ ಎಸ್ಎಂ ಕೃಷ್ಣ ಪದ್ಮ ವಿಭೂಷಣ ಸ್ವೀಕರಿಸಿದರು. ಎಸ್ಎಲ್ ಭೈರಪ್ಪ, ಸುಧಾ ಮೂರ್ತಿ ಸೇರಿದಂತೆ ಕರ್ನಾಟದ ಹಲವರು ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
Updated on:Mar 22, 2023 | 8:33 PM

ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬುಧವಾರ ಸಂಜೆ ನೆರವೇರಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕರ್ನಾಟಕದಿಂದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದ ಎಸ್ಎಂ ಕೃಷ್ಣ ಪದ್ಮ ವಿಭೂಷಣ ಸ್ವೀಕರಿಸಿದರು.

ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣ್ಪುರ್ ಅವರು ರಾಷ್ಟ್ರಪತಿಗಳಿಂದ ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದರು. ಒಟ್ಟು 106 ಮಂದಿ ಈ ಬಾರಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಛತ್ತೀಸ್ಗಡದ ಜಾನಪದ ಕಲಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಪಾಂಡವಾನಿ ಗಾಯಕಿ ಉಷಾ ಬಾರ್ಲೆ ಅವರು ಪದ್ಮ ಶ್ರೀ ಪ್ರಶಸ್ತಿ ಸ್ವೀಕರಿಸಿದರು. ಇವರು ಮಾತ್ರವಲ್ಲದೆ, ಸುಕಮ ಆಚಾರ್ಯ, ಜೋಧಯ್ಯಬಾಯಿ ಬೈಗಾ, ಪ್ರೇಮ್ಜಿತ್ ಬರಿಯಾ, ಮುನೀಶ್ವರ ಚಂದಾವರ, ಹೇಮಂತ್ ಚೌಹಾಣ್ ಭಾನುಭಾಯಿ ಚಿತಾರಾ, ಹೆಮೊಪ್ರೊವಾ ಚುಟಿಯಾ, ನರೇಂದ್ರ ಚಂದ್ರ ದೆಬ್ಬರ್ಮ (ಮರಣೋತ್ತರ), ಸುಭದ್ರಾ ದೇವಿ, ಖಾದರ್ ವಲ್ಲಿ ದೂದೇಕುಲ, ಹೇಂ ಚಂದ್ರ ಗೋಸ್ವಾಮಿ, ಪ್ರಿತಿಕಾನಾ ಗೋಸ್ವಾಮಿ, ರಾಧಾ ಚರಣ್ ಗುಪ್ತಾ, ಮೊಡಡುಗು ವಿಜಯ್ ಗುಪ್ತಾ, ಅಹ್ಮದ್ ಹುಸೇನ್ ಮತ್ತು ಮೊಹಮ್ಮದ್ ಹುಸೇನ್ (ಜೋಡಿ), ದಿಲ್ಶಾದ್ ಹುಸೇನ್, ಭಿಕು ರಾಮ್‌ಜಿ ಇದತೇ, ಸಿ ಐ ಇಸಾಕ್, ರತ್ತನ್ ಸಿಂಗ್ ಜಗ್ಗಿ, ಬಿಕ್ರಮ್ ಬಹದ್ದೂರ್ ಜಮಾತಿಯಾ ಅವರು ಪದ್ಮ ಶ್ರೀ ಪ್ರಶಸ್ತಿ ಸ್ವೀಕರಿಸಿದರು.

ಕೈಗಾರಿಕೋದ್ಯಮಿ ಕುಮಾರ್ ಮಂಗಲಂ ಬಿರ್ಲಾ ಅವರು ರಾಷ್ಟ್ರಪತಿಗಳಿಂದ ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದರು. ಎಸ್ಎಲ್ ಭೈರಪ್ಪ, ದೀಪಕ್ ಧಾರ್, ವಾಣಿ ಜೈರಾಮ್, ಸ್ವಾಮಿ ಚಿನ್ನ ಜೀಯರ್, ಸುಮನ್ ಕಲ್ಯಾಣಪುರ, ಕಪಿಲ್ ಕಪೂರ್, ಸುಧಾ ಮೂರ್ತಿ, ಕಮಲೇಶ್ ಡಿ ಪಟೇಲ್ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಇತರ ಕೇಂದ್ರ ಸಚಿವರೊಂದಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಗವಹಿಸಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪುರಸ್ಕೃತರಿಗೆ ನಮಿಸಿದರು. ವಿವಿಧ ವಿಭಾಗ ಹಾಗೂ ಕ್ಷೇತ್ರಗಳಲ್ಲಿ ಗಮನಾರ್ಹ ಕೆಲಸ ಮಾಡಿದ ಹಾಗೂ ಕೊಡುಗೆ ನೀಡಿದ ಮಹನೀಯರನ್ನು ಗೌರವಿಸುವ ನಿಟ್ಟಿನಲ್ಲಿ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತಿದ್ದು, ಮೋದಿ ನೇತೃತ್ವದ ಸರ್ಕಾರವು ಎಲೆಮರೆಯ ಕಾಯಿಯಂತೆ ಸಾಧನೆ ಮಾಡಿರುವ ಅನೇಕರನ್ನು ಗುರುತಿಸಿ ಪ್ರಶಸ್ತಿ ನೀಡಿದ ಹೆಗ್ಗಳಿಕೆ ಹೊಂದಿದೆ.
Published On - 8:22 pm, Wed, 22 March 23



















