Manish Sisodia: ಮನೀಶ್‌ ಸಿಸೋಡಿಯಾ 7 ದಿನ ಜಾರಿ ನಿರ್ದೇಶನಾಲಯದ ವಶಕ್ಕೆ

ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ, ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯ 7 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದೆ.

Manish Sisodia: ಮನೀಶ್‌ ಸಿಸೋಡಿಯಾ 7 ದಿನ ಜಾರಿ ನಿರ್ದೇಶನಾಲಯದ ವಶಕ್ಕೆ
ಮನೀಶ್ ಸಿಸೋಡಿಯಾ ಅವರನ್ನು ಕೋರ್ಟ್​​ಗೆ ಹಾಜರುಪಸಿದ ಸಂದರ್ಭ (ಪಿಟಿಐ ಚಿತ್ರ)Image Credit source: PTI
Follow us
Ganapathi Sharma
|

Updated on: Mar 10, 2023 | 5:48 PM

ನವದೆಹಲಿ: ಮದ್ಯ ನೀತಿ ಪ್ರಕರಣಕ್ಕೆ (Delhi liquor policy case) ಸಂಬಂಧಿಸಿ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ, ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯ 7 ದಿನಗಳ ಕಾಲ ಜಾರಿ ನಿರ್ದೇಶನಾಲಯದ (Enforcement Directorate) ವಶಕ್ಕೆ ಒಪ್ಪಿಸಿದೆ. ನ್ಯಾಯಾಂಗ ಬಂಧನದಲ್ಲಿದ್ದ ಮನೀಶ್ ಸಿಸೋಡಿಯಾ ಅವರನ್ನು ಗುರುವಾರ ಇ.ಡಿ ಜೈಲಿನಿಂದಲೇ ಬಂಧಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ನ್ಯಾಯಾಲಯದಿಂದ ಸೀಸೋಡಿಯಾ ಜಾಮೀನು ಕೋರಿರುವ ಮಧ್ಯೆಯೇ ಮತ್ತೆ ಅವರ ಬಂಧನವಾಗಿದೆ. ಕೆಲವೊಬ್ಬರು ವ್ಯಕ್ತಿಗಳಿಗೆ ಹಾಗೂ ಅವರ ಅಕ್ರಮಗಳಿಗೆ ನೆರವಾಗುವ ಉದ್ದೇಶದಿಂದಲೇ ಮದ್ಯ ನೀತಿ ರೂಪಿಸಲಾಗಿತ್ತು. ಅವರನ್ನು ವಿಚಾರಣೆಗಾಗಿ ಕಸ್ಟಡಿಗೆ ನೀಡಬೇಕು ಎಂದು ಇ.ಡಿ ವಕೀಲರು ವಾದ ಮಂಡಿಸಿದ್ದರು ಎಂದು ‘ಲೈವ್​​ಲಾ’ ವರದಿ ಮಾಡಿದೆ. ಇ.ಡಿ ವಕೀಲರ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯ ಸಿಸೋಡಿಯಾರನ್ನು 7 ದಿನಗಳ ಕಾಲ ಇ.ಡಿ ವಶಕ್ಕೆ ನೀಡಿ ಆದೇಶಿಸಿದೆ. ಈ ಮಧ್ಯೆ, ಸಿಬಿಐ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಸಿಸೋಡಿಯಾ ವಿರುದ್ಧದ ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 21ಕ್ಕೆ ನಿಗದಿಪಡಿಸಿದೆ.

10 ದಿನಗಳ ಕಾಲ ಸಿಸೋಡಿಯಾ ಅವರನ್ನು ಕಸ್ಟಡಿಗೆ ನೀಡಬೇಕು ಎಂದು ಇ.ಡಿ ಮನವಿ ಮಾಡಿತ್ತು. ಮದ್ಯ ನೀತಿಗೆ ಸಂಬಂಧಿಸಿದ ಸಂಪೂರ್ಣ ಹಗರಣವು ಸಿಸೋಡಿಯಾ ಮತ್ತು ಇತರರು ರೂಪಿಸಿದ್ದ ಕರಡು ನೀತಿಯೊಂದಿಗೆ ಪ್ರಾರಂಭವಾಗಿತ್ತು.

ಮದ್ಯ ನೀತಿಯಲ್ಲಿ ತೆಲಂಗಾಣ ಎಂಎಲ್​ಸಿ ಕೆ ಕವಿತಾ ಹಾಗೂ ಇತರರು ಶಾಮೀಲಾಗಿರುವ ಬಗ್ಗೆಯೂ ಇ.ಡಿ ಆರೋಪಿಸಿದ್ದು, ಅಬಕಾರಿ ಇಲಾಖೆಯಿಂದ ಇಂಡೋಸ್ಪಿಟಿಟ್ಸ್ ಮದ್ಯದ ಕಂಪನಿ ಕಡತವನ್ನು ಸಿಸೋಡಿಯಾ ಖುದ್ದಾಗಿ ಪಡೆದುಕೊಂಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ತಿಳಿಸಿತ್ತು.

ಇದನ್ನೂ ಓದಿ: Manish Sisodia: ಜಾಮೀನು ವಿಚಾರಣೆಗೆ ಮುನ್ನ ಮನೀಶ್ ಸಿಸೋಡಿಯಾ ಬಂಧಿಸಿದ ಜಾರಿ ನಿರ್ದೇಶನಾಲಯ

ಸಿಸೋಡಿಯಾ ಅವರನ್ನು ಸಿಬಿಐ ಫೆಬ್ರವರಿ 26 ರಂದು ಬಂಧಿಸಿತ್ತು. ನಂತರ ಅವರು ಸಿಬಿಐ ವಶದಲ್ಲೇ ಇದ್ದರು. ಸಿಬಿಐ ಕಸ್ಟಡಿ ಮುಗಿದ ನಂತರ ಅವರನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಈ ಮಧ್ಯೆ ಅವರು ಸಿಬಿಐ ಬಂಧಿಸಿರುವ ಪ್ರಕರಣದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಇ.ಡಿ ಅವರನ್ನು ಬಂಧಿಸಿದೆ.

ಮನೀಶ್ ಸಿಸೋಡಿಯಾ ಅವರನ್ನು ಮೊದಲು ಸಿಬಿಐ ಬಂಧಿಸಿತ್ತು. ಸಿಬಿಐಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ, ದಾಳಿಯಲ್ಲಿ ಹಣವೂ ಸಿಕ್ಕಿಲ್ಲ. ಹೀಗಾಗಿ ಇಡಿ ಅವರನ್ನು ಬಂಧಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಆರೋಪಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ