ದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಚುನಾವಣೆ ರಂಗು ಜೋರಾಗಿದೆ. ಮಾಲಿನ್ಯ ನಿಯಂತ್ರಣ ಕೂಡ ಈ ಚುನಾವಣಾ ವಿಷಯವಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಬಿಜೆಪಿ ಸಂಸದ ಗೌತಮ್ ಗಂಭೀರ್ ಮಾಡಿರುವ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗ್ತಿದೆ. ಹಾಗಾದ್ರೆ ಗಂಭೀರ್ ಮಾಡಿರುವ ಕಾರ್ಯವಾದರೂ ಏನು..?
ದೆಹಲಿ ತುಂಬಾ ವಿಷಗಾಳಿ ತುಂಬಿ ಹೋಗಿದೆ. ಎಲ್ಲಿ ನೋಡಿದ್ರೂ ಜನರಿಗೆ ಬರೀ ಹೊಗೆ ಕಾಣಿಸುತ್ತಿದೆ. ಹೀಗಾಗಿ ಜನ ತತ್ತರಿಸಿ ಹೋಗಿದ್ದು, ದೆಹಲಿ ತೊರೆಯುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೇ ಇದೀಗ ದೆಹಲಿ ವಿಧಾನಸಭಾ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ಇಂತಹ ಹೊತ್ತಲ್ಲೇ ಗೌತಮ್ ಗಂಭೀರ್ ಮಹತ್ವದ ಕೆಲಸ ಮಾಡಿದ್ದು, ಎಲ್ಲರ ಪ್ರಶಂಸೆಗೂ ಪಾತ್ರವಾಗುತ್ತಿದೆ.
ಮಾಲಿನ್ಯ ನಿಯಂತ್ರಣಕ್ಕೆ ಟವರ್ ಸ್ಥಾಪನೆ!
ಇನ್ನು ಈ ಬಾರಿ ಕೇಜ್ರಿವಾಲ್ರನ್ನ ಕಟ್ಟಿಹಾಕಲು ವಿಪಕ್ಷಗಳು ದೆಹಲಿಯಲ್ಲಿ ರಣತಂತ್ರ ಹೆಣೆಯುತ್ತಿವೆ. ಹೀಗಾಗಿ ನಾನಾ ವಿಚಾರಗಳನ್ನ ಕೈಗೆತ್ತಿಗೊಂಡಿದ್ದು, ಇದರಲ್ಲಿ ಮಾಲಿನ್ಯ ನಿಯಂತ್ರಣವೂ ಒಂದು. ದೆಹಲಿಯಲ್ಲಿ ತಮ್ಮ ಪಕ್ಷ ಗೆದ್ದರೆ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡ್ತಿದ್ದಾರೆ. ಇದೆಲ್ಲದಕಿಂತಲೂ ಮೊದ್ಲೇ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಮಹತ್ವದ ಕೆಲಸವೊಂದನ್ನ ಮಾಡಿದ್ದಾರೆ. ಇದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ಲಜಪತ್ ನಗರದ ಕೇಂದ್ರ ಮಾರುಕಟ್ಟೆಯಲ್ಲಿ ದೇಶದ ಮೊದಲ ಸ್ಮಾಗ್ ಟವರ್ ಸ್ಥಾಪಿಸಲಾಗಿದೆ. ಈ ಕೆಲಸಕ್ಕೆ ಎಲ್ಲೆಡೆಯಿಂದ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.
ಅಂದಹಾಗೆ ಈ ಸ್ಮಾಗ್ ಟವರ್ ಅಡಿ 20 ಎತ್ತರವಿದ್ದು, ಸುಮಾರು 750 ಅಡಿ ವ್ಯಾಪ್ತಿಯಲ್ಲಿ ಮಾಲಿನ್ಯವನ್ನ ಹೀರಿ ಬಿಸಾಡುತ್ತದೆ. ಪ್ರತಿತಿಂಗಳು ಇದರ ನಿರ್ವಹಣೆಗೆ ಅಂತಾ 30 ಸಾವಿರ ರೂಪಾಯಿ ಅಗತ್ಯವಿದ್ದು ಮಾಲಿನ್ಯಗೊಂಡಿರುವ ಗಾಳಿಯನ್ನ ಕ್ಷಣಮಾತ್ರದಲ್ಲಿ ಶುದ್ಧಗೊಳಿಸುತ್ತದೆ. ಅದರಲ್ಲೂ ಜನಸಂದಣಿ ಹೆಚ್ಚಾಗಿರುವ ಸ್ಥಳದಲ್ಲೇ ಸ್ಮಾಗ್ ಟವರ್ ಸ್ಥಾಪನೆ ಮಾಡಿರೋದು ಸಾಮಾನ್ಯರಿಗೆ ತುಂಬಾನೆ ಅನುಕೂಲಕರವಾಗಲಿದೆ.
ಒಟ್ನಲ್ಲಿ ಈ ಬಾರಿ ದೆಹಲಿ ಗದ್ದುಗೆಗೆ ದೊಡ್ಡ ಗುದ್ದಾಟವೇ ನಡೆಯುವ ಸಾಧ್ಯತೆ ಇದೆ. ಅದರ ಮಧ್ಯೆ ಗಂಭೀರ್ ತಮ್ಮ ಟ್ರಸ್ಟ್ ಸಹಾಯದಿಂದ 7 ಲಕ್ಷ ವೆಚ್ಚದಲ್ಲಿ ಗಾಳಿ ಶುದ್ಧೀಕರಣಕ್ಕೆ ಮುಂದಾಗಿರೋದು ಪ್ರಶಂಸೆಗೆ ಕಾರಣವಾಗಿದೆ. ಆದರೆ ಇದು ಮುಂದೆ ರಾಜಕೀಯವಾಗಿಯೂ ಲಾಭ ಕೊಡುತ್ತಾ, ಇಲ್ಲವಾ ಅನ್ನೋದನ್ನ ಕಾದು ನೋಡ್ಬೇಕು.
Published On - 2:55 pm, Fri, 17 January 20