ದೆಹಲಿ: ರಾಜ್ಯದಲ್ಲಿ ಕೊರೊನಾದಿಂದ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು (ಮೇ 18) ಘೋಷಣೆ ಮಾಡಿದ್ದಾರೆ. ದೆಹಲಿಯಲ್ಲಿ ಕೊವಿಡ್-19 ಸೋಂಕಿನಿಂದ ಮೃತರಾದವರ ಕುಟುಂಬಕ್ಕೆ ತಲಾ ₹50 ಸಾವಿರ ನೀಡುವುದಾಗಿ ಕೇಜ್ರಿವಾಲ್ ಘೋಷಿಸಿದ್ದಾರೆ. ಜೊತೆಗೆ, ಕೊರೊನಾ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ದೆಹಲಿ ಸರ್ಕಾರದಿಂದ ನಾಲ್ಕು ಪ್ರಮುಖ ತೀರ್ಮಾನ ಕೈಗೊಳ್ಳಲಾಗಿದೆ.
ಕೊರೊನಾದಿಂದ ಮೃತರ ಕುಟುಂಬಕ್ಕೆ ಮಾಸಿಕ ₹2500 ನೀಡುವುದಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿ 72 ಲಕ್ಷ ಜನರಿಗೆ ಹತ್ತು ಕೆಜಿ ಆಹಾರ ಧಾನ್ಯ ನೀಡುವುದಾಗಿ ತಿಳಿಸಿದ್ದಾರೆ. ರೇಷನ್ ಕಾರ್ಡ್ ಇಲ್ಲದವರಿಗೂ ಉಚಿತ ರೇಷನ್ ನೀಡಿಕೆ ಬಗ್ಗೆ ತಿಳಿಸಲಾಗಿದೆ. ಅನಾಥ ಮಕ್ಕಳಿಗೆ 25 ವರ್ಷದವರೆಗೆ ಮಾಸಿಕ ₹2,500 ನೀಡುವುದಾಗಿ ಘೋಷಿಸಲಾಗಿದೆ. ಈ ಯೋಜನೆಗಳ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ.
ಕೊರೊನಾ ಮೂರನೇ ಅಲೆ ಬಗ್ಗೆ ಕೇಜ್ರಿವಾಲ್ ಟ್ವೀಟ್
ಸಿಂಗಾಪುರದಲ್ಲಿ ಪತ್ತೆಯಾಗಿರುವ ರೂಪಾಂತರಿ ಕೊರೊನಾ ವೈರಾಣು ಭಾರತದ ಮೂರನೇ ಅಲೆಗೆ ಕಾರಣವಾಗಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು (ಮೇ 18) ತಿಳಿಸಿದ್ದಾರೆ. ಹೊಸ ಸ್ವರೂಪದ ಕೊವಿಡ್-19 ವೈರಾಣು ಮಕ್ಕಳಿಗೆ ಅತಿ ಕೆಟ್ಟ ಪರಿಣಾಮವನ್ನು ಉಂಟುಮಾಡಬಹುದು ಎಂದು ಕೇಜ್ರಿವಾಲ್ ಅಂದಾಜಿಸಿದ್ದಾರೆ. ಹಾಗಾಗಿ, ಸಿಂಗಾಪುರದೊಂದಿಗಿನ ಸೇವೆಗಳನ್ನು ಕೂಡಲೇ ಸ್ಥಗಿತಗೊಳಿಸಿ, ಮಕ್ಕಳಿಗೆ ಲಸಿಕೆ ನೀಡುವಂತೆ ಮೋದಿ ಸರ್ಕಾರವನ್ನು ಕೇಳಿಕೊಂಡಿದ್ದಾರೆ.
ಸಿಂಗಾಪುರದ ಕಂಡುಬಂದಿರುವ ಕೊರೊನಾ ವೈರಾಣು ಮಕ್ಕಳಿಗೆ ಅಪಾರ ಹಾನಿ ಉಂಟುಮಾಡಬಹುದು ಎನ್ನಲಾಗುತ್ತಿದೆ. ಅದೇ ವೈರಾಣು ಕೊರೊನಾ ಮೂರನೇ ಅಲೆಯಾಗಿ ಕಂಡುಬರಬಹುದು. ಸಿಂಗಾಪುರದೊಂದಿಗಿನ ವಿಮಾನಯಾನವನ್ನು ಸ್ಥಗಿತಗೊಳಿಸಬೇಕು. ಮಕ್ಕಳಿಗೆ ಲಸಿಕೆ ಅಭಿಯಾನವನ್ನು ಆರಂಭಿಸಬೇಕು ಎಂದು ಕೇಜ್ರಿವಾಲ್ ಟ್ವೀಟ್ ಮಾಡಿ ಕೇಳಿಕೊಂಡಿದ್ದಾರೆ.
ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಳೆದ ಕೆಲವು ದಿನಗಳಿಂದ ಇಳಿಕೆಯಾಗಿದೆ. ಕಳೆದ ತಿಂಗಳು ಪ್ರತಿನಿತ್ಯ ದಾಖಲಾಗುತ್ತಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ 28,000ದ ವರೆಗೆ ಸಾಗಿತ್ತು. ಈಗ ಪ್ರತಿನಿತ್ಯ ಕಂಡುಬರುತ್ತಿರುವ ಪ್ರಕರಣಗಳ ಸಂಖ್ಯೆ 5,000ದಷ್ಟು ಮಾತ್ರ ಇದೆ.
ಇದನ್ನೂ ಓದಿ: ಸಿಂಗಾಪುರದಲ್ಲಿ ಪತ್ತೆಯಾದ ಕೊರೊನಾ ವೈರಾಣು ಭಾರತದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು: ಅರವಿಂದ್ ಕೇಜ್ರಿವಾಲ್
Published On - 7:06 pm, Tue, 18 May 21