Narada Bribery Case ಸುವೇಂದು ಅಧಿಕಾರಿ ವಿರುದ್ಧ ತನಿಖೆ ನಡೆಸಲು ಲೋಕಸಭಾ ಸ್ಪೀಕರ್ ಅನುಮತಿಗಾಗಿ ಕಾಯುತ್ತಿದ್ದೇವೆ: ಸಿಬಿಐ
ಕುಟುಕು ಕಾರ್ಯಾಚರಣೆ ನಡೆಸಿದಾಗ ಟಿಎಂಸಿ ಸಂಸದರಾಗಿದ್ದ ಸುವೇಂದು ಅಧಿಕಾರಿ, ಸೌಗತಾ ರಾಯ್, ಪ್ರಸೂನ್ ಬ್ಯಾನರ್ಜಿ ಮತ್ತು ಕಾಕಲಿ ಘೋಷ್ ದಸ್ತಿದಾರ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ ಲೋಕಸಭಾ ಸ್ಪೀಕರ್ ಅನುಮತಿ ಕೋರಿದೆ ಎಂದು ಸಿಬಿಐ ಅಧಿಕಾರಿ ಹೇಳಿದ್ದಾರೆ.
ದೆಹಲಿ: ನಾರದ ಲಂಚ ಪ್ರಕರಣದಲ್ಲಿ ನಾಲ್ವರು ರಾಜಕೀಯ ಮುಖಂಡರನ್ನು ವಿಚಾರಣೆಗೆ ಒಳಪಡಿಸಲು ಲೋಕಸಭಾ ಸ್ಪೀಕರ್ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಸಿಬಿಐ ಹೇಳಿದೆ. ಪ್ರಸ್ತುತ ಪ್ರಕರಣದಲ್ಲಿ ಸಿಬಿಐ ನಾಲ್ವರು ಟಿಎಂಸಿ ಮುಖಂಡರನ್ನು ಸೋಮವಾರ ಬಂಧಿಸಿತ್ತು. ಏತನ್ಮಧ್ಯೆ ಬಿಜೆಪಿಯ ಸುವೇಂದು ಅಧಿಕಾರಿಯನ್ನು ಈ ಪ್ರಕರಣದಲ್ಲಿ ಯಾಕೆ ಬಂಧಿಸಿಲ್ಲ ಎಂಬ ಪ್ರಶ್ನೆ ಎದ್ದಿತ್ತು. ನಾರದಾ ಟೇಪ್ ಬಹಿರಂಗಗೊಂಡಾಗ ಸುವೇಂದು ಟಿಎಂಸಿ ಸಂಸದರಾಗಿದ್ದರು. ಕುಟುಕು ಕಾರ್ಯಾಚರಣೆಯ ತನಿಖೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಸೋಮವಾರ ಪಶ್ಚಿಮ ಬಂಗಾಳದ ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ,ಶಾಸಕ ಮದನ್ ಮಿತ್ರ ಮತ್ತು ಪಕ್ಷದ ಮಾಜಿ ಮುಖಂಡ ಸೋವನ್ ಚಟರ್ಜಿ ಅವರನ್ನು ಬಂಧಿಸಿತ್ತು.
ನಾಲ್ಕು ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ಜಗದೀಪ್ ಧನ್ಕರ್ ಇತ್ತೀಚೆಗೆ ಅನುಮತಿ ನೀಡಿದ್ದರು. ಅದರ ನಂತರ ಸಿಬಿಐ ಸಂಸ್ಥೆ ತನ್ನ ಚಾರ್ಜ್‌ಶೀಟ್ ಅನ್ನು ಅಂತಿಮಗೊಳಿಸಿ ಅವರನ್ನು ಬಂಧಿಸಲು ಮುಂದಾಯಿತು.
ಕುಟುಕು ಕಾರ್ಯಾಚರಣೆ ನಡೆಸಿದಾಗ ಟಿಎಂಸಿ ಸಂಸದರಾಗಿದ್ದ ಸುವೇಂದು ಅಧಿಕಾರಿ, ಸೌಗತಾ ರಾಯ್, ಪ್ರಸೂನ್ ಬ್ಯಾನರ್ಜಿ ಮತ್ತು ಕಾಕಲಿ ಘೋಷ್ ದಸ್ತಿದಾರ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ ಲೋಕಸಭಾ ಸ್ಪೀಕರ್ ಅನುಮತಿ ಕೋರಿದೆ ಎಂದು ಸಿಬಿಐ ಅಧಿಕಾರಿ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. “ಈ ವಿಷಯದಲ್ಲಿ ನಮಗೆ ಇನ್ನೂ ಅನುಮತಿ ಸಿಕ್ಕಿಲ್ಲ”. ಅದೇ ವೇಳೆ ಟಿಎಂಸಿಯನ್ನು ತೊರೆದು 2017 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಮತ್ತೊಬ್ಬ ಪ್ರಭಾವಿ ರಾಜಕಾರಣಿ ಮುಕುಲ್ ರಾಯ್ ಅವರ ಹೆಸರು ಈ ಪಟ್ಟಿಯಲ್ಲಿ ಇಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಸೋಮವಾರ ಟಿಎಂಸಿ ನಾಯಕರ ಬಂಧನದ ನಂತರ ಪ್ರತಿಕ್ರಿಯಿಸಿದ ಟಿಎಂಸಿ ವಕ್ತಾರ ಕುನಾಲ್ ಘೋಷ್, ಬಿಜೆಪಿಗೆ ಸೇರ್ಪಡೆಯಾದ ಕಾರಣ ಅಧಿಕಾರ ಮತ್ತು ರಾಯ್ ಅವರನ್ನು ಸಿಬಿಐ ಕೈ ಬಿಟ್ಟಿದೆ ಎಂದು ಹೇಳಿಕೊಂಡಿದ್ದರು. ಸುವೇಂದು ಮತ್ತು ಮುಕುಲ್ ಅವರನ್ನು ಇದರಿಂದ ದೂರವಿಡಲಾಗಿದೆ ಎಂಬುದು ಸ್ಪಷ್ಟವಾಗಿದೆ.ಏಕೆಂದರೆ ಅವರು ಈಗ ಬಿಜೆಪಿ ಸದಸ್ಯರಾಗಿದ್ದಾರೆ. ಆದಾಗ್ಯೂ, ನಾವು ನ್ಯಾಯಾಂಗದಲ್ಲಿ ನಂಬಿಕೆ ಹೊಂದಿದ್ದೇವೆ ಮತ್ತು ಸತ್ಯವು ಶೀಘ್ರದಲ್ಲೇ ಹೊರಬರುತ್ತದೆ ಎಂದು ಘೋಷ್ ಪ್ರತಿಪಾದಿಸಿದ್ದರು.
ಘೋಷ್ ಮಾತು ಬೆಂಬಲಿಸಿದ ಮತ್ತೊಬ್ಬ ಟಿಎಂಸಿ ಶಾಸಕ ತಪಸ್ ರಾಯ್, ಕೇಂದ್ರದ ಬಿಜೆಪಿ ಸರ್ಕಾರವು ಇದೀಗ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
2014 ರಲ್ಲಿ ಕುಟುಕು ಕಾರ್ಯಾಚರಣೆ ನಡೆಸಿದ್ದಾಗಿ ಹೇಳಿಕೊಂಡಿದ್ದ ನಾರದ ನ್ಯೂಸ್ ಪೋರ್ಟಲ್ ಸಂಪಾದಕ ಮ್ಯಾಥ್ಯೂ ಸ್ಯಾಮುಯೆಲ್, ಅಧಿಕಾರಿಯ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದರು. ತನಿಖೆ ನ್ಯಾಯಯುತವಾಗಿರಬೇಕು ಎಂದು ನಾನು ನಂಬುತ್ತೇನೆ. ನಾವು ಭ್ರಷ್ಟಾಚಾರದ ವಿರುದ್ಧ ಸಾಗಬೇಕು. ನಾವು ಅದನ್ನು ಎದುರಿಸಬೇಕು ಮತ್ತು ಸವಾಲು ಹಾಕಬೇಕು” ಎಂದು ಸ್ಯಾಮುಯೆಲ್ ಹೇಳಿದ್ದಾರೆ.
ಲೆಫ್ಟ್ ಫ್ರಂಟ್ ಅಧ್ಯಕ್ಷ ಬಿಮನ್ ಬೋಸ್ ಮತ್ತು ಇತರರು ಇದೇ ರೀತಿಯ ಪ್ರಶ್ನೆಗಳನ್ನು ಎತ್ತಿದ್ದಾರೆ. ಬಂಗಾಳದಲ್ಲಿ ಕೊವಿಡ್ 19 ಉಲ್ಬಣವಾಗುತ್ತಿರುವ ಹೊತ್ತಲ್ಲಿ ಸಿಬಿಐ ಕ್ರಮವು “ಅತ್ಯಂತ ದುರದೃಷ್ಟಕರ” ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ ಹೇಳಿದ್ದಾರೆ.
ಕಲ್ಕತ್ತಾ ಹೈಕೋರ್ಟ್ 2017 ರ ಮಾರ್ಚ್ ತಿಂಗಳಲ್ಲಿ ನಾರದ ಸ್ಟಿಂಗ್ ಕಾರ್ಯಾಚರಣೆಯ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿತ್ತು. ಬಂಧನಕ್ಕೊಳಗಾದ ನಾಲ್ವರು ಮತ್ತು ಐಪಿಎಸ್ ಅಧಿಕಾರಿ ಸೇರಿದಂತೆ 12 ಟಿಎಂಸಿ ನಾಯಕರ ವಿರುದ್ಧ ಸಿಬಿಐ ಪ್ರಕರಣಗಳನ್ನು ದಾಖಲಿಸಿದೆ. ಆರೋಪಿಗಳಲ್ಲಿ ಒಬ್ಬರು, ಲೋಕಸಭೆಯ ಮಾಜಿ ಸಂಸದ ಸುಲ್ತಾನ್ ಅಹ್ಮದ್ ಅವರು 2017 ರ ಸೆಪ್ಟೆಂಬರ್‌ನಲ್ಲಿ ನಿಧನರಾಗಿದ್ದಾರೆ.
Narada Bribery Case: ಟಿಎಂಸಿ ನಾಯಕರಿಗೆ ವಿಶೇಷ ಸಿಬಿಐ ಕೋರ್ಟ್ ನೀಡಿದ್ದ ಜಾಮೀನಿಗೆ ತಡೆ
Published On - 6:25 pm, Tue, 18 May 21