ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್
ಆರೋಪಿಗಳು ಹೊಂದಿರುವ ರಾಜಕೀಯ ಸ್ಥಾನಮಾನದ ಕಾರಣದಿಂದ ಸಾಕ್ಷಿಗಳನ್ನು ತಿರುಚುವ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ
ದೆಹಲಿ ಅಬಕಾರಿ ನೀತಿಗೆ (Delhi Excise Policy)ಸಂಬಂಧಿಸಿದ ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ (Delhi High Court) ಸೋಮವಾರ ತಿರಸ್ಕರಿಸಿದೆ. ಈ ಸಂಬಂಧ ಆಮ್ ಆದ್ಮಿ ಪಕ್ಷದ ಮಾಜಿ ಸಂವಹನ ಉಸ್ತುವಾರಿ ವಿಜಯ್ ನಾಯರ್, ಅಭಿಷೇಕ್ ಬೋನಪಲ್ಲಿ (ಹೈದರಾಬಾದ್ ಮೂಲದ ಉದ್ಯಮಿ), ಬಿನೋಯ್ ಬಾಬು ಬಿನೋಯ್ (ಮದ್ಯ ಕಂಪನಿ ಎಂ/ಎಸ್ ಪೆರ್ನೋಡ್ ರಿಕಾರ್ಡ್ ಮ್ಯಾನೇಜರ್) ಜಾಮೀನು ಅರ್ಜಿ ಬಗ್ಗೆಯೂ ನ್ಯಾಯಾಲಯ ಆದೇಶ ನೀಡಿದೆ.
ಮೇ 6 ರಂದು ಇಡಿ ಮತ್ತೊಂದು ಆರೋಪಪಟ್ಟಿ ಸಲ್ಲಿಸಿದ ನಂತರ ಇದು ಸಿಸೋಡಿಯಾ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಿದೆ. ಇದೇ ಮೊದಲ ಬಾರಿಗೆ ತನಿಖಾ ಸಂಸ್ಥೆ ತನ್ನ ಆರೋಪಪಟ್ಟಿಯಲ್ಲಿ ಸಿಸೋಡಿಯಾ ಅವರನ್ನು ಹೆಸರಿಸಿದೆ.
2002ರ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾಮೀನು ಮಂಜೂರು ಮಾಡಲು ಅವಳಿ ಷರತ್ತುಗಳನ್ನು ಪೂರೈಸಲು ಸಿಸೋಡಿಯಾ ವಿಫಲರಾಗಿದ್ದಾರೆ ಎಂದು ನ್ಯಾಯಾಲಯವು ಗಮನಿಸಿದೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವ ಸಿಸೋಡಿಯಾ ಅವರನ್ನು ಫೆಬ್ರವರಿ 26 ರಂದು ಸಿಬಿಐ ಮೊದಲ ಬಾರಿಗೆ ಹಗರಣದಲ್ಲಿ ಬಂಧಿಸಿದೆ.
ಮೇ 30 ರಂದು ಸಿಬಿಐ ಪ್ರಕರಣದಲ್ಲಿ ಈಗಾಗಲೇ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟ: ಟಿಎಂಸಿ ಕಾರ್ಯಕರ್ತ ಸಾವು, ಮತ್ತೋರ್ವನಿಗೆ ಗಾಯ
ಇಡಿ ದಾಖಲಿಸಿದ ಪ್ರಕರಣದಲ್ಲಿ ಅವರನ್ನು ಮಾರ್ಚ್ 9 ರಂದು ಬಂಧಿಸಲಾಗಿದ್ದು, ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ದೆಹಲಿ ಸರ್ಕಾರವು ನವೆಂಬರ್ 17, 2021 ರಂದು ನೀತಿಯನ್ನು ಜಾರಿಗೆ ತಂದಿತು. ಆದರೆ ಭ್ರಷ್ಟಾಚಾರದ ಆರೋಪಗಳ ನಡುವೆ ಸೆಪ್ಟೆಂಬರ್ 2022 ರ ಕೊನೆಯಲ್ಲಿ ಅದನ್ನು ರದ್ದುಗೊಳಿಸಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Mon, 3 July 23