ನವದೆಹಲಿ: ಅಲೋಪತಿ ವೈದ್ಯವನ್ನು ಸ್ಟುಪಿಡ್ ಅಂದಿದ್ದ ಯೋಗ ಗುರು, ಪತಂಜಲಿ ಬಾಬಾ ರಾಮದೇವ್ಗೆ ದೆಹಲಿ ಹೈಕೋರ್ಟ್ ಸಮನ್ಸ್ ನೀಡಿದೆ. ಪತಂಜಲಿಯ ಕೊರೊನಿಲ್ (Patanjali Coronil) ಔಷಧದ ವಿರುದ್ಧ ದೆಹಲಿ ವೈದ್ಯಕೀಯ ಒಕ್ಕೂಟ (Delhi Medical Association -DMA) ಸಲ್ಲಿಸಿದ್ದ ದೂರು ಅಂಗೀಕರಿಸಿದ ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಜೊತೆಗೆ ಮುಂದಿನ ವಿಚಾರಣೆ ಜುಲೈ 13ಕ್ಕೆ ನಿಗದಿಯಾಗಿದ್ದು, ಅಲ್ಲಿಯವರೆಗೂ ಪತಂಜಲಿಯ ಕೊರೊನಿಲ್ ಬಗ್ಗೆ ರಾಮದೇವ್ ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡದಂತೆ ಅವರ ವಕೀಲರ ಮೂಲಕ ಸೂಚನೆ ನೀಡಿದೆ.
ಪತಂಜಲಿಯ ಕೊರೊನಿಲ್ ಔಷಧವು ಕೊರೊನಾ ವೈರಸ್ ರೋಗಕ್ಕೆ (Covid-19) ರಾಮಬಾಣ ಅಂತೆಲ್ಲ ತಪ್ಪು ತಪ್ಪು ಮಾಹಿತಿ ನೀಡಿ, ಯೋಗ ಗುರು ರಾಮದೇವ್ ಪ್ರಚಾರ ಮಾಡುತ್ತಿದ್ದಾರೆ ಎಂದು ದೆಹಲಿ ವೈದ್ಯಕೀಯ ಒಕ್ಕೂಟ ತನ್ನ ದೂರಿನಲ್ಲಿ ಹೈಕೋರ್ಟ್ ಗಮನ ಸೆಳೆದಿದೆ.
ಯೋಗ ಗುರು ರಾಮದೇವ್ ಅಲೋಪತಿ ವೈದ್ಯವನ್ನು ಸ್ಟುಪಿಡ್ (stupid science) ಅಂದಿದ್ದಾರೆ. ಅಲ್ಲದೆ ಅಲೋಪತಿ ವೈದ್ಯರನ್ನು ಅವಹೇಳನ ಮಾಡುತ್ತಿದ್ದಾರೆ. ವಿಜ್ಞಾನ ಮತ್ತು ವೈದ್ಯರ ಬಗ್ಗೆ ಸಾರ್ವಜನಿಕವಾಗಿ ಹಾನಿಕಾರಕ ಮಾತುಗಳನ್ನಾಡುತ್ತಿದ್ದಾರೆ. ಹಾಗಾಗಿ ಇದು ವೈದ್ಯರ ನಾಗರಿಕ ಹಕ್ಕುಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಈ ದೂರು ದಾಖಲಿಸಿದ್ದೇವೆ ಎಂದು DMA ವಕೀಲ ರಾಜೀವ್ ದತ್ತಾ ತಿಳಿಸಿದ್ದಾರೆ.
ಇದಕ್ಕೂ ಮುನ್ನ ದೆಹಲಿ ವೈದ್ಯಕೀಯ ಒಕ್ಕೂಟವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೋವಿಡ್ ಸಾಂಕ್ರಾಮಿಕ ರೋಗದ ಕಾಲದಲ್ಲಿ ವೈದ್ಯಲೋಕ ಅಹಿರ್ನಿಷಿ ದುಡಿಯುತ್ತಿದೆ. ಈ ಉದಾತ್ತ ಸೇವೆಯ ವೇಳೆ ಅನೇಕ ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ವೈದ್ಯಲೋಕವನ್ನು ಅಪಮಾನಿಸುತ್ತಿರುವ ರಾಮದೇವ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿತ್ತು.
ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಇದಕ್ಕೆ ಪ್ರತಿಕ್ರಿಯೆಯಾಗಿ ರಾಮದೇವ್ ಗೆ ಪತ್ರ ಬರೆದು ತಮ್ಮ ಮಾತುಗಳು ನಿಜಕ್ಕೂ ದುರದೃಷ್ಟಕರ ಎಂದು ಬಣ್ಣಿಸಿದ್ದರು. ಆರೋಗ್ಯ ಸಚಿವ ಹರ್ಷ ವರ್ಧನ್ ಪತ್ರಕ್ಕೆ ಪ್ರತಿಕ್ರಿಯಿಸಿದ ರಾಮದೇವ್ ತಮ್ಮ ಮಾತುಗಳನ್ನು ವಾಪಸ್ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು.
(Delhi high court issues summons to baba Ramdev over Patanjali Coronil and his stupid science statement)
ಅಲೋಪಥಿಕ್ ವೈದ್ಯಕೀಯ ಪದ್ಧತಿಗೆ ಅಗೌರವ ತೋರಿದ ಆರೋಪ; ಬಾಬಾ ರಾಮ್ದೇವ್ ವಿರುದ್ಧ ಎಫ್ಐಆರ್
Published On - 4:45 pm, Thu, 3 June 21