ಕೊವಿಡ್ ಲಸಿಕೆಯ ಅಭಾವ, ಮೇ ತಿಂಗಳಲ್ಲಿ ಏರ್ ಇಂಡಿಯಾದ ಐವರು ಸೀನಿಯರ್ ಪೈಲಟ್ಗಳು ಸೋಂಕಿಗೆ ಬಲಿ
ಮೇ 4ರಂದು ಪೈಲಟ್ಗಳು ತಮಗೆ ಲಸಿಕೆ ಹಾಕಿಸದಿದ್ದರೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಬೆದರಿಕೆಯೊಡ್ಡಿದ ನಂತರ ಏರ್ ಇಂಡಿಯಾ ಸಂಸ್ಥೆಯು ಮೇ ತಿಂಗಳು ಅಂತ್ಯದೊಳಗೆ ಲಸಿಕಾ ಶಿಬಿರವನ್ನು ಆಯೋಜಿಸಿ ಪೈಲಟ್ ಮತ್ತು ಉಳಿದೆಲ್ಲ ಸಿಬ್ಬಂದಿ ವರ್ಗದವರಿಗೆ ಲಸಿಕೆ ಹಾಕಿಸುವುದಾಗಿ ಹೇಳಿತ್ತು.
ಏರ್ ಇಂಡಿಯಾದ ಪೈಲಟ್ಗಳು ತಮಗೆ, ಸಿಬ್ಬಂದಿ ವರ್ಗಕ್ಕೆ ಮತ್ತು ತಮ್ಮ ಕುಟುಂಬಗಳ ಸದಸ್ಯರಿಗೆ ಕೊವಿಡ್ ಲಸಿಕೆ ನೀಡಬೇಕು ಅಂತ ಅಗ್ರಹಿಸುತ್ತಿರವಂತೆಯೇ, ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಕನಿಷ್ಠ 5 ಪೈಲಟ್ಗಳು ಮೇ ತಿಂಗಳಲ್ಲಿ ಮಹಾಮಾರಿಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ. ಏರ್ ಇಂಡಿಯಾದ ಅಧಿಕೃತ ಮೂಲಗಳು ಮತ್ತು ಪೈಲಟ್ಗಳ ಒಕ್ಕೂಟದಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ನತದೃಷ್ಟ ಪೈಲಟ್ಗಳನ್ನು ಕ್ಯಾಪ್ಟನ್ ಪ್ರಸಾದ್ ಕರ್ಮಾಕರ್, ಕ್ಯಾಪ್ಟನ್ ಸಂದೀಪ್ ರಾಣಾ, ಕ್ಯಾಪ್ಟನ್ ಅಮಿತೇಷ್ ಪ್ರಸಾದ್, ಕ್ಯಾಪ್ಟನ್ ಜಿಪಿಎಸ್ ಗಿಲ್ ಮತ್ತು ಕ್ಯಾಪ್ಟನ್ ಹರ್ಷ್ ತಿವಾರಿ ಎಂದು ಗುರುತಿಸಲಾಗಿದೆ. ಮೇ 30ರಂದು ಸೋಂಕಿಗೆ ಬಲಿಯಾದ 37 ವರ್ಷ ವಯಸ್ಸಿನ ತಿವಾರಿ ಅವರು ಬೋಯಿಂಗ್ 777 ವಿಮಾನದ ಫರ್ಸ್ಟ್ ಆಫೀಸರ್ ಆಗಿದ್ದರು. ನಿಧನ ಹೊಂದಿರುವ ಪೈಲಟ್ಗಳೆಲ್ಲ ವಿಸ್ತೃತ ವಿನ್ಯಾಸದ ವಿಮಾನಗಳನ್ನು ಹಾರಿಸುತ್ತಿದ್ದರು ಮತ್ತು ವಂದೇ ಭಾರತ್ ಮಿಷನ್ನ ಭಾಗವಾಗಿದ್ದರು.
ಮೇ 4ರಂದು ಪೈಲಟ್ಗಳು ತಮಗೆ ಲಸಿಕೆ ಹಾಕಿಸದಿದ್ದರೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಬೆದರಿಕೆಯೊಡ್ಡಿದ ನಂತರ ಏರ್ ಇಂಡಿಯಾ ಸಂಸ್ಥೆಯು ಮೇ ತಿಂಗಳು ಅಂತ್ಯದೊಳಗೆ ಲಸಿಕಾ ಶಿಬಿರವನ್ನು ಆಯೋಜಿಸಿ ಪೈಲಟ್ ಮತ್ತು ಉಳಿದೆಲ್ಲ ಸಿಬ್ಬಂದಿ ವರ್ಗದವರಿಗೆ ಲಸಿಕೆ ಹಾಕಿಸುವುದಾಗಿ ಹೇಳಿತ್ತು. ಆದರೆ ಲಸಿಕೆಯ ಅಭಾವದಿಂದಾಗಿ ಶಿಬಿರ ಮೂರು ಬಾರಿ ರದ್ದಾಗಿ ಅಂತಿಮವಾಗಿ ಮೇ 15 ರಂದು ಅರಂಭಗೊಂಡಿತು. ಅದಕ್ಕೂ ಮುನ್ನ ಏರ್ ಇಂಡಿಯಾ ಸಂಸ್ಥೆಯು 45ಕ್ಕಿಂತ ಜಾಸ್ತಿ ವಯಸ್ಸಿನ ಉದ್ಯೋಗಿಗಳಿಗೆ ಲಸಿಕಾ ಶಿಬಿರವನ್ನು ಆಯೋಜಿಸಿತ್ತು.
ಏರ್ ಇಂಡಿಯಾದ ನಿರ್ದೇಶಕ (ಆಪರೇಷನ್ಸ್) ಕ್ಯಾಪ್ಟನ್ ಆರ್ ಎಸ್ ಸಂಧು ಅವರಿಗೆ ಭಾರತೀಯ ವಾಣಿಜ್ಯ ಪೈಲಟ್ಗಳ ಸಂಸ್ಥೆ (ಐಸಿಪಿಎ) ಮಂಗಳವಾರದಂದು ಬರೆದಿರುವ ಪತ್ರದಲ್ಲಿ, ‘ಪೈಲಟ್ಗಳನ್ನು ಗಾಬರಿ ಹುಟ್ಟಿಸುವ ಅಂತರದಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ, ಟೆಸ್ಟ್ಗಳಿಗೆ ಒಳಪಡಿಸಲಾಗುತ್ತಿದೆ ಮತ್ತು ಕೆಲವರು ಕೋವಿಡ್-19 ವ್ಯಾಧಿಗೆ ಬಲಿಯಾಗುತ್ತಿದ್ದಾರೆ. ಅವರ ಕುಟುಂಬದ ಸದಸ್ಯರು ಸಹ ಸೋಂಕಿನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಂದೇ ಭಾರತ್ ಮಿಷನ್ ಅಂಗವಾಗಿ ಕಾರ್ಯ ನಿರ್ವಹಿಸಿ ಮನೆಗಳಿಗೆ ತೆರಳುವಾಗ ನಮ್ಮಿಂದಾಗಿ ಕುಟುಂಬದ ಸದಸ್ಯರಿಗೆ ಸೋಂಕು ಹರಡುವ ಭೀತಿ ನಮ್ಮನ್ನು ಆವರಿಸಿರುತ್ತದೆ. ಇಂಥ ಹಿನ್ನಲೆಯಲ್ಲಿ ಕಾರ್ಯ ನಿರ್ವಹಿಸಲು ಮತ್ತು ಕುಟುಂಬಗಳನ್ನು ಸುರಕ್ಷಿತವಾಗಿಡಲು ನಮಗೆ ಸಂಸ್ಥೆಯ ಬೆಂಬಲ ಬೇಕಿದೆ’ ಅಂತ ಹೇಳಲಾಗಿದೆ.
ಏಪ್ರಿಲ್ 14 ರಂದು ಐಸಿಪಿಎ, ನಾಗರಿಕ ವಿಮಾನಯಾನ ಮಹಾ ನಿರ್ದೇಶಕರಿಗೆ ಐಸಿಪಿಎ ಒಂದು ಪತ್ರ ಬರೆದು ವಿಮಾನಯಾನಕ್ಕೆ ಮೊದಲು ಮತ್ತು ನಂತರ ಕಡ್ಡಾಯವಾಗಿರುವ ಬ್ರೀದ್-ಅನಲೈಸರ್ ಟೆಸ್ಟ್ಗಳನ್ನು ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಬೇಕು ಎಂದು ಕೋರಿತ್ತು. ಏಪ್ರಿಲ್ 27 ರಂದು ಪೈಲಟ್ಗಳ ಕೋರಿಕೆಗೆ ಪ್ರತಿಕ್ರಿಯಿಸಿದ ಡಿಜಿಸಿಎ. ವಿಮಾನದ ಕ್ರ್ಯೂ ಮತ್ತು ಕ್ಯಾಬಿನ್ ಕ್ರ್ಯೂ ಸದಸ್ಯರ ಪೈಕಿ ಶೇಕಡ 10 ರಷ್ಟು ಸಿಬ್ಬಂದಿಗೆ ಯಾವುದೇ ನಿರ್ದಿಷ್ಟವಾದ ಮಾನದಂಡವಿಲ್ಲದೆ ವಿಮಾನಯಾನಕ್ಕೆ ಮೊದಲು ಬ್ರೀದ್-ಅನಲೈಸರ್ ಟೆಸ್ಟ್ಗಳಿಗೆ ಗುರಿಪಡಿಸಲಾಗುವುದು ಎಂದು ಆದೇಶ ಹೊರಡಿಸಿತ್ತು
ಕಳೆದ ಮಾರ್ಚ್ನಲ್ಲಿ ಕೊವಿಡ್ ಸೋಂಕಿನ ಮೊದಲ ಅಲೆ ತಲೆದೋರಿದಾಗ ಎಲ್ಲ ಬಗೆಯ ಬ್ರೀದ್-ಅನಲೈಸರ್ ಟೆಸ್ಟ್ಗಳನ್ನು ವಜಾ ಮಾಡಲಾಗಿತ್ತಾದರೂ ಸೋಂಕಿನ ತೀವ್ರತೆ ಕಡಮೆಯಾಗಲಾರಂಭಿಸಿದ ನಂತರ ಸೆಪ್ಟಂಬರ್ನಲ್ಲಿ ಅದನ್ನು ಪುನರಾರಂಭಿಸಲಾಗಿತ್ತು. ಲೋಕಸಭೆಯಲ್ಲಿ ಈ ವರ್ಷ ಫೆಬ್ರವರಿಯಲ್ಲಿ ಲಿಖಿತ ಉತ್ತರವೊಂದಕ್ಕೆ ಪ್ರತಿಕ್ರಿಯಿಸಿದ ನಾಗರಿಕ ವಿಮಾನ ಸಚಿವ ಹರದೀಪ್ ಸಿಂಗ್ ಪುರಿ, ಫೆಬ್ರವರಿ 1 ವರಗೆ ಏರ್ ಇಂಡಿಯಾದ 1,995 ಉದ್ಯೋಗಿಗಳು ಸೋಂಕಿನಿಂದ ಬಾಧಿತರಾಗಿದ್ದರು ಮತ್ತು ಅವರಲ್ಲಿ 583 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕ್ರ್ಯೂ ಸಿಬ್ಬಂದಿಗಳಲ್ಲಿ ಸಾವುನೋವು ಸಂಭವಿಸಿಲ್ಲ ಆದರೆ ಗ್ರೌಂಡ್ ಸಿಬ್ಬಂದಿಯ ಪೈಕಿ 19 ಜನ ಸೋಂಕಿಗೆ ಬಲಿಯಾದರು ಅಂತ ಹೇಳಿದ್ದರು. ಸತ್ತ ಉದ್ಯೋಗಿಗಳ ಕುಟುಂಬಗಳಿಗೆ ಆರ್ಥಿಕ ನೆರವಿನ ರೂಪದಲ್ಲಿ ತಲಾ ₹ 10 ಲಕ್ಷ ನೀಡಲಾಗಿದೆ ಎಂದು ಹೇಳಿದ್ದರು.
ಮಾಧ್ಯಮವೊಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಏರ್ ಇಂಡಿಯಾದ ಬಾತ್ಮೀದಾರರೊಬ್ಬರು, ‘ಏರ್ ಇಂಡಿಯಾ ವಿಮಾನದ ಕ್ರ್ಯೂ ಮತ್ತು ಕ್ಯಾಬಿನ್ ಕ್ರ್ಯೂ, ಮುಂಚೂಣಿಯ ಗ್ರೌಂಡ್ ಸಿಬ್ಬಂದಿ, ಮತ್ತು ಕಚೇರಿಗಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಸುರಕ್ಷತೆ ಮತ್ತು ರಕ್ಷಣೆಗೆ ಪ್ರಥಮ ಆಧ್ಯತೆಯನ್ನು ನೀಡುತ್ತದೆ. ವಿಮಾನಯಾನಕ್ಕಿಂತ ಮೊದಲು ಮತ್ತು ನಂತರ ಅವರ ಟೆಸ್ಟ್ಗಳನ್ನು ಮಾಡಲಾಗುತ್ತದೆ ಮತ್ತು ಅರೋಗ್ಯ ಕುರಿತ ಅವರ ಸಮಸ್ಯೆಗಳಿಗೆ ನಿರಂತರ ನೆರವು ಒದಗಿಸಲಾಗುತ್ತಿದೆ. ಭಾರತ ಸರ್ಕಾರವು ಲಸಿಕಾ ಆಭಿಯಾನವನ್ನು ಆರಂಭಿಸಿದ ನಂತರ ನಮ್ಮ ಅರ್ಹ ಉದ್ಯೋಗಿಗಳಿಗೆ ಲಸಿಕೆ ಕೊಡಿಸಲಾಗುತ್ತಿದೆ ಮತ್ತ ಅದಕ್ಕಾಗಿ ದೆಹಲಿಯಲ್ಲಿ ಶಿಬಿರಗಳನ್ನು ನಿಯಮಿತ ಅಂತರದಲ್ಲಿ ಅಯೋಜಿಸಲಾಗುತ್ತಿದೆ,‘ ಎಂದು ಹೇಳಿದ್ದಾರೆ.
ಇದನ್ನೂ ಓದಿ: PF withdraw for covid emergency: ಕೋವಿಡ್ ತುರ್ತಿಗಾಗಿ ಅರ್ಜಿ ಹಾಕಿದ 3 ದಿನದೊಳಗೆ ಬ್ಯಾಂಕ್ ಖಾತೆಗೆ ಪಿಎಫ್ ಮೊತ್ತ