PF withdraw for covid emergency: ಕೋವಿಡ್ ತುರ್ತಿಗಾಗಿ ಅರ್ಜಿ ಹಾಕಿದ 3 ದಿನದೊಳಗೆ ಬ್ಯಾಂಕ್ ಖಾತೆಗೆ ಪಿಎಫ್ ಮೊತ್ತ
ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಪಿಎಫ್ ಅಕೌಂಟ್ನಿಂದ ತುರ್ತು ಹಣಕ್ಕಾಗಿ ಅರ್ಜಿ ಸಲ್ಲಿಸಿದಲ್ಲಿ ಮೂರೇ ದಿನದೊಳಗೆ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ.
ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್ಒ)ದಿಂದ ಚಂದಾದಾರರು ಹಣ ವಿಥ್ಡ್ರಾ ಮಾಡಲು ಅವಕಾಶ ಮಾಡಿಕೊಟ್ಟಿದೆ. ಪಿಎಫ್ ಖಾತೆದಾರರಿಗೆ ಮರುಪಾವತಿಸುವ ಅಗತ್ಯ ಇಲ್ಲದ ಮುಂಗಡ ನೀಡಲಾಗುತ್ತಿದೆ. ಚಂದಾದಾರರು ಹಣಕಾಸು ತುರ್ತಿಗಾಗಿ ತಮ್ಮ ಖಾತೆಯಿಂದ ವಿಥ್ಡ್ರಾ ಮಾಡಬಹುದು. ಈ ಹಿಂದೆಲ್ಲ ಅನಾರೋಗ್ಯ, ಮನೆ ಖರೀದಿ ಮುಂತಾದ ಪ್ರಕರಣಗಳಿಗೆ ಮರುಪಾವತಿಸುವ ಅಗತ್ಯ ಇಲ್ಲದೆ ಹಣ ಪಡೆಯವ ಸವಲತ್ತು ಒದಗಿಸಿತ್ತು. ಆದರೆ 2020ರಲ್ಲಿ ಕಾರ್ಮಿಕ ಭವಿಷ್ಯ ನಿಧಿ ಯೋಜನೆ, 1952ಕ್ಕೆ ತಿದ್ದುಪಡಿ ತಂದು, ಕೋವಿಡ್- 19 ತುರ್ತಿಗಾಗಿಯೂ ಮರುಪಾವತಿಸುವ ಅಗತ್ಯ ಇಲ್ಲದಂತೆ ಹಣ ವಿಥ್ ಡ್ರಾ ಮಾಡುವ ಅವಕಾಶ ನೀಡಲಾಯಿತು. ಅಂಥ ಸಂದರ್ಭದಲ್ಲಿ ಖಾತೆದಾರರು ಮೂರು ತಿಂಗಳ ಮೂಲವೇತನ ಮತ್ತು ಡಿಎ ಅಥವಾ ಪಿಎಫ್ನಲ್ಲಿ ಇರುವ ಬಾಕಿ ಮೊತ್ತದ ಶೇ 75ರಷ್ಟು ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ವಿಥ್ ಡ್ರಾ ಮಾಡಬಹದು. ಅಂದ ಹಾಗೆ ಕಳೆದ ವರ್ಷ ಯಾರು ಮುಂಗಡ ತೆಗೆದುಕೊಂಡಿದ್ದರೋ ಅವರು ಈಗ ಸಹ ಅರ್ಜಿ ಹಾಕಿಕೊಳ್ಳಬಹುದು.
ಮರುಪಾವತಿಸುವ ಅಗತ್ಯ ಇಲ್ಲದ ಮುಂಗಡ ಪಡೆಯುವುದಕ್ಕೆ ಈ ಮೂರು ಅಂಶಗಳು ಅಗತ್ಯ. 1) ಯುಎಎನ್ ಸಂಖ್ಯೆ ಆ್ಯಕ್ಟಿವೇಟ್ ಆಗಿರಬೇಕು 2) ಯುಎಎನ್ ಸಂಖ್ಯೆಯು ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆ ಜತೆಗೆ ಜೋಡಣೆ ಆಗಿರಬೇಕು 3) ಯುಎಎನ್ ಆ್ಯಕ್ಟಿವೇಟ್ ಆಗಲು ಬಳಸಿರುವ ಮೊಬೈಲ್ ನಂಬರ್ಗೆ ಒಟಿಪಿ ಬರುವುದರಿಂದ ಮೊಬೈಲ್ ಸಂಖ್ಯೆ ಕಾರ್ಯ ನಿರ್ವಹಿಸುತ್ತಿರಬೇಕು
ಕೋವಿಡ್- 19 ಮುಂಗಡಕ್ಕೆ ಅರ್ಜಿ ಪಡೆದುಕೊಂಡ 3 ದಿನದೊಳಗೆ ಕ್ಲೇಮ್ಗಳನ್ನು ವಿಲೇವಾರಿ ಮಾಡುವುದಕ್ಕೆ ಇಪಿಎಫ್ಒ ಬದ್ಧವಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ತಿಳಿಸಿದೆ. ಇಪಿಎಫ್ಒದಿಂದ ಆಟೋ- ಕ್ಲೇಮ್ ವಿಲೇವಾರಿಯನ್ನು ತರಲಾಗಿದೆ. ಎಲ್ಲ ಬಗ್ಗೆಯಲ್ಲೂ ಕೆವೈಸಿ (ನೋ ಯುವರ್ ಕಸ್ಟಮರ್) ಪೂರ್ಣಗೊಳಿಸಿದ ಸದಸ್ಯರಿಗೆ ಇದು ಅನ್ವಯ ಆಗುತ್ತದೆ. ಕಾನೂನು ಪ್ರಕಾರವಾಗಿ 20 ದಿನದೊಳಗೆ ಕ್ಲೇಮ್ ವಿಲೇವಾರಿ ಆಗುತ್ತಿದ್ದದ್ದು ಈಗ ಕೇವಲ 3 ದಿನಕ್ಕೆ ಇಳಿಕೆ ಆಗಿದೆ ಎಂದು ಸಚಿವಾಲಯ ತಿಳಿಸಿದೆ.
ಅರ್ಜಿ ಹಾಕಿಕೊಳ್ಳುವ ವಿಧಾನ ಹೀಗಿದೆ: ಹಂತ 1: https://unifiedportal-mem.epfindia.gov.in/memberinterface/ ಈ ವೆಬ್ಸೈಟ್ಗೆ ಲಾಗಿನ್ ಆಗಿ. ಹಂತ 2: ಲಾಗಿನ್ ಆದ ಮೇಲೆ UAN ಸಂಖ್ಯೆ ನಮೂದಿಸಿ, ಅದು ನಿಮ್ಮ ಪೇ ಸ್ಲಿಪ್ನಲ್ಲಿ ಇರುತ್ತದೆ. ಒಂದು ವೇಳೆ ನೋಂದಣಿ ಆಗಿದ್ದಲ್ಲಿ ಪಾಸ್ವರ್ಡ್ ಹಾಕಿ ಮತ್ತು Captchaವನ್ನು ಸಹ ನಮೂದಿಸಿ. ಹಂತ 3: ಮೇಲ್ಭಾಗದ ಟಾಪ್ನಲ್ಲಿ “ಆನ್ಲೈನ್ ಸರ್ವೀಸ್” ಎಂಬುದು ಇರುತ್ತದೆ. ONLINE CLAIM (FORM 31, 19, 10C ಮತ್ತು 10D). ಅದರ ಮೇಲೆ ಕ್ಲಿಕ್ ಮಾಡಿ. ಹಂತ 4: ಹೊಸ ವೆಬ್ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿ ಹೆಸರು, ಜನ್ಮ ದಿನಾಂಕ, ಆಧಾರ್ನ ಕೊನೆಯ ನಾಲ್ಕು ಸಂಖ್ಯೆ ಇರುತ್ತದೆ. ವೆಬ್ ಪೇಜ್ನಲ್ಲಿ ಬ್ಯಾಂಕ್ ಖಾತೆಯನ್ನು ನಮೂದಿಸಬೇಕು. ಒಂದು ಸಲ ಭರ್ತಿ ಮಾಡಿದ ಮೇಲೆ Verify ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ವೆರಿಫೈ ಆದ ಮೇಲೆ “Certificate Of Undertaking” ಕೇಳಿ ಪಾಪ್- ಅಪ್ ಒಂದು ತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಹಂತ 5: ಆ ನಂತರ Proceed for online claim ಮೇಲೆ ಕ್ಲಿಕ್ ಮಾಡಿ. ಹಂತ 6: ಡ್ರಾಪ್ ಡೌನ್ ಮೆನುದಲ್ಲಿ EPF advance (Form 31) ಅಂತ ಇದ್ದು, ಅದರ ಮೇಲೆ ಕ್ಲಿಕ್ ಮಾಡಬೇಕು. ಹಂತ 7: ಹಣ ಡ್ರಾ ಮಾಡುವ ಉದ್ದೇಶ ತಿಳಿಸಬೇಕು ಮತ್ತು ಅಲ್ಲಿ ಕೋವಿಡ್-19 ಎಂಬುದನ್ನು ನಮೂದಿಸಬೇಕು. ಹಂತ 8: ವಿಥ್ಡ್ರಾ ಮೊತ್ತವನ್ನು ನಮೂದಿಸಬೇಕು ಮತ್ತು ಚೆಕ್ನ ಸ್ಕ್ಯಾನ್ಡ್ ಕಾಪಿಯನ್ನು ಅಪ್ಲೋಡ್ ಮಾಡಬೇಕು. ಹಂತ 9: ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಕಳುಹಿಸಲಾಗುತ್ತದೆ. ಅದನ್ನು ಭರ್ತಿ ಮಾಡಿ, ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಹಂತ 10: ಈ ಮನವಿಗೆ ಉದ್ಯೋಗದಾತರ ಅನುಮತಿ ಬೇಕು. ಅದು ಸಿಕ್ಕ ನಂತರ ಇಪಿಎಫ್ ಖಾತೆಯಿಂದ ಬ್ಯಾಂಕ್ ಖಾತೆಗೆ ಹಣವು ವರ್ಗಾವಣೆ ಆಗುತ್ತದೆ.
ಇದನ್ನೂ ಓದಿ: PF interest: ಈ ದಿನದೊಳಗೆ ಚಂದಾದಾರರ ಖಾತೆಗಳಿಗೆ ಜಮೆ ಆಗಲಿದೆ ಶೇ 8.5ರಷ್ಟು ಪಿಎಫ್ ಬಡ್ಡಿ, ಪರಿಶೀಲನೆ ಮಾಡಿಕೊಳ್ಳಿ
ಇದನ್ನೂ ಓದಿ: How to Link Aadhaar Card with EPF Account: ಆಧಾರ್ ಜತೆಗೆ ಪಿಎಫ್ ಖಾತೆ ಜೋಡಣೆ ಮಾಡುವುದು ಹೇಗೆ?
(PF withdraw request for covid-19 emergency will process quickly from EPFO and transfer money to account holders banks in 3 days)
Published On - 2:00 pm, Wed, 2 June 21