
ನವದೆಹಲಿ, ಅಕ್ಟೋಬರ್ 15: ನವದೆಹಲಿಯ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ನಾಳೆ (ಅಕ್ಟೋಬರ್ 16) ಅಭಿಜಿತ್ ದೀಪ್ಕೆ ನೇತೃತ್ವದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ತಡೆಯಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಸಭೆ-ಸಮಾರಂಭಗಳನ್ನು ಕಾನೂನುಬದ್ಧವಾಗಿ ನಿಯಂತ್ರಿಸಲು ಮತ್ತು ನಿಯಂತ್ರಣದಲ್ಲಿಡಲು “ಕಾನೂನಿನಡಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂಬ ದೆಹಲಿ ಪೊಲೀಸರ ಭರವಸೆಯನ್ನು ಹೈಕೋರ್ಟ್ ದಾಖಲಿಸಿಕೊಂಡಿದೆ.
ಅಕ್ಟೋಬರ್ 10ರಂದು ಚುನಾವಣಾ ವಂಚನೆ ಆರೋಪದ ಕುರಿತು ಸಿಜೆಪಿ ಕರೆ ನೀಡಿದ್ದ ಪ್ರತಿಭಟನೆಯ ಭಾಗವಾಗಿ ಜಂತರ್ ಮಂತರ್ ರಸ್ತೆಯತ್ತ ತೆರಳುತ್ತಿದ್ದ ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಇದೇ ವಿಷಯದ ಬಗ್ಗೆ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಈ ವಾರ ಕೇಂದ್ರ ಸರ್ಕಾರದ ವಿರುದ್ಧದ ಈ 2 ಸಮಾನಾಂತರ ಪ್ರತಿಭಟನೆಗಳು ಒಗ್ಗೂಡುವ ಸೂಚನೆ ತೋರುತ್ತಿವೆ. ‘ಇಂಡಿಯಾ’ ಒಕ್ಕೂಟದಿಂದ ದೂರವೇ ಉಳಿದಿದ್ದ ಆಮ್ ಆದ್ಮಿ ಪಕ್ಷ (ಆಪ್) ಕೂಡ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದು, ಪ್ರತಿಭಟನಾಕಾರರು ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಬರುವಂತೆ ದೀಪ್ಕೆ ಕೋರಿದ್ದಾರೆ.
ಇದನ್ನೂ ಓದಿ: ಹುಟ್ಟುಹಬ್ಬದಂದೇ ಜೈಲು ಸೇರಿದ ಸಿಜೆಪಿ ನಾಯಕ ಅಶುತೋಷ್ ರಂಕಾ, ಸೌರವ್ ದಾಸ್ಗೆ ಐದು ದಿನಗಳ ನ್ಯಾಯಾಂಗ ಬಂಧನ
ದೆಹಲಿ ಹೈಕೋರ್ಟ್ನ ತಾತ್ಕಾಲಿಕ ಮುಖ್ಯ ನ್ಯಾಯಮೂರ್ತಿ ನಿತಿನ್ ವಾಸುದೇವ್ ಸಾಂಬ್ರೆ ಮತ್ತು ನ್ಯಾಯಮೂರ್ತಿ ಸಂಜಯ್ ಶರ್ಮಾ ಅವರ ಪೀಠವು ಇಂದು ಪರವಾನಗಿ ಪಡೆದ ಬೀದಿಬದಿ ವ್ಯಾಪಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ದೆಹಲಿಯಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆಗಳಿಂದ ಹಬ್ಬದ ಸೀಸನ್ನಲ್ಲಿ ವ್ಯಾಪಾರಸ್ಥರ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದರು.
“ದಸರಾ ವಾರಾಂತ್ಯದಲ್ಲಿ ಕೇಂದ್ರ ದೆಹಲಿಯಲ್ಲಿ ಮತ್ತೆ ಮಳಿಗೆಗಳು ಮುಚ್ಚಲ್ಪಟ್ಟರೆ ವ್ಯಾಪಾರಿಗಳು ಮತ್ತು ಮಾರಾಟಗಾರರು ಬೀದಿಪಾಲಾಗಲಿದ್ದಾರೆ. ಕನ್ನಾಟ್ ಪ್ಲೇಸ್ ಸೆಂಟ್ರಲ್ ಪಾರ್ಕ್ ಹೃದಯಭಾಗದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇದು ಪ್ರತಿಭಟನಾ ಸ್ಥಳವಲ್ಲ. ವ್ಯಾಪಾರಿಗಳು ಈಗಾಗ್ಲೇ ಅಂಗಡಿಗಳನ್ನು ಮುಚ್ಚಲು ಆರಂಭಿಸಿದ್ದಾರೆ. ಈ ಪ್ರತಿಭಟನೆಯನ್ನು ತಡೆಯಬೇಕು” ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.
ಇದನ್ನೂ ಓದಿ: ಮಹಿಳೆಯ ಆಕ್ಷೇಪಾರ್ಹ ಫೋಟೋ ಶೇರ್ ಮಾಡಿದ ಆರೋಪ; ಸಿಜೆಪಿ ನಾಯಕರಿಗೆ ದೆಹಲಿ ಪೊಲೀಸರಿಂದ ನೋಟಿಸ್
ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಟರ್ ಜನರಲ್ ಚೇತನ್ ಶರ್ಮಾ, ಸಿಜೆಪಿ ಚಟುವಟಿಕೆಗಳನ್ನು ನಿಯಂತ್ರಿಸಲು ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಅಭಿಜಿತ್ ದೀಪ್ಕೆ ಆರೋಪ:
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಕಳೆದ 15 ದಿನಗಳಿಂದ ದೆಹಲಿಯ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರನ್ನು ಎಳೆದಾಡಲಾಗಿದೆ ಎಂದರು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಮತ್ತು ಪಿಣರಾಯಿ ವಿಜಯನ್ ಅವರನ್ನೂ ಸಹ ವಶಕ್ಕೆ ಪಡೆಯಲಾಗಿದೆ ಎಂದು ಕಿಡಿಕಾರಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ