
ದೆಹಲಿ, ಡಿಸೆಂಬರ್ 10: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಹಿನ್ನೆಲೆ ಕೇಂದ್ರ ಸರ್ಕಾರವನ್ನ ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವಿಮಾನ ಪ್ರಯಾಣ ದರ 40 ಸಾವಿರ ಆಗಲು ಹೇಗೆ ಸಾಧ್ಯ? ಅದನ್ನ ತಡೆಯಲು ಯಾಕೆ ಆಗಲಿಲ್ಲ ಎಂದು ಪ್ರಶ್ನೆ ಮಾಡಿರುವ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಅವರದಿದ್ದ ಪೀಠ, ಪರಿಸ್ಥಿತಿಯನ್ನ ಆತಂಕಕಾರಿ ಎಂದಿದೆ.
ಬಿಕ್ಕಟ್ಟು ಸಂದರ್ಭದಲ್ಲಿ ಇತರ ವಿಮಾನಯಾನ ಸಂಸ್ಥೆಗಳಿಗೆ ಲಾಭ ಪಡೆಯಲು ಹೇಗೆ ಅನುಮತಿಸಬಹುದು? ಅದು 35-40 ಸಾವಿರ ಹಣ ಕೊಟ್ಟು ಹೇಗೆ ಹೋಗಲು ಸಾಧ್ಯ? ನೀವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಬಿಟ್ಟಿದ್ದೀರಿ. ಇಂತಹ ಪರಿಸ್ಥಿತಿಯು ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ ಎಂದುಕೇಂದ್ರದ ನಡೆ ಬಗ್ಗೆ ದೆಹಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಇಂಡಿಗೋ ಹಾರಾಟ ವ್ಯತ್ಯಯ; ಕೆಂಪೇಗೌಡ ಏರ್ಪೋರ್ಟ್ ಆವರಣದ ಅಂಗಡಿ–ಮುಂಗಟ್ಟುಗಳಿಗೆ ಕೋಟ್ಯಂತರ ರೂ. ನಷ್ಟ
ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿರುವ ನಡುವೆ ಉಳಿದ ಏರ್ಲೈನ್ಸ್ಗಳು ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದವು. ಟಿಕೆಟ್ ದರವನ್ನು ಮನಬಂದಂತೆ ಏರಿಸಿದ್ದ ಪರಿಣಾಮ ದುಪ್ಪಟ್ಟು ಹಣ ಕೊಟ್ಟು ಪ್ರಯಾಣಿಸಬೇಕಾದ ಸ್ಥಿತಿ ಉದ್ಭವಿಸಿತ್ತು. ಬಸ್ಗಳ ದರವೂ ಗಗನಮುಖಿಯಾದ ಕಾರಣ ಪ್ರಯಾಣಿಕರು ಈ ಬಗ್ಗೆ ಕಿಡಿ ಕಾರಿದ್ದರು. ಇದೇ ವಿಚಾರವಾಗಿ ಈಗ ದೆಹಲಿ ಹೈಕೋರ್ಟ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ನಿಂದ ಹಾರಾಟ ನಡೆಸುವ ಇಂಡಿಗೋ ಏರ್ಲೈನ್ಸ್ ವಿಮಾನಗಳ ಸಂಚಾರದಲ್ಲಿ ಚೇತರಿಕೆ ಕಂಡುಬಂದಿದೆ. ಇಂದು 58 ವಿಮಾನಗಳ ಹಾರಾಟ ಮಾತ್ರ ಕ್ಯಾನ್ಸಲ್ ಆಗಿವೆ. ಏರ್ಪೋರ್ಟ್ನಿಂದ ನಿರ್ಗಮಿಸಬೇಕಿದ್ದ 26 ವಿಮಾನಗಳು ಮತ್ತು ಆಗಮಿಸಬೇಕಿದ್ದ 32 ಇಂಡಿಗೋ ಫ್ಲೈಟ್ಸ್ ರದ್ದಾಗಿವೆ. ನಿನ್ನೆ ಒಟ್ಟು 121 ಇಂಡಿಗೋ ವಿಮಾನಗಳ ಹಾರಾಟ ಕ್ಯಾನ್ಸಲ್ ಆಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:00 pm, Wed, 10 December 25