ಇಂಡಿಗೋ ಹಾರಾಟ ವ್ಯತ್ಯಯ: ಕೆಂಪೇಗೌಡ ಏರ್ಪೋರ್ಟ್ ಆವರಣದ ಅಂಗಡಿ–ಮುಂಗಟ್ಟುಗಳಿಗೆ ಕೋಟ್ಯಂತರ ರೂ. ನಷ್ಟ
ಇಂಡಿಗೋ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯವಾಗಿರುವುದು ಪ್ರಯಾಣಿಕರಿಗಷ್ಟೇ ಅಲ್ಲದೆ, ವಿಮಾನ ನಿಲ್ದಾಣ ಆವರಣದ ವ್ಯಾಪಾರಿಗಳಿಗೂ ಸಮಸ್ಯೆ ತಂದೊಡ್ಡಿದೆ. ಇಂಡಿಗೋ ವಿಮಾನಗಳ ರದ್ದತಿಯಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವುದು ಕೆಂಪೇಗೌಡ ಏರ್ಪೋರ್ಟ್ ಆಸುಪಾಸಿನ ಅಂಗಡಿ–ಮುಂಗಟ್ಟುಗಳ ವ್ಯಾಪಾರ-ವಹಿವಾಟಿಗೆ ಹೊಡೆತ ನೀಡಿದೆ. ವರ್ತಕರು ಕೋಟ್ಯಂತರ ರೂ. ನಷ್ಟ ಅನುಭವಿಸುವಂತಾಗಿದೆ.

ಬೆಂಗಳೂರು, ಡಿಸೆಂಬರ್ 10: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIAB) ಟರ್ಮಿನಲ್–1ನಲ್ಲಿ ಇಂಡಿಗೋ ವಿಮಾನಗಳ (IndiGo Flights) ಹಾರಾಟದಲ್ಲಿ ಕಳೆದ ಕೆಲ ದಿನಗಳಿಂದ ಉಂಟಾಗಿರುವ ವ್ಯತ್ಯಯದಿಂದ ವಿಮಾನ ನಿಲ್ದಾಣದಲ್ಲಿನ ಅಂಗಡಿ–ಮುಂಗಟ್ಟುಗಳಿಗೆ ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿದೆ. ವಿಮಾನಗಳ ಹಾರಾಟ ರದ್ದು ಪರಿಣಾಮವಾಗಿ ಪ್ರಯಾಣಿಕರ ಸಂಚಾರ ಗಣನೀಯವಾಗಿ ಕಡಿಮೆಯಾದ ಪರಿಣಾಮ, ವ್ಯಾಪಾರ ವಹಿವಾಟುಗಳು ತೀವ್ರವಾಗಿ ಕುಸಿದಿವೆ. ಸಾಮಾನ್ಯವಾಗಿ ದಿನಕ್ಕೆ 1.5 ಲಕ್ಷ ರೂ.ನಿಂದ 2 ಲಕ್ಷ ರೂ. ವಹಿವಾಟು ಮಾಡುವ ಅಂಗಡಿಗಳು, ಕಳೆದ 10 ದಿನಗಳಿಂದ ಕೇವಲ 50–60 ಸಾವಿರ ರೂ. ವಹಿವಾಟು ನಡೆಸುತ್ತಿವೆ. ಸುಮಾರು ಶೇ 50 ರಷ್ಟು ವ್ಯವಹಾರ ನಷ್ಟ ಉಂಟಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಇಂಡಿಗೋ ವಿಮಾನಗಳ ಸಂಚಾರ ರದ್ದತಿಯ ಪರಿಣಾಮ, ಹಲವು ವ್ಯಾಪಾರಸ್ಥರು ಖಾಲಿ ಅಂಗಡಿಗಳಲ್ಲೇ ಕೂತು ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದಾಖಲೆ ಮಟ್ಟದ ನಷ್ಟದಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಇಂಡಿಗೋ ವಿಮಾನ ಸಂಚಾರದಲ್ಲಿ ತುಸು ಚೇತರಿಕೆ
ಕೆಂಪೇಗೌಡ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಇಂದು ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಬಂದಿದೆ. ಮಂಗಳವಾರ ಒಟ್ಟು 121 ವಿಮಾನಗಳ ಸಂಚಾರ ರದ್ದಾಗಿತ್ತು. ಇಂದು ರದ್ದಾದ ವಿಮಾನಗಳ ಸಂಖ್ಯೆ 58ಕ್ಕೆ ಇಳಿದಿದೆ. ಇಂದು ಏರ್‌ಪೋರ್ಟ್‌ನಿಂದ ಹೊರಡಬೇಕಿದ್ದ 26 ವಿಮಾನಗಳ ಮತ್ತು ಆಗಮಿಸಬೇಕಿದ್ದ 32 ವಿಮಾನಗಳ ಸಂಚಾರ ರದ್ದಾಗಿದೆ.
ಇದನ್ನೂ ಓದಿ: ಇಂಡಿಗೋ ರಾದ್ಧಾಂತ: ಬೆಂಗಳೂರು ಏರ್ಪೋರ್ಟ್ಗೆ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳ ಭೇಟಿ
ಪ್ರಯಾಣಿಕರಿಗೆ ವಿಮಾನ ರದ್ದತಿ ಬಗ್ಗೆ ಮುಂಚಿತವಾಗಿ ಸಂದೇಶ ರವಾನೆ ಮಾಡಲಾಗುತ್ತಿದೆ. ಈ ಮೂಲಕ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ತಪ್ಪಿಸುವ ಪ್ರಯತ್ನ ನಡೆದಿದೆ. ಶೀಘ್ರವೇ ಏರ್‌ಪೋರ್ಟ್‌ನಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ವ್ಯಕ್ತವಾಗಿದೆ.



