ಆಮ್ ಆದ್ಮಿಗೆ ಮತ್ತೊಂದು ಸಂಕಷ್ಟ; ಮಾಜಿ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ತನಿಖೆಗೆ ಆದೇಶ

|

Updated on: Jul 06, 2024 | 6:35 PM

ಲಂಚ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ಭ್ರಷ್ಟಾಚಾರ ತಡೆ (ಪಿಒಸಿ) ಕಾಯ್ದೆಯಡಿ ತನಿಖೆ ನಡೆಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಇಂದು ಅನುಮೋದನೆ ನೀಡಿದ್ದಾರೆ. 70 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಸಿಟಿವಿ ಅಳವಡಿಕೆಗೆ 571 ಕೋಟಿ ರೂ. ಯೋಜನೆಗೆ ಸಂಬಂಧಿಸಿದಂತೆ ಸತ್ಯೇಂದ್ರ ಜೈನ್ 7 ಕೋಟಿ ರೂ. ಲಂಚ ಪಡೆದ ಆರೋಪವನ್ನು ಎದುರಿಸುತ್ತಿದ್ದಾರೆ.

ಆಮ್ ಆದ್ಮಿಗೆ ಮತ್ತೊಂದು ಸಂಕಷ್ಟ; ಮಾಜಿ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ತನಿಖೆಗೆ ಆದೇಶ
ಸತ್ಯೇಂದ್ರ ಜೈನ್
Follow us on

ನವದೆಹಲಿ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಅಧಿಕಾರಿಗಳಿಂದ 7 ಕೋಟಿ ರೂ. ಲಂಚ ಪಡೆದ ಆರೋಪದ ಮೇಲೆ ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ವಿರುದ್ಧ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ವಿ.ಕೆ ಸಕ್ಸೇನಾ ಅನುಮತಿ ನೀಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನೇತೃತ್ವದಲ್ಲಿ ಈ ತನಿಖೆ ನಡೆಯಲಿದೆ.

ಲೆಫ್ಟಿನೆಂಟ್ ಗವರ್ನರ್ ಆದೇಶದ ಪ್ರಕಾರ, ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆ ನಡೆಸಲಾಗುವುದು. ಆ ಸಮಯದಲ್ಲಿ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದ ಬಿಇಎಲ್‌ಗೆ ವಿಧಿಸಲಾಗಿದ್ದ 16 ಕೋಟಿ ರೂ.ಗಳ ದಂಡವನ್ನು ಮನ್ನಾ ಮಾಡಲು ದೆಹಲಿಯ ಮಾಜಿ ಸಚಿವರು ಲಂಚವನ್ನು ಸ್ವೀಕರಿಸಿದ್ದರು. ಆ ಯೋಜನೆಯು 571 ಕೋಟಿ ರೂ.ಗಳದ್ದಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್‌ಗೆ ಜೈಲಿನಲ್ಲಿ ಕೂಲರ್ ನೀಡಿಲ್ಲ; ಆಮ್ ಆದ್ಮಿ ಆರೋಪ

ಎಸಿಬಿಯಿಂದ ಸತ್ಯೇಂದ್ರ ಜೈನ್ ವಿರುದ್ಧ ತನಿಖೆಯನ್ನು ಅನುಮೋದಿಸಲು ಭ್ರಷ್ಟಾಚಾರ ತಡೆ ಕಾಯ್ದೆ, 1998ರ ಸೆಕ್ಷನ್ 17 ಎ ಅಡಿಯಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ವಿಷಯವನ್ನು ಉಲ್ಲೇಖಿಸಲು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ ಪ್ರಸ್ತಾವನೆಯನ್ನು ಎಲ್‌ಜಿ ಅನುಮತಿ ನೀಡಿದ್ದಾರೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಕಚೇರಿ ಅಧಿಕೃತ ಹೇಳಿಕೆ ತಿಳಿಸಿದೆ.

ಆದರೆ, ಸತ್ಯೇಂದ್ರ ಜೈನ್ ವಿರುದ್ಧದ ಆರೋಪಗಳನ್ನು ಸುಳ್ಳು ಎಂದು ಆಮ್ ಆದ್ಮಿ ಪಕ್ಷ (ಎಎಪಿ) ತಿರಸ್ಕರಿಸಿದೆ. ಸತ್ಯೇಂದ್ರ ಜೈನ್ ವಿರುದ್ಧದ ತನಿಖೆಯ ಕುರಿತು ಪ್ರತಿಕ್ರಿಯಿಸಿದ ಆಪ್ ಸಚಿವೆ ಅತಿಶಿ, “ದೆಹಲಿ ಸರ್ಕಾರದ ವಿರುದ್ಧ ಪಿತೂರಿ ನಡೆಸುತ್ತಿದೆ” ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಆಮ್ ಆದ್ಮಿ ಪಕ್ಷದ ನಾಯಕರ ವಿರುದ್ಧ 200ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಬಿಜೆಪಿ ದೆಹಲಿ ಸರ್ಕಾರವನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ