AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

8 ವರ್ಷ ಪ್ರೀತಿಸಿದರೂ ಜೊತೆಗಿದ್ದಿದ್ದು ಎರಡೇ ತಿಂಗಳು; ವೀರಮರಣವನ್ನಪ್ಪಿದ ಯೋಧ ಅಂಶುಮಾನ್ ಲವ್ ಸ್ಟೋರಿ

ಲವ್ ಎಟ್ ಫಸ್ಟ್​ ಸೈಟ್ ಅಂತಾರಲ್ಲ ಅದು ನಮ್ಮಿಬ್ಬರ ವಿಚಾರದಲ್ಲಿ ಸತ್ಯ. 9 ವರ್ಷದ ಹಿಂದೆ ಕಾಲೇಜಿನಲ್ಲಿ ಮೊದಲ ನೋಟದಲ್ಲೇ ನಮ್ಮಿಬ್ಬರಿಗೂ ಪ್ರೀತಿಯಾಗಿತ್ತು. ಆದರೆ, ಆಮೇಲೆ ನಾವಿಬ್ಬರೂ ದೂರದ ಊರುಗಳಲ್ಲಿದ್ದರೂ ಪ್ರೀತಿ ಹೆಚ್ಚಾಗುತ್ತಲೇ ಇತ್ತು. ಆದರೆ, ದೇವರಿಗೆ ನಮ್ಮಿಬ್ಬರ ಪ್ರೀತಿಯ ಬಗ್ಗೆ ಹೊಟ್ಟೆಕಿಚ್ಚಾಗಿತ್ತೇನೋ... ಸಿಯಾಚಿನ್ ಬೆಂಕಿ ದುರಂತದಲ್ಲಿ ವೀರಮರಣ ಹೊಂದಿದ ಯೋಧ ಅಂಶುಮಾನ್ ಸಿಂಗ್ ಪ್ರೇಮಕತೆಯಿದು.

ಸುಷ್ಮಾ ಚಕ್ರೆ
|

Updated on:Jul 06, 2024 | 7:55 PM

Share

ನವದೆಹಲಿ: ನಿನ್ನೆ ದೆಹಲಿಯಲ್ಲಿ ನಡೆದ ಕೀರ್ತಿ ಚಕ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಯಾಚಿನ್ ದುರಂತದಲ್ಲಿ ಮರಣ ಹೊಂದಿದ ಯೋಧ ಅಂಶುಮಾನ್ ಸಿಂಗ್ ಅವರ ಪತ್ನಿ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಮುದ್ದು ಮುಖದ, ಚಿಕ್ಕ ವಯಸ್ಸಿನ ಯುವತಿ ರಾಷ್ಟ್ರಪತಿಗಳ ಮುಂದೆ ಬಂದು ನಿಲ್ಲುತ್ತಿದ್ದಂತೆ ಎಲ್ಲರ ಕಣ್ಣಲ್ಲೂ ಅಚ್ಚರಿ ಕಾಣುತ್ತಿತ್ತು. ಇಷ್ಟು ಸಣ್ಣ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಆ ಯುವತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಗಳು ಹರಿದಾಡಿದ್ದವು. ಇದೀಗ ಅಂಶುಮಾನ್ ಮತ್ತು ತನ್ನ ಲವ್ ಸ್ಟೋರಿ ಬಗ್ಗೆ ಸ್ಮೃತಿ ಸಿಂಗ್ ಮಾತನಾಡಿರುವ ವಿಡಿಯೋ ಕೂಡ ವೈರಲ್ ಆಗಿದೆ.

ನನ್ನ ಗಂಡ ಅಂಶುಮಾನ್ ಜೊತೆ ಅವರು ಸಾಯುವ ಹಿಂದಿನ ದಿನ ಮನೆ, ಮಗುವಿನ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದೆವು. ಮರುದಿನ ಬೆಳಗ್ಗೆ ಅವರು ಸಾವನ್ನಪ್ಪಿರುವ ಸುದ್ದಿ ಬಂದಿತು. ಅದೆಲ್ಲ ಆಗಿ 1 ವರ್ಷವಾದರೂ ಆ ಸುದ್ದಿ ಸುಳ್ಳೇನೋ ಎಂದೇ ನನಗೆ ಅನಿಸುತ್ತಿತ್ತು. ಅಂಶುಮಾನ್ ಯಾವಾಗಲೂ ದೇಶಕ್ಕೋಸ್ಕರವೇ ಬದುಕಿದ್ದವರು. ಅವರು ನಿಜವಾಗಲೂ ಹೀರೋ. ತಮ್ಮ ಜೀವವನ್ನು ಲೆಕ್ಕಿಸದೆ ಇನ್ನೂ ಮೂರು ಕುಟುಂಬಗಳನ್ನು ಉಳಿಸಿದ ಅವರು ಏನೇನೋ ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ. ಅಂಥದ್ದರಲ್ಲಿ ನಾವು ಅವರ ಅಗಲಿಕೆಯ ಕಷ್ಟವನ್ನು ಸಹಿಸಿಕೊಳ್ಳುವುದು ದೊಡ್ಡದೇನಲ್ಲ ಎಂದು ಸ್ಮೃತಿ ಸಿಂಗ್ ಹೇಳಿದ್ದಾರೆ.

“ನನ್ನದು ಮತ್ತು ಅಂಶುಮಾನ್​ ಅವರದ್ದು ಲವ್ ಎಟ್ ಫಸ್ಟ್ ಸೈಟ್. ನಾವಿಬ್ಬರೂ ಕಾಲೇಜಿನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆವು. 1 ತಿಂಗಳು ಒಂದೇ ಕಾಲೇಜಿನಲ್ಲಿ ಓದಿದ್ದೆವು. ಆನಂತರ ಅವರಿಗೆ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ (AFMC) ಸೀಟ್ ಸಿಕ್ಕಿತು. ಹೀಗಾಗಿ, ಇಬ್ಬರೂ ದೂರದ ಊರುಗಳಲ್ಲಿ ಓದಿದೆವು. ನಮ್ಮ ಡಿಸ್ಟನ್ಸ್ ರಿಲೇಷನ್​ಶಿಪ್. ಕೊನೆಗೆ ಸೇನೆಯಲ್ಲಿ ವೈದ್ಯರಾಗಿ ಅವರಿಗೆ ಕೆಲಸ ಸಿಕ್ಕಿತು. ನಾನು ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡೆ. 8 ವರ್ಷಗಳ ಕಾಲ ದೂರದಲ್ಲಿದ್ದುಕೊಂಡೇ ಪ್ರೀತಿ ಮಾಡಿದೆವು. ಕಳೆದ ವರ್ಷ ಫೆಬ್ರವರಿಯಲ್ಲಿ ಇಬ್ಬರೂ ಮದುವೆಯಾದೆವು. ಆದರೆ, ಅದಾದ ಎರಡೇ ತಿಂಗಳಲ್ಲಿ ಅವರು ಸಿಯಾಚಿನ್​ಗೆ ಶಿಫ್ಟ್​ ಆಗಬೇಕಾಯಿತು. ಆಗ ಹೋದವರು ಮತ್ತೆ ವಾಪಾಸ್ ಬರಲೇ ಇಲ್ಲ.” ಎಂದು ಸ್ಮೃತಿ ಸಿಂಗ್ ತಮ್ಮ ಹಾಗೂ ದಿವಂಗತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಲವ್ ಸ್ಟೋರಿಯನ್ನು ಹೇಳಿದ್ದಾರೆ.

ಇದನ್ನೂ ಓದಿ: ಯೋಧನಿಂದ ಅತ್ಯಾಚಾರ ಪ್ರಯತ್ನ ಆರೋಪ; ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

8 ವರ್ಷಗಳ ಕಾಲ ಪ್ರೀತಿ ಮಾಡಿದರೂ ನಾವು ಒಟ್ಟಿಗೇ ಜೀವಿಸಿದ್ದು 2 ತಿಂಗಳು ಮಾತ್ರ. ಅಂಶುಮಾನ್ ಸಾಯುವ ಹಿಂದಿನ ದಿನ ನಾವು ಮುಂದಿನ 50 ವರ್ಷಗಳಲ್ಲಿ ನಮ್ಮ ಬದುಕು ಹೇಗಿರುತ್ತದೆ ಎಂಬ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದೆವು. ಮನೆ ಕಟ್ಟಬೇಕು, ಮಕ್ಕಳನ್ನು ಬೆಳೆಸಬೇಕೆಂಬುದರ ಬಗ್ಗೆ ಇಬ್ಬರೂ ಕನಸು ಕಂಡಿದ್ದೆವು. ಆದರೆ, ಮರುದಿನ ಬೆಳಗ್ಗೆ ಎದ್ದಕೂಡಲೆ ಅವರು ಸಾವನ್ನಪ್ಪಿರುವ ವಿಷಯ ತಿಳಿಯಿತು. ನಮ್ಮ ಮನೆಯವರು ಇನ್ನೂ ಆ ಆಘಾತದಿಂದ ಹೊರಬಂದಿಲ್ಲ ಎಂದು ಸ್ಮೃತಿ ಸಿಂಗ್ ಹೇಳಿದ್ದಾರೆ.

ಅಂಶುಮಾನ್ ಸಿಂಗ್ – ಸ್ಮೃತಿ ಸಿಂಗ್

ಸ್ಮೃತಿ ಸಿಂಗ್ ಶುಕ್ರವಾರ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಕೀರ್ತಿ ಚಕ್ರವು ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ. ಕೇವಲ 26ನೇ ವಯಸ್ಸಿನಲ್ಲಿ ಅಂಶುಮಾನ್ ಸಿಂಗ್ ಮೃತಪಟ್ಟಿದ್ದಾರೆ.

ಏನಿದು ಘಟನೆ?:

2023ರ ಜುಲೈನಲ್ಲಿ ಸಿಯಾಚಿನ್‌ನಲ್ಲಿರುವ ಭಾರತೀಯ ಸೇನೆಯ ಮದ್ದುಗುಂಡುಗಳ ಡಂಪ್‌ನಲ್ಲಿ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಅವಘಡಕ್ಕೆ ಕಾರಣವಾಯಿತು. ಡಂಪ್‌ಗೆ ಬೆಂಕಿ ಬಿದ್ದಾಗ ಫೈಬರ್-ಗ್ಲಾಸ್ ಗುಡಿಸಲಿನಲ್ಲಿ ಸಿಲುಕಿಕೊಂಡಿದ್ದ ತನ್ನ ಜೊತೆಗಿದ್ದ ಸೇನಾ ಸಿಬ್ಬಂದಿಯನ್ನು ರಕ್ಷಿಸಲು ಕ್ಯಾಪ್ಟನ್ ಅಂಶುಮಾನ್ ಸಿಂಗ್ ಸಹಾಯ ಮಾಡಿದರು. ಆ ಬೆಂಕಿಯು ಹತ್ತಿರದ ವೈದ್ಯಕೀಯ ತನಿಖಾ ಶೆಲ್ಟರ್‌ಗೆ ಮತ್ತಷ್ಟು ಹರಡಿತು. ಕ್ಯಾಪ್ಟನ್ ಸಿಂಗ್ ಜೀವರಕ್ಷಕ ಸಹಾಯ ಹಿಂಪಡೆಯುವ ಪ್ರಯತ್ನದಲ್ಲಿ ತೀವ್ರವಾದ ಸುಟ್ಟಗಾಯಗಳಿಗೆ ತುತ್ತಾಗಿ ಮೃತಪಟ್ಟಿದ್ದರು. ಆದರೆ, ಅವರು ತಮ್ಮ ಜೊತೆಗಿದ್ದವರನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದರು.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:54 pm, Sat, 6 July 24