ನವದೆಹಲಿ: ಅಬಕಾರಿ ಹಗರಣದ ಆರೋಪ ಪಟ್ಟಿಯಲ್ಲಿ ಇಡಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಹೆಸರನ್ನು ಸೇರಿಸಿದೆ. ಈ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇಂದು ದೆಹಲಿಯ ಆಮ್ ಆದ್ಮಿ ಪಕ್ಷದ (Aam Aadmi Party) ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ (BJP) ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದು, ಗುಂಪನ್ನು ನಿಯಂತ್ರಿಸಲು ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಭೇದಿಸಲು ಯತ್ನಿಸಿದ್ದಾರೆ. ಇನ್ನು ಕೆಲವರು ಘೋಷಣಾ ಫಲಕಗಳನ್ನು ಹಿಡಿದು ನಿಂತು ಘೋಷಣೆಗಳನ್ನು ಕೂಗಿದ್ದಾರೆ.
ಜಾರಿ ನಿರ್ದೇಶನಾಲಯವು ಇತ್ತೀಚೆಗೆ ಸಲ್ಲಿಸಿದ ಎರಡನೇ ಚಾರ್ಜ್ ಶೀಟ್ ಕುರಿತು ಬಿಜೆಪಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸಿದೆ. ಕೇಜ್ರಿವಾಲ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಸಾಬೀತಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಮೇಯರ್ ಚುನಾವಣೆ: ಸುಪ್ರೀಂಕೋರ್ಟ್ ಮೊರೆ ಹೋದ ಆಮ್ ಆದ್ಮಿ ಪಕ್ಷ
ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಐವರು ವ್ಯಕ್ತಿಗಳು ಮತ್ತು 7 ಕಂಪನಿಗಳ ವಿರುದ್ಧದ ಪೂರಕ ಚಾರ್ಜ್ ಶೀಟ್ ಅನ್ನು ನ್ಯಾಯಾಲಯ ಗುರುವಾರ ಸ್ವೀಕರಿಸಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾಗಿರುವ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಸಿಬಿಐ ತನಿಖೆಗೆ ಆದೇಶಿಸಿದ ನಂತರ ಎಎಪಿ ಸರ್ಕಾರವು ಕಳೆದ ವರ್ಷ ಅಬಕಾರಿ ನೀತಿಯನ್ನು ಹಿಂತೆಗೆದುಕೊಂಡಿತು.
#WATCH | Delhi: BJP workers protest outside AAP office against CM Arvind Kejriwal over alleged liquor scam. pic.twitter.com/Hm5tkekPon
— ANI (@ANI) February 4, 2023
ಹಣಕಾಸು ಅಪರಾಧಗಳ ತನಿಖೆ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ವರದಿ ಮಾಡುವ ಜಾರಿ ನಿರ್ದೇಶನಾಲಯ ಅಬಕಾರಿ ನೀತಿಯಿಂದ ಗಳಿಸಿದ 100 ಕೋಟಿ ರೂ. “ಕಿಕ್‌ಬ್ಯಾಕ್” ನ ಒಂದು ಭಾಗವನ್ನು ಕಳೆದ ವರ್ಷದ ಗೋವಾ ವಿಧಾನಸಭಾ ಚುನಾವಣೆಯ ಎಎಪಿ ಪ್ರಚಾರದಲ್ಲಿ ಬಳಸಲಾಗಿದೆ ಎಂದು ಹೇಳಿತ್ತು. ಆದರೆ, ಕೇಜ್ರಿವಾಲ್ ಅವರು ಈ ಎಲ್ಲಾ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದ್ದರು. ಆಮ್ ಆದ್ಮಿ ಪಕ್ಷವನ್ನು ತುಳಿಯಲು ಬಿಜೆಪಿ ಈ ನಾಟಕವಾಡುತ್ತಿದೆ ಎಂದಿದ್ದರು.