ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಸರಗಳ್ಳನ ಪ್ರಕರಣಗಳು ಹೆಚ್ಚಾಗುತ್ತಿರುವುದು ದೆಹಲಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಕಳ್ಳನಿಗೆ ತಿರುಮಂತ್ರ ಹಾಕುವ ವಿಶಿಷ್ಟ ತಂತ್ರದ ಮೂಲಕ ಒಬ್ಬ ಕಳ್ಳನನ್ನು ಬಂಧಿಸಿದ ಪೊಲೀಸರು ಒಂದೇ ಏಟಿಗೆ 60ಕ್ಕೂ ಹೆಚ್ಚು ಪ್ರಕರಣಗಳನ್ನು ಬಗೆಹರಿಸಿದ್ದಾರೆ. ದಕ್ಷಿಣ ದೆಹಲಿಯ ದ್ವಾರಕ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದ ಕಳ್ಳರ ಆಟಾಟೋಪಕ್ಕೆ ಜನರು ತತ್ತರಿಸಿದ್ದರು. ಬೈಕ್ನಲ್ಲಿ ಮಿಂಚಿನ ವೇಗದಲ್ಲಿ ಬರುತ್ತಿದ್ದ ಕಳ್ಳ ಮಹಿಳೆಯರ ಕುತ್ತಿಗೆಯಲ್ಲಿದ್ದ ಸರಕಸಿದುಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದ.
ಅರ್ಮಾನ್ ಎಂದು ಗುರುತಿಸಲಾಗಿರುವ ಕಳ್ಳನ ಚಹರೆ ಮತ್ತು ನಡವಳಿಕೆಗಳನ್ನು ಹಲವು ದಿನಗಳಿಂದ ಗಮನಿಸುತ್ತಿದ್ದ ಪೊಲೀಸರು ಹಮ್ ಭಿ ಹೈ (ನಾವೂ ಅಲ್ಲಿದ್ದೇವೆ) ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದರು. ಮಹಿಳಾ ಪೊಲೀಸ್ ಸಿಬ್ಬಂದಿ ಸರೋಜ್ ಸಿಂಗ್ ಈ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸುವುದು ಎಂದು ತೀರ್ಮಾನವಾಯಿತು. ಆರೋಪಿಯು ದ್ವಾರಕಾದ 13ನೇ ಸೆಕ್ಟರ್ನಲ್ಲಿದ್ದಾನೆ ಎಂಬ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ಕೊರಳಿಗೆ ದಪ್ಪನೆ ಚಿನ್ನದ ಸರ ಹಾಕಿಕೊಂಡಿದ್ದ ಸಬ್ ಇನ್ಸ್ಪೆಕ್ಟರ್ ಸರೋಜ್ ಸಿಂಗ್ ಪ್ರಯಾಣಿಕರ ಸೋಗಿನಲ್ಲಿ ರಸ್ತೆಬದಿ ನಿಂತಿದ್ದರು.
‘ಉಳಿದ ಸಿಬ್ಬಂದಿ ಅಲ್ಲಲ್ಲಿ ಚೆದುರಿ, ಜನರಲ್ಲಿ ಬೆರೆತಿದ್ದರು. ಆರೋಪಿಯು ಸರೋಜ್ ಸಿಂಗ್ರ ಕುತ್ತಿಗೆಯ ಸರ ಸೆಳೆಯಲು ಯತ್ನಿಸಿದಾಗ ಇತರ ಪೊಲೀಸ್ ಸಿಬ್ಬಂದಿಗೆ ಅಲ್ಲಿಗೆ ಧಾವಿಸಿ ಅರ್ಮಾನ್ನನ್ನು ಹಿಡಿದುಕೊಳ್ಳಲು ಯತ್ನಿಸಿದರ. ಆದರೆ ಈ ಹಂತದಲ್ಲಿ ಅವನು ಪಿಸ್ತೂಲ್ ಹೊರತೆಗೆದು ಗುಂಡು ಹಾರಿಸಲು ಆರಂಭಿಸಿದ. ಸರೋಜ ಅವರು ತಕ್ಷಣ ತಮ್ಮ ಪಿಸ್ತೂಲ್ ಹೊರತೆಗೆದು ಆರೋಪಿಯ ಕಾಲಿಗೆ ಗುಂಡು ಹೊಡೆದರು’ ಎಂದು ಪೊಲೀಸ್ ಅಧಿಕಾರಿ ಶಂಕರ್ ಛೌಧರಿ ತಿಳಿಸಿದರು.
22 ವರ್ಷ ವಯೋಮಾನದ ಆರ್ಮಾನ್ ದೆಹಲಿಯ ಜಹಂಗೀರ್ಪುರಿ ಪ್ರದೇಶದಲ್ಲಿ ವಾಸಿಸುತ್ತಾನೆ. ಅವನ ವಿರುದ್ಧ ಈಗಾಗಲೇ 25 ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಅವನ ಬಂಧನದಿಂದ ಒಂದೇ ಏಟಿಗೆ 36 ಪ್ರಕರಣಗಳು ಬಗೆಹರಿದಿವೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರು: ಸರಗಳ್ಳತನ ಮಾಡುತ್ತಿದ್ದ ಇಬ್ಬರು ಹಾಗೂ ಕದ್ದ ಮಾಲು ಖರೀದಿಸುತ್ತಿದ್ದ ಒಬ್ಬನ ಬಂಧನ
ಇದನ್ನೂ ಓದಿ: ಕುತ್ತಿಗೆಗೆ ಕೈಹಾಕಿ ಸರಗಳ್ಳತನ; ವೃದ್ಧೆಯ 2 ಲಕ್ಷ ರೂ. ಬೆಲೆಬಾಳುವ ಮಾಂಗಲ್ಯ ಸರ ಎಗರಿಸಿದ ಸರಗಳ್ಳರು