ಮೊದಲು ಮಾತಾಡ್ಸಿದ್ರು, ಆಮೇಲೆ ನೀರು, ಫೋನ್ ಕೊಟ್ರು ,ಸೇತುವೆಯಿಂದ ಹಾರಲು ಹೊರಟವನ ಪೊಲೀಸ್ ತಡೆದಿದ್ಹೇಗೆ?

ದೆಹಲಿ ಪೊಲೀಸರು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮಹಿಪಾಲಪುರ ಫ್ಲೈಓವರ್‌ನಿಂದ ಕಾಪಾಡಿದ್ದಾರೆ. ಎಸ್‌ಐ ಅನಿಲ್ ಶರ್ಮಾ ಅವರು ಆತನೊಂದಿಗೆ ಶಾಂತವಾಗಿ ಮಾತನಾಡಿ, ನೀರು ಮತ್ತು ಫೋನ್ ನೀಡುವ ಮೂಲಕ ಗಮನ ಬೇರೆಡೆಗೆ ಸೆಳೆದರು. ಬಳಿಕ ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾದರು. ಮಾನವೀಯತೆ ಮತ್ತು ಸಮಯೋಚಿತ ಕಾರ್ಯಕ್ಕೆ ಈ ಘಟನೆ ಮಾದರಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೊದಲು ಮಾತಾಡ್ಸಿದ್ರು, ಆಮೇಲೆ ನೀರು, ಫೋನ್ ಕೊಟ್ರು ,ಸೇತುವೆಯಿಂದ ಹಾರಲು ಹೊರಟವನ ಪೊಲೀಸ್ ತಡೆದಿದ್ಹೇಗೆ?
ಸಾಂದರ್ಭಿಕ ಚಿತ್ರ
Image Credit source: News 18

Updated on: Jun 17, 2026 | 2:18 PM

ನವದೆಹಲಿ, ಜೂನ್ 17: ಸೇತುವೆಯಿಂದ ಕೆಳಗೆ ಹಾರಲು ಹೊರಟ ವ್ಯಕ್ತಿಯನ್ನು ಮೊದಲು ಶಾಂತವಾಗಿ ಮಾತನಾಡಿಸಿದ್ರು, ಆಮೇಲೆ ಕುಡಿಯಲು ನೀರು ಕೊಟ್ರು, ಮಾತನಾಡಲು ಫೋನ್ ಕೂಡ ಕೊಟ್ರು ಆತನ ಗಮನ ಬೇರೆಡೆಗೆ ತಿರುತ್ತಿದ್ದಂತೆ ಆತನನ್ನು ಕೆಳಗೆ ಇಳಿಸುವಲ್ಲಿ ಪೊಲೀಸ್(Police) ಅಧಿಕಾರಿ ಯಶಸ್ವಿಯಾಗಿದ್ದಾರೆ. ದೆಹಲಿಯ ಮಹಿಪಾಲಪುರ ಫ್ಲೈಓವರ್‌ ಮೇಲೆ ನಡೆದ ಈ ರೋಮಾಂಚಕ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ದೆಹಲಿ ಪೊಲೀಸರು ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಯುವಕನೊಬ್ಬ ಮಹಿಪಾಲಪುರ ಫ್ಲೈಓವರ್‌ನ ಅತ್ಯಂತ ಅಪಾಯಕಾರಿ ಅಂಚಿನ ಮೇಲೆ ನಿಂತು ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ. ಮಾಹಿತಿ ತಿಳಿದ ತಕ್ಷಣ ಸಬ್-ಇನ್ಸ್‌ಪೆಕ್ಟರ್ (SI) ಅನಿಲ್ ಶರ್ಮಾ ಅವರು ಸ್ಥಳಕ್ಕೆ ಹೋಗಿದ್ದಾರೆ. ಯುವಕ ಆತುರದಲ್ಲಿ ಕೆಳಗೆ ಬೀಳಬಹುದು ಎಂಬ ಕಾರಣಕ್ಕೆ ಅಧಿಕಾರಿ ಯಾವುದೇ ಗಡಿಬಿಡಿ ಮಾಡದೆ ಅತ್ಯಂತ ಶಾಂತವಾಗಿ ಕಾರ್ಯಾಚರಣೆ ಆರಂಭಿಸಿದರು.

ತಕ್ಷಣವೇ ಆತನನ್ನು ಹಿಡಿಯಲು ಹೋಗದ ಎಸ್‌ಐ ಅನಿಲ್ ಶರ್ಮಾ, ಮೊದಲು ಆತನೊಂದಿಗೆ ಆತ್ಮೀಯವಾಗಿ ಮಾತನಾಡಲು ಶುರು ಮಾಡಿದರು. ಯುವಕನ ನಂಬಿಕೆ ಗಳಿಸಲು ಪ್ರಯತ್ನಿಸುತ್ತಾ, ಕುಡಿಯಲು ಸ್ವಲ್ಪ ನೀರು ಕೊಟ್ಟಿದ್ದಾರೆ. ನಂತರ ಅವನ ಗಮನವನ್ನು ಆತ್ಮಹತ್ಯೆಯ ಆಲೋಚನೆಯಿಂದ ಸಂಪೂರ್ಣವಾಗಿ ಬೇರೆಡೆಗೆ ತಿರುಗಿಸಲು ತಮ್ಮ ಮೊಬೈಲ್ ಫೋನ್ ಅನ್ನು ಅವನ ಕೈಗೆ ನೀಡಿದರು. ಯುವಕ ಫೋನ್ ನೋಡುತ್ತಾ ನಿಂತಾಗ ಪರಿಸ್ಥಿತಿ ತುಸು ಶಾಂತವಾಯಿತು.

ವಿಡಿಯೋ

ಯುವಕ ಫೋನ್‌ನಲ್ಲಿ ಮಗ್ನನಾಗಿರುವಾಗ ಎಸ್‌ಐ ಅನಿಲ್ ಶರ್ಮಾ ಅವರು ಹಠಾತ್ತನೆ ಮುನ್ನುಗ್ಗಿ ಆತನನ್ನು ಗಟ್ಟಿಯಾಗಿ ಅಪ್ಪಿ ಹಿಡಿದು ಫ್ಲೈಓವರ್ ಅಂಚಿನಿಂದ ಹಿಂದಕ್ಕೆ ಎಳೆದರು. ತಕ್ಷಣವೇ ಹತ್ತಿರ ನಿಂತಿದ್ದ ಇತರ ಪೊಲೀಸರು ಮತ್ತು ಸಾರ್ವಜನಿಕರು ಓಡಿ ಬಂದು ಯುವಕನನ್ನು ಸುರಕ್ಷಿತವಾಗಿ ರಕ್ಷಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:15 pm, Wed, 17 June 26

Follow Us