ನ. 1ರ ಇಂಡಿಯಾ ಒಕ್ಕೂಟದ ಬೃಹತ್ ರ್ಯಾಲಿಗೆ ದೆಹಲಿ ಪೊಲೀಸರು ವಿಧಿಸಿರುವ ಷರತ್ತುಗಳೇನು?
ಎಸ್ಐಆರ್ ಪ್ರಕ್ರಿಯೆಯ ಅಕ್ರಮಗಳು ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವು ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿದೆ. ಈ 'ವೋಟ್ ಬಚಾವೋ, ದೇಶ್ ಬಚಾವೋ' ರ್ಯಾಲಿಗೆ ದೆಹಲಿ ಪೊಲೀಸರು ಪ್ರಮುಖ ಷರತ್ತುಗಳೊಂದಿಗೆ ಅನುಮತಿ ನೀಡಿದ್ದಾರೆ. ಪ್ರಮುಖ ವಿರೋಧ ಪಕ್ಷಗಳ ಪ್ರಮುಖ ನಾಯಕರು, ಕಾರ್ಯಕರ್ತರು, ವಿದ್ಯಾರ್ಥಿ ಸಂಘಟನೆಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳು ಈ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ನವದೆಹಲಿ, ಅಕ್ಟೋಬರ್ 27: ನವೆಂಬರ್ 1ರಂದು ನವದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಬೃಹತ್ ‘ವೋಟ್ ಬಚಾವೋ, ದೇಶ್ ಬಚಾವೋ’ (ಮತ ಉಳಿಸಿ, ದೇಶ ಉಳಿಸಿ) ರ್ಯಾಲಿ ನಡೆಸಲು ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ಆದರೆ, ಸಂಜೆ 5 ಗಂಟೆಯೊಳಗೆ ಕಾರ್ಯಕ್ರಮ ಮುಕ್ತಾಯಗೊಳಿಸುವುದು ಹಾಗೂ ಉದ್ರೇಕಕಾರಿ ಭಾಷಣಗಳ ಮೇಲಿನ ನಿಷೇಧ ಸೇರಿದಂತೆ ಹಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ. ರ್ಯಾಲಿಗೆ ಮುಂಚಿತವಾಗಿ ಅಥವಾ ನಂತರದಲ್ಲಿ ರಾಮಲೀಲಾ ಮೈದಾನದಲ್ಲಿ ರಾತ್ರಿ ತಂಗಲು ಯಾರಿಗೂ ಅವಕಾಶವಿಲ್ಲ. ಷರತ್ತುಗಳನ್ನು ಉಲ್ಲಂಘಿಸಿದರೆ ಅಥವಾ ಪೋಲಿಸ್ ನಿರ್ದೇಶನಗಳನ್ನು ಪಾಲಿಸದಿದ್ದರೆ ಆಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ನೀಡಲಾದ ಅನುಮತಿಯನ್ನು ರದ್ದುಗೊಳಿಸಲಾಗುವುದು ಎಂದು ನೋಟಿಸ್ನಲ್ಲಿ ಎಚ್ಚರಿಸಲಾಗಿದೆ.
ಪ್ರತಿಭಟನಾ ಸಮಾವೇಶವು ಶಾಂತಿಯುತವಾಗಿರಬೇಕು. ಯಾವುದೇ ರೀತಿಯ ಹಿಂಸಾಚಾರ, ಸಾರ್ವಜನಿಕ ಶಾಂತಿಗೆ ಭಂಗ ಅಥವಾ ಗಲಾಟೆಗಳು ನಡೆಯಬಾರದು ಎಂದು ಪೊಲೀಸರು ಆಯೋಜಕರಿಗೆ ನಿರ್ದೇಶಿಸಿದ್ದಾರೆ. ರ್ಯಾಲಿಯು ಸಂಜೆ 5 ಗಂಟೆಗೆ ಸರಿಯಾಗಿ ಮುಕ್ತಾಯಗೊಳ್ಳಬೇಕು ಮತ್ತು ತಕ್ಷಣವೇ ಭಾಗವಹಿಸಿದವರು ಮೈದಾನದಿಂದ ನಿರ್ಗಮಿಸಲು ಪ್ರಾರಂಭಿಸಬೇಕು. ಯಾವುದೇ ಕಾರಣಕ್ಕೂ ಕಾರ್ಯಕ್ರಮದ ಸಮಯವನ್ನು ವಿಸ್ತರಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ದೀಪಾವಳಿ ಹಬ್ಬದ ವ್ಯಾಪಾರದ ಹಿನ್ನೆಲೆಯಲ್ಲಿ ವರ್ತಕರ ಸಂಘವು ರ್ಯಾಲಿಯನ್ನು ಮುಂದೂಡುವಂತೆ ಕೋರಿತ್ತಾದರೂ, ಪ್ರತಿಭಟನೆ ನಿಗದಿತ ದಿನಾಂಕದಂದೇ ನಡೆಯಲಿದೆ ಎಂದು ಒಕ್ಕೂಟದ ನಾಯಕರು ಸ್ಪಷ್ಟಪಡಿಸಿದ್ದಾರೆ.
Delhi Police say – “Permissions regarding NOC for booking of Ramlila Ground from 25.10.2026 to 03.11.2026 to organize rally on 01.11.2026. stands even now.”
“We have no objection for the same fromn law & order point of view on the below mentioned terms & conditions subject to obtaining prior permission from the land owning authority..,: says Delhi Police’s letter dated 17th October 2026.
— ANI (@ANI) October 27, 2026
ಎಸ್ಐಆರ್ ವಿರೋಧಿ ಹೋರಾಟ:
ಚುನಾವಣಾ ಆಯೋಗವು ನಡೆಸುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಕಾನೂನುಬಾಹಿರವಾಗಿ ಕೈಬಿಡಲಾಗಿದೆ ಹಾಗೂ ‘ಫಾರ್ಮ್ 6’ ರಲ್ಲಿ ಅಕ್ರಮ ತಿದ್ದುಪಡಿ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ‘ಇಂಡಿಯಾ’ ಒಕ್ಕೂಟ ಒತ್ತಾಯಿಸುತ್ತಿದೆ.
ಇದನ್ನೂ ಓದಿ: ‘ದೇಶದ ಕ್ಷಮೆಯಾಚಿಸಿ’; ಸೇನೆಯಿಂದ ಚೀನಾ ಕುರಿತ ನಕಲಿ ವಿಡಿಯೋ ಬಯಲಾದ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಕಿರಣ್ ರಿಜಿಜು ವಾಗ್ದಾಳಿ
ದೆಹಲಿ ಪೊಲೀಸರು ವಿಧಿಸಿರುವ ಷರತ್ತುಗಳು:
ಸಮಯ ಮಿತಿ: ರ್ಯಾಲಿಯನ್ನು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯೊಳಗೆ ಮುಕ್ತಾಯಗೊಳಿಸಬೇಕು. ಸಂಜೆ 5 ಗಂಟೆಯ ನಂತರ ಯಾವುದೇ ಕಾರಣಕ್ಕೂ ಮೈದಾನದಲ್ಲಿ ಉಳಿಯಲು ಅವಕಾಶವಿಲ್ಲ. ರ್ಯಾಲಿಗೆ ಮುಂಚಿತವಾಗಿ ಅಥವಾ ರ್ಯಾಲಿಯ ನಂತರ ಮೈದಾನದಲ್ಲಿ ಯಾರೂ ರಾತ್ರಿ ತಂಗುವಂತಿಲ್ಲ.
ಉದ್ರೇಕಕಾರಿ ಭಾಷಣ ನಿಷೇಧ: ರ್ಯಾಲಿಯಲ್ಲಿ ಯಾವುದೇ ರೀತಿಯ ಭದ್ರತೆಗೆ ಧಕ್ಕೆ ತರುವ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಉದ್ರೇಕಕಾರಿ ಭಾಷಣಗಳನ್ನು ಮಾಡುವಂತಿಲ್ಲ.
ಮೆರವಣಿಗೆಗೆ ಅವಕಾಶವಿಲ್ಲ: ರಾಮಲೀಲಾ ಮೈದಾನದಿಂದ ದೆಹಲಿಯ ಇತರ ಭಾಗಗಳಿಗೆ ಯಾವುದೇ ರೀತಿಯ ಪ್ರದರ್ಶನ ಅಥವಾ ಪಾದಯಾತ್ರೆ ನಡೆಸಲು ಅನುಮತಿ ಇರುವುದಿಲ್ಲ.
ಸಿಸಿಟಿವಿ ಕಣ್ಗಾವಲು: ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ವೇದಿಕೆ, ಆಸನ ವ್ಯವಸ್ಥೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೈ-ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ರೆಕಾರ್ಡಿಂಗ್ ಸೌಲಭ್ಯ ಹಾಗೂ ಕನಿಷ್ಠ 5 ಮಾನಿಟರ್ಗಳನ್ನು ಹೊಂದಿರುವ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಬೇಕು.
ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ: ರ್ಯಾಲಿಯಲ್ಲಿ ಭಾಗವಹಿಸುವವರಿಗೆ ಪರ್ಯಾಪ್ತ ನೀರಿನ ಟ್ಯಾಂಕರ್ ಮತ್ತು ಶೌಚಾಲಯ ವ್ಯವಸ್ಥೆ ಮಾಡಬೇಕು. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿರಬೇಕು.
ಸ್ವಯಂಸೇವಕರ ನಿಯೋಜನೆ: ರ್ಯಾಲಿ ಶಿಸ್ತುಬದ್ಧವಾಗಿ ನಡೆಯಲು ಅಗತ್ಯ ಸಂಖ್ಯೆಯ ಸ್ವಯಂಸೇವಕರನ್ನು ನಿಯೋಜಿಸಬೇಕು. ಪ್ರತಿಯೊಬ್ಬ ಸ್ವಯಂಸೇವಕರು ನಿರ್ದಿಷ್ಟ ಸಮವಸ್ತ್ರ ಅಥವಾ ಬ್ಯಾಡ್ಜ್ಗಳ ಮೂಲಕ ಗುರುತಿಸಿಕೊಳ್ಳುವಂತಿರಬೇಕು.
ಹಿಂಸಾಚಾರ ಮತ್ತು ಅಶಾಂತಿಗೆ ನಿಷೇಧ: ರ್ಯಾಲಿ ಶಾಂತಿಯುತವಾಗಿರುವುದನ್ನು ಆಯೋಜಕರು ಖಚಿತಪಡಿಸಿಕೊಳ್ಳಬೇಕು. ಯಾವುದೇ ರೀತಿಯ ಹಿಂಸಾಚಾರ, ಸಾರ್ವಜನಿಕ ಅಶಾಂತಿ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳನ್ನು ಸಹಿಸುವುದಿಲ್ಲ.
ಜಾತಿ, ಧರ್ಮ ಆಧಾರಿತ ಉದ್ರೇಕಕಾರಿ ಭಾಷಣ ನಿಷೇಧ: ಜಾತಿ, ಧರ್ಮ ಅಥವಾ ಚರ್ಮದ ಬಣ್ಣದ ಆಧಾರದ ಮೇಲೆ ಜನರ ನಡುವೆ ಉದ್ವಿಗ್ನತೆ ಸೃಷ್ಟಿಸುವ ಅಥವಾ ಸಾಮಾಜಿಕ ಸಾಮರಸ್ಯಕ್ಕೆ ಭಂಗ ತರುವ ಯಾವುದೇ ಭಾಷಣಗಳನ್ನು ವೇದಿಕೆಯಿಂದ ಮಾಡುವಂತಿಲ್ಲ.
ಉದ್ರೇಕಕಾರಿ ಭಾಷಣದ ವಿರುದ್ಧ ತಕ್ಷಣದ ಕ್ರಮ: ಯಾವುದೇ ಭಾಷಣಕಾರರು ಉದ್ರೇಕಕಾರಿ ಅಥವಾ ಬೆದರಿಕೆಯೊಡ್ಡುವ ಭಾಷಣ ಮಾಡಲು ಪ್ರಾರಂಭಿಸಿದರೆ, ಆಯೋಜಕರು ತಕ್ಷಣವೇ ಮೈಕ್ರೋಫೋನ್ ಆಫ್ ಮಾಡಿ, ಅವರನ್ನು ವೇದಿಕೆಯಿಂದ ಇಳಿಸಬೇಕು.
ಮೈದಾನದಿಂದ ಹೊರಗೆ ಮೆರವಣಿಗೆ ಇಲ್ಲ: ರ್ಯಾಲಿಯ ಸಮಯದಲ್ಲಿ ರಾಮಲೀಲಾ ಮೈದಾನದಿಂದ ಬೇರೆ ಯಾವುದೇ ಸ್ಥಳಕ್ಕೆ ಯಾವುದೇ ರೀತಿಯ ಪಾದಯಾತ್ರೆ ಅಥವಾ ಮೆರವಣಿಗೆ ನಡೆಸಲು ಅನುಮತಿ ಇಲ್ಲ.
ನಿಗದಿತ ಜಾಗದಲ್ಲೇ ವಾಹನಗಳ ಪಾರ್ಕಿಂಗ್: ರ್ಯಾಲಿಗೆ ಆಗಮಿಸುವ ಬಸ್ಗಳು, ಕಾರುಗಳು, ಟೆಂಪೋಗಳು ಹಾಗೂ ಇತರ ವಾಹನಗಳನ್ನು ಸಂಚಾರ ಪೊಲೀಸರು ಗುರುತಿಸಿದ ಸ್ಥಳಗಳಲ್ಲಿ ಮಾತ್ರ ಪಾರ್ಕ್ ಮಾಡಬೇಕು.
ಪೊಲೀಸ್ ಸೂಚನೆಗಳ ಪಾಲನೆ: ಆಯೋಜಕರು ದೆಹಲಿ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಬೇಕು. ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ ಆಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
ಕಾರ್ಯಕ್ರಮದ ಪೂರ್ಣ ವಿವರ ಸಲ್ಲಿಕೆ: ಆಹ್ವಾನಿತರು ಮತ್ತು ಸ್ವಯಂಸೇವಕರ ಪಟ್ಟಿ, ಕಾರ್ಯಕ್ರಮದ ನಿಮಿಷದಿಂದ ನಿಮಿಷದ ವೇಳಾಪಟ್ಟಿ, ಬಸ್ಗಳ ಸಂಖ್ಯೆ ಮತ್ತು ಅವುಗಳ ನೋಂದಣಿ ಸಂಖ್ಯೆಯನ್ನು ಪೊಲೀಸರಿಗೆ ಆಯೋಜಕರು ಒದಗಿಸಬೇಕು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:20 pm, Tue, 27 October 26




