ದೆಹಲಿ – ಪುಣೆ ವಿಸ್ತಾರಾ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್ ದಾಳಿ ಬೆದರಿಕೆ ಕರೆ; ಆಮೇಲೇನಾಯ್ತು?
ಗುರುಗ್ರಾಮ್‌ನಲ್ಲಿರುವ ದೆಹಲಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (DIAL) ಕಂಟ್ರೋಲ್ ರೂಮ್‌ಗೆ ಬೆದರಿಕೆ ಕರೆ ಬಂದಿತ್ತು. ತಕ್ಷಣವೇ ಆ ಕುರಿತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮೂಲಕ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಸಂದೇಶ ರವಾನಿಸಲಾಗಿತ್ತು ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವದೆಹಲಿ, ಆಗಸ್ಟ್ 18: ದೆಹಲಿ – ಪುಣೆ ಮಧ್ಯೆ ಸಂಚರಿಸುವ ವಿಸ್ತಾರಾ ಏರ್‌ಲೈನ್ಸ್ (Vistara Airlines) ವಿಮಾನಕ್ಕೆ ಶುಕ್ರವಾರ ಬಾಂಬ್ ಬೆದರಿಕೆ (Bomb Threat) ಕರೆ ಬಂದ ಕಾರಣ ಕೆಲ ಕಾಲ ಆತಂಕದ ಸನ್ನಿವೇಶ ಸೃಷ್ಟಿಯಾಯಿತು. ಬೆದರಿಕೆ ಕರೆ ಬಂದ ಕಾರಣ ಸುಮಾರು 8 ಗಂಟೆ ಕಾಲ ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ನಿಲ್ಲುವಂತಾಯಿತು. ನಂತರ ಅದು ಹುಸಿ ಬೆದರಿಕೆ ಎಂಬುದು ತಿಳಿದುಬಂದಿದೆ ಎಂದು ಭದ್ರತಾ ಮೂಲಗಳು ಮತ್ತು ಪೊಲೀಸರು ತಿಳಿಸಿದ್ದಾರೆ. ಪುಣೆಗೆ ಹೊರಡಬೇಕಿದ್ದ ವಿಮಾನಕ್ಕೆ ಬೆಳಗ್ಗೆ 7:38 ಕ್ಕೆ ಬಾಂಬ್ ದಳಿ ಬೆದರಿಕೆ ಕರೆ ಬಂದಿದೆ. ನಂತರ ವ್ಯಾಪಕ ಭದ್ರತಾ ತಪಾಸಣೆಗಳನ್ನು ನಡೆಸಿ, ಮಧ್ಯಾಹ್ನ 2:15 ಕ್ಕೆ ಅದು ಹುಸಿ ಕರೆ ಎಂದು ಘೋಷಿಸಿಸಲಾಯಿತು.
ಬಾಂಬ್ ದಾಳಿ ಬೆದರಿಕೆ ಕರೆಯ ಪರಿಣಾಮ ಬೆಳಿಗ್ಗೆ 8:30 ಕ್ಕೆ ಹೊರಡಬೇಕಿದ್ದ ಯುಕೆ971 ವಿಮಾನವು ಸಂಜೆ 4.30 ಕ್ಕೆ ಹೊರಟಿತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು ಎಂದು ಮೂಲಗಳು ತಿಳಿಸಿವೆ. ಭದ್ರತಾ ತಪಾಸಣೆಯಿಂದಾಗಿ ವಿಮಾನ ಸಂಚಾರ ವಿಳಂಬವಾಗಿದೆ ಎಂದು ವಿಸ್ತಾರಾ ಏರ್‌ಲೈನ್ಸ್ ಪ್ರಕಟಣೆ ತಿಳಿಸಿದೆ.
ಗುರುಗ್ರಾಮ್‌ನಲ್ಲಿರುವ ದೆಹಲಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (DIAL) ಕಂಟ್ರೋಲ್ ರೂಮ್‌ಗೆ ಬೆದರಿಕೆ ಕರೆ ಬಂದಿತ್ತು. ತಕ್ಷಣವೇ ಆ ಕುರಿತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮೂಲಕ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಸಂದೇಶ ರವಾನಿಸಲಾಗಿತ್ತು ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಸೀಲಿಂಗ್ ಫ್ಯಾನ್ಗೆ ಸ್ಪ್ರಿಂಗ್! ಆತ್ಮಹತ್ಯೆಗೆ ತಡೆಗೆ ರಾಜಸ್ಥಾನದ ಕೋಟಾ ಹಾಸ್ಟೆಲ್ಗಳಿಂದ ಹೊಸ ಪ್ರಯೋಗ
ಆ ನಂತರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರಲ್ಲಿ ಶೋಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಯಿತು.
ಮೂರು ಬಾಂಬ್ ಇಟ್ಟಿರುವುದಾಗಿ ಬೆದರಿಕೆ
ಗೇಟ್ ಸಂಖ್ಯೆ 42 ರಲ್ಲಿ ನಿಲುಗಡೆ ಮಾಡಲಾದ ಯುಕೆ971 ವಿಮಾನದಲ್ಲಿ ಮೂರು ಬಾಂಬ್‌ಗಳನ್ನು ಇರಿಸಲಾಗಿದೆ ಮತ್ತು ಅವು ಒಂದು ಗಂಟೆಯಲ್ಲಿ ಸ್ಫೋಟಗೊಳ್ಳಲಿವೆ ಎಂದು ಬೆದರಿಕೆ ಕರೆಯಲ್ಲಿ ತಿಳಿಸಲಾಗಿತ್ತು. ತಕ್ಷಣವೇ ದೂರವಾಣಿ ಕರೆ ಕಟ್ ಆಗಿತ್ತು ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ