ದೆಹಲಿಯ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ನಡೆದಿದ್ದು ಸುಳ್ಳಾ, ತಂದೆಯೇ ಮಗಳ ಕೈಗೆ ಸುರಿದಿದ್ರಾ ಟಾಯ್ಲೆಟ್ ಕ್ಲೀನರ್?
ದೆಹಲಿಯ ವಿದ್ಯಾರ್ಥಿನಿ ಮೇಲೆ ನಡೆದಿದೆ ಎನ್ನಲಾದ ಆ್ಯಸಿಡ್ ದಾಳಿಯು ಇದೀಗ ಬೇರೆ ಕಥೆಯನ್ನೇ ಹೇಳುತ್ತಿದೆ. ನಿಜವಾಗಿಯೂ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆದೇ ಇಲ್ಲ, ಇದೆಲ್ಲವೂ ತಂದೆ, ಮಗಳು ಸೇರಿ ನಡೆಸಿದ ಪಿತೂರಿ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ದಾಳಿ ನಿಜವೆಂದು ಎಲ್ಲರನ್ನು ನಂಬಿಸಲು ಮನೆಯ ಟಾಯ್ಲೆಟ್ನಲ್ಲಿರುವ ಕ್ಲೀನರ್ ತೆಗೆದುಕೊಂಡು ಮಗಳ ಕೈಗೆ ಹಾಕಿದ್ದೇನೆ ಎಂಬ ಸತ್ಯ ಬಾಯ್ಬಿಟ್ಟಿದ್ದಾನೆ. ದಾಳಿಗೆ ಕೇವಲ ಎರಡು ದಿನಗಳ ಮೊದಲು ಜಿತೇಂದ್ರ ಅವರ ಪತ್ನಿ ಅವರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್ ದೂರು ದಾಖಲಿಸಿದ್ದರು

ನವದೆಹಲಿ, ಅಕ್ಟೋಬರ್ 28: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ(Acid Attack) ನಡೆದಿದೆ ಎನ್ನುವ ವಿಚಾರ ಸೋಮವಾರ ಮುನ್ನೆಲೆಗೆ ಬಂದಿತ್ತು. ಜಿತೇಂದ್ರ ಎಂಬಾತ ತನ್ನ ಸ್ನೇಹಿತರ ಜತೆ ಸೇರಿ ಈ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಈ ಘಟನೆಗೆ ಯಾರೂ ಊಹಿಸಲಾಗದ ಟ್ವಿಸ್ಟ್ ಸಿಕ್ಕಿದೆ. ಈ ಮೊದಲು ಜಿತೇಂದ್ರ ಎಂಬುವವರ ಪತ್ನಿ ಈ ವಿದ್ಯಾರ್ಥಿನಿಯ ತಂದೆಯ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.
ಹಾಗಾಗಿ ಹಲವು ದಿನಗಳಿಂದ ಎರಡೂ ಕುಟಂಬದ ನಡುವೆ ವಿವಾದಗಳೆದ್ದಿದ್ದವು. ಹಾಗಾಗಿ ಜಿತೇಂದ್ರ ಹಾಗೂ ಅವರ ಸ್ನೇಹಿತರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಅಕೀಲ್ ಖಾನ್ ಮುಂದಾಗಿದ್ದರು. ಇದೀಗ ನಕಲಿ ಆ್ಯಸಿಡ್ ದಾಳಿಯ ಸೂತ್ರಧಾರ ಅಕೀಲ್ ಖಾನ್ನನ್ನು ಪೊಲೀಸರು ಬಂಧಿಸಿದ್ದಾರೆ. ಆ್ಯಸಿಡ್ ದಾಳಿ ಈಗ ಪಿತೂರಿಯ ಕಥೆಯಾಗಿ ತೆರೆದುಕೊಂಡಿದೆ. ತಂದೆ ಮಗಳ ಅದ್ಹೇಗೆ ಪ್ಲ್ಯಾನ್ ಮಾಡಿ ಪೊಲೀಸರ ದಾರಿ ತಪ್ಪಿಸಲು ಸಂಚು ರೂಪಿಸಿದ್ದರು ಎನ್ನುವ ಮಾಹಿತಿ ಇಲ್ಲಿದೆ.
ವಿಚಾರಣೆಯ ಸಮಯದಲ್ಲಿ ಅಕೀಲ್ ಖಾನ್ ತಪ್ಪೊಪ್ಪಿಕೊಂಡಿದ್ದಾನೆ. ಜಿತೇಂದ್ರ, ಇಶಾನ್ ಮತ್ತು ಅರ್ಮಾನ್ ಎಂಬ ಮೂವರು ವ್ಯಕ್ತಿಗಳ ವಿರುದ್ಧ ತಾನು ವೈಯಕ್ತಿಕ ದ್ವೇಷವನ್ನು ಹೊಂದಿದ್ದೆ, ಹಾಗಾಗಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ತಾನು ಮಗಳೊಂದಿಗೆ ಸೇರಿ ಆ್ಯಸಿಡ್ ದಾಳಿಯ ನಾಟವಾಡಿದೆ ಎಂದು ಅಕೀಲ್ ಹೇಳಿದ್ದಾನೆ.
ಮತ್ತಷ್ಟು ಓದಿ: Video: ಕಾಲೇಜು ಬಳಿ ಮೂವರು ಯುವಕರಿಂದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ
ಈ ದಾಳಿ ನಿಜವೆಂದು ಎಲ್ಲರನ್ನು ನಂಬಿಸಲು ಮನೆಯ ಟಾಯ್ಲೆಟ್ನಲ್ಲಿರುವ ಕ್ಲೀನರ್ ತೆಗೆದುಕೊಂಡು ಮಗಳ ಕೈಗೆ ಹಾಕಿದ್ದೇನೆ ಎಂಬ ಸತ್ಯ ಬಾಯ್ಬಿಟ್ಟಿದ್ದಾನೆ. ದಾಳಿಗೆ ಕೇವಲ ಎರಡು ದಿನಗಳ ಮೊದಲು ಜಿತೇಂದ್ರ ಅವರ ಪತ್ನಿ ಅವರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್ ದೂರು ದಾಖಲಿಸಿದ್ದರು. ಅವಮಾನಕ್ಕೆ ಹೆದರಿ, ಜಿತೇಂದ್ರ ಮತ್ತು ಅವರ ಸಹಚರರ ಮೇಲೆ ಆ್ಯಸಿಡ್ ದಾಳಿ ಪ್ರಕರಣವನ್ನು ಸೃಷ್ಟಿಸುವ ಮೂಲಕ ಗಮನ ಬೇರೆಡೆಗೆ ಸೆಳೆಯಲು ನಿರ್ಧರಿಸಿದ್ದ.
ಅಕ್ಟೋಬರ್ 26, 2025 ರಂದು, 20 ವರ್ಷದ ದೆಹಲಿ ವಿಶ್ವವಿದ್ಯಾಲಯದ ಬಿಕಾಂ ವಿದ್ಯಾರ್ಥಿನಿಯೊಬ್ಬಳು ತರಗತಿಗೆ ಹೋಗುತ್ತಿದ್ದಾಗ ಅಶೋಕ್ ವಿಹಾರ್‌ನಲ್ಲಿರುವ ಲಕ್ಷ್ಮಿ ಬಾಯಿ ಕಾಲೇಜು ಬಳಿ ಆ್ಯಸಿಡ್ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದ್ದಾಳೆ.
ತನ್ನನ್ನು ಹಿಂಬಾಲಿಸುತ್ತಿದ್ದ ಜಿತೇಂದ್ರ, ತನ್ನ ಸ್ನೇಹಿತರಾದ ಇಶಾನ್ ಮತ್ತು ಅರ್ಮಾನ್ ಜೊತೆಗೂಡಿ ಮೋಟಾರ್ ಸೈಕಲ್‌ನಿಂದ ತನ್ನ ಮೇಲೆ ಆ್ಯಸಿಡ್ ಎಸೆದಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ. ಮಹಿಳೆ ತನ್ನ ಮುಖವನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದಾಗ ಕೈಗಳಿಗೆ ಸುಟ್ಟ ಗಾಯಗಳಾಗಿವೆ ಎಂದು ಹೇಳಿದ್ದಳು. ದಾಳಿಯು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ರೋಶವನ್ನು ಹುಟ್ಟುಹಾಕಿತು ಮತ್ತು ಪೊಲೀಸರು ತ್ವರಿತ ಕ್ರಮ ಕೈಗೊಳ್ಳಲು ಕಾರಣವಾಯಿತು.
ಇಶಾನ್ ಮತ್ತು ಅರ್ಮಾನ್ ಅವರನ್ನು ಆಗ್ರಾದಲ್ಲಿ ಪತ್ತೆಹಚ್ಚಲಾಯಿತು, ಅಲ್ಲಿ ಅವರು ತಮ್ಮ ತಾಯಿ ಶಬ್ನಮ್ ಅವರೊಂದಿಗೆ ಇದ್ದರು,ಇದರಿಂದ ಪೊಲೀಸರಿಗೆ ಮತ್ತಷ್ಟು ಅನುಮಾನ ಬಂದಿತ್ತು. ಬಳಿಕ ಸರಿಯಾಗಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿತ್ತು.
ಹೆಣ್ಣುಮಕ್ಕಳು ಸ್ವಾರ್ಥಕ್ಕಾಗಿ ಈ ರೀತಿ ಸುಳ್ಳು ಕಥೆಗಳನ್ನು ಕಟ್ಟಿದರೆ ಸಮಾಜದಲ್ಲಿ ನಿಜವಾಗಿಯೂ ಈ ರೀತಿಯ ಘಟನೆ ನಡೆದರೂ ಜನರು ತಲೆ ಕೆಡಿಸಿಕೊಳ್ಳುವುದಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




