ಭುವನೇಶ್ವರ: ಡೆಲಾಯ್ಟ್ (Deloitte) ಕಂಪನಿಯ ಸಾಮರ್ಥ್ಯ ವೃದ್ಧಿ ಕೇಂದ್ರವನ್ನು (CEC) ಒಡಿಶಾದ (Odisha) ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik) ಭುವನೇಶ್ವರದಲ್ಲಿ ಉದ್ಘಾಟಿಸಿದ್ದಾರೆ. ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಸಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಒಡಿಶಾಕ್ಕೆ ಇದೊಂದು ಮಹತ್ವದ ದಿನ ಎಂದು ಬಣ್ಣಿಸಿದ್ದಾರೆ. ಜತೆಗೆ, ಪೂರ್ವ ಭಾರತದಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಉಪಕ್ರಮ ಕೈಗೊಳ್ಳಲಾಗಿದ್ದು, ಪ್ರತಿಭಾವಂತರ ರಾಜಧಾನಿಯಾಗಿರುವ ಒಡಿಶಾದಲ್ಲಿ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಲಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಪೂರ್ವ ಭಾರತದ ಅಭಿವೃದ್ಧಿ ಬಹು ಮುಖ್ಯವಾಗಿದೆ. ಡೆಲಾಯ್ಟ್‌ನ ಕೇಂದ್ರವು ಇತರ ಪ್ರಮುಖ ಕಂಪನಿಗಳಿಗೆ ರಾಜ್ಯದಲ್ಲಿ ತಮ್ಮ ಕೇಂದ್ರಗಳನ್ನು ಸ್ಥಾಪಿಸಲು ಮಾದರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
A momentous day for Odisha.
Sharing some glimpses of the inauguration of @Deloitte’s Capability Enhancement Centre in Bhubaneswar. A first-of-its-kind initiative in eastern India, this will open up new possibilities for the talented human capital of Odisha. @PIB_India pic.twitter.com/c8cINWSv6A
— Dharmendra Pradhan (@dpradhanbjp) January 6, 2023
ದೇಶದಲ್ಲಿ ಇದು ನಾಲ್ಕನೇ ಸಾಮರ್ಥ್ಯ ವೃದ್ಧಿ ಕೇಂದ್ರವಾಗಿದೆ. ಕೊಯಮತ್ತೂರು, ಥಾಣೆ ಮತ್ತು ಗುರುಗ್ರಾಮದಲ್ಲಿ ಈಗಾಗಲೇ ಕೇಂದ್ರಗಳು ಕಾರ್ಯಾಚರಿಸುತ್ತಿವೆ ಎಂದು ಡೆಲಾಯ್ಟ್‌ನ ಜಾಗತಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪುನೀತ್ ರಂಜನ್ ತಿಳಿಸಿದ್ದಾರೆ. ಜತೆಗೆ, ಕೆಲವು ವರ್ಷಗಳ ಹಿಂದೆ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗಿದ್ದೆ. ಆ ನಂತರ, ನಾನು ಅವರನ್ನು ದೆಹಲಿಯಲ್ಲಿ ಭೇಟಿಯಾದಾಗಲೆಲ್ಲಾ, ಅವರು ಒಡಿಶಾದಲ್ಲಿ ಡೆಲಾಯ್ಟ್‌ನ ಕೇಂದ್ರವನ್ನು ತೆರೆಯುವಂತೆ ವಿನಂತಿಸಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: NEP 2020: ಕೇಂದ್ರದಿಂದ ಪಿಎಂ ಶ್ರೀ ಮಾದರಿ ಶಾಲೆಗಳ ಸ್ಥಾಪನೆ: ಭವಿಷ್ಯಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಯೋಜನೆ
ಸಾಮರ್ಥ್ಯ ವೃದ್ಧಿ ಕೇಂದ್ರದಿಂದ ರಾಜ್ಯದಲ್ಲಿ ಐಟಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಲಿದೆ ಎಂದು ನವೀನ್ ಪಟ್ನಾಯಕ್ ತಿಳಿಸಿದ್ದಾರೆ. ಡೆಲಾಯ್ಟ್‌ನ ವಿಸ್ತರಣೆಗೆ ಪೂರಕವಾಗಿ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಭುವನೇಶ್ವರವು ಈಗಾಗಲೇ ಪೂರ್ವ ಭಾರತದ ಪ್ರಮುಖ ಐಟಿ ಹಬ್ ಆಗಿದೆ. ಇದೀಗ ಡೆಲಾಯ್ಟ್‌ನ ಉಪಸ್ಥಿತಿಯು ಐಟಿ ವಲಯದಲ್ಲಿ ರಾಜ್ಯದ ಸಾಮರ್ಥ್ಯಗಳನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಒಡಿಶಾದ ಐಟಿ ಸಚಿವ ಟಿ.ಕೆ. ಬೆಹ್ರಾ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:05 am, Sat, 7 January 23