NEP 2020: ಕೇಂದ್ರದಿಂದ ಪಿಎಂ ಶ್ರೀ ಮಾದರಿ ಶಾಲೆಗಳ ಸ್ಥಾಪನೆ: ಭವಿಷ್ಯಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಯೋಜನೆ
ಭಾರತದ ಎಲ್ಲಾ ಭಾಷೆಗಳು ರಾಷ್ಟ್ರೀಯ ಭಾಷೆಗಳಾಗಿವೆ. ಯಾವ ಭಾಷೆಯೂ ಹಿಂದಿ ಅಥವಾ ಇಂಗ್ಲಿಷ್ಗಿಂತ ಕಡಿಮೆ ಇಲ್ಲ ಎಂದು ಹೇಳಿದರು.
ಗಾಂಧಿನಗರ: ದೇಶದ ವಿವಿಧೆಡೆ ‘ಪಿಎಂ ಶ್ರೀ ಮಾದರಿ ಶಾಲೆ’ಗಳನ್ನು (PM Shri Model Schools) ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan), ಈ ಶಾಲೆಗಳು ರಾಷ್ಟ್ರೀಯ ಶಿಕ್ಷಣ ನೀತಿಯ (National Education Policy 2020 – NEP) ಪ್ರಯೋಗಶಾಲೆಯಾಗಲಿದೆ. ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಜ್ಜುಗೊಳಿಸಲು ಬೇಕಿರುವ ಎಲ್ಲ ಸೌಲಭ್ಯಗಳನ್ನೂ ಈ ಶಾಲೆಗಳಲ್ಲಿ ಒದಗಿಸಲಾಗುವುದು ಎಂದು ಹೇಳಿದರು.
ಗಾಂಧಿನಗರದಲ್ಲಿ ನಡೆಯುತ್ತಿರುವ ಶಿಕ್ಷಣ ಸಚಿವರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯಗಳು ಸಹ ಶಿಕ್ಷಣ ವ್ಯವಸ್ಥೆಯನ್ನು ಉನ್ನತ ದರ್ಜೆಗೆ ಏರಿಸಲು ಪ್ರಯತ್ನಿಸಬೇಕು. ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಶಾಲೆಗಳನ್ನು ರೂಪಿಸಲು ‘ಪಿಎಂ ಶ್ರೀ ಶಾಲೆ’ಗಳ ಮಾದರಿ ಅನುಸರಿಸಬೇಕು ಎಂದು ಹೇಳಿದರು. ಭಾರತದ ಎಲ್ಲಾ ಭಾಷೆಗಳು ರಾಷ್ಟ್ರೀಯ ಭಾಷೆಗಳಾಗಿವೆ. ಯಾವ ಭಾಷೆಯೂ ಹಿಂದಿ ಅಥವಾ ಇಂಗ್ಲಿಷ್ಗಿಂತ ಕಡಿಮೆ ಇಲ್ಲ. ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಅಂಶ ಎಂದು ಹೇಳಿದರು.
ಸಮಾವೇಶದಲ್ಲಿ ಗುಜರಾತ್ ಮುಖ್ಯಮಂತ್ರಿ ಭುಪೇಂದ್ರ ಪಟೇಲ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವರು, ವಿವಿಧ ರಾಜ್ಯಗಳ ಶಿಕ್ಷಣ ಸಚಿವರು, ರಾಷ್ಟ್ರಮಟ್ಟದಲ್ಲಿ ಹೊಸ ಪಠ್ಯಕ್ರಮ ರೂಪಿಸಲು ರಚಿಸಿರುವ ಮಾರ್ಗದರ್ಶಿ ಮಂಡಳಿಯ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ಮತ್ತು ಕೇಂದ್ರ, ರಾಜ್ಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಜಾಗತಿಕ ಕ್ಷೇಮಾಭಿವೃದ್ಧಿಗೆ ಪೂರಕವಾದ ಶಿಕ್ಷಣ ಆರ್ಥಿಕತೆಯನ್ನು ರೂಪಿಸುವುದು ಮುಂದಿನ 25 ವರ್ಷಗಳ ದೃಷ್ಟಿಯಿಂದ ಮಹತ್ವದ ಸಂಗತಿಯಾಗಿದೆ. ನಾವು ‘ವಸುದೈವ ಕುಟುಂಬಕಂ’ ಪರಿಕಲ್ಪನೆಯಲ್ಲಿ ವಿಶ್ವಾಸ ಇರಿಸಿದವರು. ನಮ್ಮ ದೇಶದ ಜನರಿಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಶಿಕ್ಷಣ ಕೊಡುವುದು ಕೇವಲ ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಿರುವ 5+3+3+4 ದೃಷ್ಟಿಕೋನವನ್ನು ಸಚಿವರು ವಿವರಿಸಿದರು. 21ನೇ ಶತಮಾನದ ಜಾಗತಿಕ ನಾಗರಿಕರಾಗಲು ನಮ್ಮ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಲು ಪೂರ್ವಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಯವರೆಗೆ ಸಮಗ್ರವಾಗಿ ಗಮನ ಹರಿಸಬೇಕಿದೆ. ಇದರೊಂದಿಗೆ ಶಿಕ್ಷಕರ ತರಬೇತಿ, ಕೌಶಲಾಭಿವೃದ್ಧಿ, ಮಾತೃಭಾಷೆಯಲ್ಲಿ ಶಿಕ್ಷಣ ಅತ್ಯಗತ್ಯ ಎಂದು ತಿಳಿಸಿದರು.
ವಿವಿಧ ರಾಜ್ಯಗಳ ಶಿಕ್ಷಣ ಸಚಿವರು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ದೇಶದ ಶಿಕ್ಷಣ ವ್ಯವಸ್ಥೆಗೆ ಬಲತುಂಬಲು ಈ ಸಮಾವೇಶ ನೆರವಾಗಲಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ಪಟೇಲ್, ಶಿಕ್ಷಣ ವ್ಯವಸ್ಥೆಯಲ್ಲಿ ಸತತ ಬದಲಾವಣೆ, ಸುಧಾರಣೆಗಳು ಅನಿವಾರ್ಯ. 34 ವರ್ಷಗಳಷ್ಟು ಹಳೆಯದಾಗಿದ್ದ ಶಿಕ್ಷಣ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬದಲಿಸಿದ್ದಾರೆ. ನಮ್ಮ ಸಂಸ್ಕೃತಿಯ ಪ್ರಕಾರ ಜ್ಞಾನವೆಂಬುದು ಬದುಕಿನ ಆಧಾರ ಸ್ತಂಭವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ವಿಚಾರದಲ್ಲಿ ಇಡೀ ದೇಶವು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈ ಜೋಡಿಸಿದೆ ಎಂದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:36 am, Fri, 3 June 22