ಸರ್ಕಾರಗಳನ್ನು ಉರುಳಿಸುವುದು ಬಿಜೆಪಿಯ ಹವ್ಯಾಸ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕೆ
ಶಾಸಕರ ಖರೀದಿ, ಬೆದರಿಕೆ ತಂತ್ರಗಳನ್ನು ಅನುಸರಿಸುವುದು ಪ್ರಜಾಪ್ರಭುತ್ವದ ಆಶಯಗಳನ್ನು ಉಲ್ಲಂಘಿಸಿದಂತೆ ಎಂದು ಖರ್ಗೆ ಹೇಳಿದ್ದಾರೆ.
ದೆಹಲಿ: ಸರ್ಕಾರಗಳನ್ನು ಉರುಳಿಸುವುದು ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಹವ್ಯಾಸವೇ ಆಗಿಬಿಟ್ಟಿದೆ. ಕರ್ನಾಟಕ, ಗೋವಾ, ಮಣಿಪುರ, ಮಧ್ಯಪ್ರದೇಶ, ಅರುಣಾಚಲಪ್ರದೇಶ, ಪುದುಚೇರಿ ಸೇರಿದಂತೆ ವಿವಿಧೆಡೆ ಇಂಥದ್ದೇ ಕೆಲಸ ಮಾಡಿದೆ. ಶಾಸಕರ ಖರೀದಿ, ಬೆದರಿಕೆ ತಂತ್ರಗಳನ್ನು ಅನುಸರಿಸುವುದು ಪ್ರಜಾಸತ್ತಾತ್ಮಕ ಮತ್ತು ಸಂವಿಧಾನ ಮೌಲ್ಯಗಳನ್ನು ಉಲ್ಲಂಘಿಸಿದಂತೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಶಿವಸೇನೆಯ ಬಂಡುಕೋರ ಶಾಸಕರ ಬಣದ ನೇತೃತ್ವ ವಹಿಸಿರುವ ಏಕನಾಥ್ ಶಿಂಧೆ ತಮಗೆ 40ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಮಹಾರಾಷ್ಟ್ರದ ಆಡಳಿತಾರೂಢ ಮಹಾವಿಕಾಸ್ ಅಘಾಡಿ ಮೈತ್ರಿ ಸರ್ಕಾರವು ಇದೀಗ ಪತನದ ಅಂಚಿಗೆ ಬಂದು ನಿಂತಿದೆ. ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎನ್ಸಿಪಿ ನಾಯಕರು ಬಿಜೆಪಿಯೇ ಈ ಬಿಕ್ಕಟ್ಟಿಗೆ ಕಾರಣ ಎಂದು ದೂರುತ್ತಿವೆಯಾದರೂ ಬಿಜೆಪಿ ಮಾತ್ರ ಈ ವಿವಾದದಿಂದ ಅಧಿಕೃತವಾಗಿ ಅಂತರ ಕಾಯ್ದುಕೊಂಡಿದೆ.
ಬಿಜೆಪಿ ಮಹಾರಾಷ್ಟ್ರ ಘಟಕದ ಮುಖ್ಯಸ್ಥರಾದ ಚಂದ್ರಶೇಖರ್ ಪಾಟೀಲ್, ಈ ಬಿಕ್ಕಟ್ಟಿನಲ್ಲಿ ತಮ್ಮ ಪಕ್ಷದ ಹಸ್ತಕ್ಷೇಪ ಇರುವುದನ್ನು ಸಾರಾಸಗಟಾಗಿ ತಳ್ಳಿಹಾಕಿದರು. ‘ಈ ವಿಚಾರದಲ್ಲಿ ಬಿಜೆಪಿ ಮಾಡುವಂಥದ್ದು ಏನೂ ಇಲ್ಲ’ ಎಂದು ಹೇಳಿದ್ದರು.
. @BJP4India is destabilizing a stable Govt in Maharashtra. Destabilizing democratically elected state Govts has become a habit for the BJP.
From Karnataka, MP, Goa, Manipur, Arunachal, to Puducherry, this undemocratic poaching and horse trading of MLAs is utterly disgraceful!
— Mallikarjun Kharge (@kharge) June 23, 2022
ಬಿಜೆಪಿ ಆಡಳಿತದ ಗುಜರಾತ್ಗೆ ಬಂಡುಕೋರ ಶಾಸಕರನ್ನು ಕರೆದೊಯ್ದಿದ್ದ ಏಕನಾಥ್ ಶಿಂಧೆ, ನಂತರ ಅಲ್ಲಿಂದ ಅಸ್ಸಾಂಗೆ ಸ್ಥಳಾಂತರಗೊಂಡಿದ್ದರು. ಅಸ್ಸಾಂನಲ್ಲಿ ಈಗ ಭೀಕರ ಪ್ರವಾಹದ ಸಮಸ್ಯೆ ತಲೆದೋರಿದೆ. ಆದರೆ ಬಿಜೆಪಿಯು ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ನಡೆಸಲು ತೋರುತ್ತಿರುವ ಆಸಕ್ತಿಯನ್ನು ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸಲು ತೋರುತ್ತಿಲ್ಲ ಎಂದು ಅಸ್ಸಾಂನ ಕಾಂಗ್ರೆಸ್ ನಾಯಕರು ಆಕ್ಷೇಪಿಸಿದ್ದರು.
ಮಹಾರಾಷ್ಟ್ರ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಬಂಡಾಯ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಶಿವಸೇನೆಯು ಸ್ಪೀಕರ್ಗೆ ಪತ್ರ ಬರೆದ ನಂತರ ಶಿಂದೆ ತಮ್ಮ ಬಣದಲ್ಲಿ 37ಕ್ಕೂ ಹೆಚ್ಚು ಶಾಸಕರಿದ್ದಾರೆ. ಅರ್ಧಕ್ಕೂ ಹೆಚ್ಚು ಮಂದಿ ನಮ್ಮ ಜೊತೆಗೆ ಇರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸಲು ಆಗುವುದಿಲ್ಲ ಎಂದು ಹೇಳಿದ್ದರು.
ಮಹಾರಾಷ್ಟ್ರದಿಂದ ಬಂದಿರುವ ಶಿವಸೇನೆ ಶಾಸಕರಿಗೆ ಅಸ್ಸಾಂ ಸರ್ಕಾರ ಆತಿಥ್ಯ ನೀಡುತ್ತಿದೆ ಎನ್ನುವ ಆಕ್ಷೇಪವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮವಂತ ಬಿಸ್ವಾ ಶರ್ಮಾ ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಅಸ್ಸಾಂನಲ್ಲಿ ಸಾಕಷ್ಟು ಉತ್ತಮ ಹೊಟೆಲ್ಗಳಿವೆ. ಎಲ್ಲಿಂದ ಬೇಕಾದರೂ, ಯಾರು ಬೇಕಾದರೂ ಬಂದು ಇಲ್ಲಿ ವಾಸ್ತವ್ಯ ಹೂಡಬಹುದು. ಮಹಾರಾಷ್ಟ್ರ ಮಾತ್ರವಲ್ಲ ಇತರ ರಾಜ್ಯಗಳ ಶಾಸಕರೂ ಇಲ್ಲಿಗೆ ಬರಬಹುದು ಎಂದು ಹೇಳಿದ್ದರು.