ರಸ್ತೆಬದಿ ಅಂಗಡಿಯಲ್ಲಿ ಬಜ್ಜಿ ತಿಂದು ಯುಪಿಐ ಮೂಲಕ ಹಣ ಪಾವತಿಸಿದ ಸಚಿವ ಧರ್ಮೇಂದ್ರ ಪ್ರಧಾನ್

|

Updated on: Apr 16, 2024 | 6:08 PM

Dharmendra Pradhan Visits Roadside Snacks Stall at Sambalpur: ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಾವು ಕಣದಲ್ಲಿರುವ ಸಂಬಲಪುರ್ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮುಂದುವರಿಸಿದ್ದಾರೆ. ಪ್ರಚಾರದ ಮಾರ್ಗಮಧ್ಯೆ ಅವರು ರಸ್ತೆ ಬದಿಯ ಬಜ್ಜಿ ಅಂಗಡಿಯಲ್ಲಿ ತಮ್ಮ ಕಾರ್ಯಕರ್ತರ ಜೊತೆ ಬಜ್ಜಿ ತಿಂದು ತಾವೇ ಖುದ್ದಾಗಿ ಯುಪಿಐ ಹಣ ಪಾವತಿ ಮಾಡಿದ್ದಾರೆ. ಈ ವೇಳೆ ನಗರಗಳಿಗೆ ಸೀಮಿತವಾಗಿ ಸೌಲಭ್ಯಗಳು ಡಿಜಿಟಲ್ ಇಂಡಿಯಾ ದೆಸೆಯಿಂದ ಗ್ರಾಮ ಗ್ರಾಮಕ್ಕೂ ತಲುಪಿವೆ ಎಂದು ಧರ್ಮೇಂದ್ರ ಪ್ರಧಾನ್ ಕೊಂಡಾಡಿದ್ದಾರೆ.

ರಸ್ತೆಬದಿ ಅಂಗಡಿಯಲ್ಲಿ ಬಜ್ಜಿ ತಿಂದು ಯುಪಿಐ ಮೂಲಕ ಹಣ ಪಾವತಿಸಿದ ಸಚಿವ ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್
Follow us on

ಸಂಬಲಪುರ್, ಏಪ್ರಿಲ್ 16: ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸಂಬಲಪುರ್ ಕ್ಷೇತ್ರದಲ್ಲಿ (Sambalpur lok sabha constituency) ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಸಚಿವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ರಸ್ತೆ ಬದಿಯ ಅಂಗಡಿಯೊಂದರಲ್ಲಿ ಬಜ್ಜಿ ಸವಿದ ಘಟನೆ ನಡೆಯಿತು. ಬಜ್ಜಿ ತಿಂದ ಬಳಿಕ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಬಜ್ಜಿ ಅಂಗಡಿಯವನಿಗೆ ಯುಪಿಐ ಮೂಲಕ ಹಣ ಪಾವತಿ ಮಾಡಿದರು. ಈ ವೇಳೆ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಸಚಿವರೂ ಆದ ಅವರು, ಡಿಜಿಟಲ್ ಇಂಡಿಯಾ ಮೂಲೆ ಮೂಲೆಯನ್ನೂ ತಲುಪಿದೆ ಎಂದು ಒತ್ತಿ ಹೇಳಿದ್ದಾರೆ.

ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರವೇ ಸಿಗುತ್ತಿದ್ದ ಸೌಲಭ್ಯಗಳು ಈಗ ಹಳ್ಳಿ ಹಳ್ಳಿಗಳಿಗೂ ತಲುಪಿವೆ. ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಮೂಲಕ ಇದನ್ನು ಸಾಧ್ಯವಾಗಿಸಿದ್ದಾರೆ. ಹೀಗಾಗಿ, ಸಂಬಲಪುರದಿಂದ ಸೌರಾಷ್ಟ್ರ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲರೂ ಕೂಡ ‘ಮತ್ತೊಮ್ಮೆ ಮೋದಿ ಸರ್ಕಾರ’ ಎಂದು ಹೇಳುತ್ತಿದ್ದಾರೆ ಎಂದು ಧರ್ಮೇಂದ್ರ ಪ್ರಧಾನ್ ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬ್ಯಾಲಟ್ ಪೇಪರ್ ಇದ್ದಾಗ ಏನಾಯಿತು ನೋಡಿದ್ದೇವೆ: ಇವಿಎಂ ವಿರೋಧಿಗಳಿಗೆ ಸುಪ್ರೀಂ ಕೋರ್ಟ್ ಉತ್ತರ

ಮಾ ಭದ್ರಕಾಳಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಚಿವರು…

ಸಂಬಲಪುರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಧರ್ಮೇಂದ್ರ ಪ್ರಧಾನ್ ಇಂದು ದೇವಗಡ್​ನ ಔನ್ಲಿಯಲ್ಲಿ ನಡೆದ ಮಾ ಭದ್ರಕಾಳಿ ಮೇರು ಯಾತ್ರೆಯಲ್ಲಿ ಭಾಗವಹಿಸಿದ್ದರು. ದೇವಿಯ ದರ್ಶನ ಸಿಕ್ಕಿದ್ದು ತಮ್ಮ ಪಾಲಿನ ಭಾಗ್ಯ ಎಂದು ಈ ವೇಳೆ ಅವರು ಹೇಳಿದರು.

‘ಜನರು ಆಹ್ವಾನ ಕೊಟ್ಟಿದ್ದರಿಂದ ಇಲ್ಲಿಗೆ ಬಂದು ದೇವಿಯ ದರ್ಶನ ಸಿಕ್ಕಿದೆ. ಇದು ನನ್ನ ಅದೃಷ್ಟ’ ಎಂದು ಅವರು ಬಣ್ಣಿಸಿದರು.

2019ರ ಚುನಾವಣೆಗಿಂತಲೂ ಕಾಂಗ್ರೆಸ್​ಗೆ ಕಡಿಮೆ ಸ್ಥಾನ: ಪ್ರಧಾನ್ ಭವಿಷ್ಯ

ಕಾಂಗ್ರೆಸ್ ಪಕ್ಷ 2019ರ ಚುನಾವಣೆಯಲ್ಲಿ ಗಳಿಸಿದ್ದ ಸ್ಥಾನಕ್ಕಿಂತಲೂ ಈ ಬಾರಿ ಕಡಿಮೆ ಗೆಲ್ಲುತ್ತದೆ. ಈ ದೇಶ ಮತ್ತು ರಾಜ್ಯಗಳಲ್ಲಿ ತಲೆತಲೆಮಾರುಗಳಿಂದ ಮತ್ತು ದಶಕಗಳಿಂದ ಇವರು ಆಡಳಿತ ನಡೆಸಿದ್ದಾರೆ. ಅಧಿಕಾರದಲ್ಲಿದ್ದಾಗ ಜನರಿಗೆ ದ್ರೋಹ ಎಸಗಿದ್ದಾರೆ. ವಿರೋಧ ಪಕ್ಷವಾಗಿ ಅವರು ಇನ್ನೂ ಕುಸಿಯುತ್ತಾರೆ ಎಂದಿದ್ದಾರೆ ಧರ್ಮೇಂದ್ರ ಪ್ರಧಾನ್.

ಇದನ್ನೂ ಓದಿ: ಚುನಾವಣೆ ವೇಳೆ ಜಪ್ತಿ ಮಾಡಲಾಗುವ ಹಣ, ಒಡವೆ, ಮದ್ಯ ಎಲ್ಲಿಗೆ ಹೋಗುತ್ತೆ?

21 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಒಡಿಶಾ ರಾಜ್ಯದಲ್ಲಿ ನಾಲ್ಕು ಹಂತದಲ್ಲಿ ಮತದಾನ ನಡೆಯಲಿದೆ. ಮೇ 13, ಮೇ 20, ಮೇ 25 ಮತ್ತು ಜೂನ್ 1ರಂದು ಇಲ್ಲಿ ಮತದಾನ ನಡೆಯುತ್ತದೆ. 2019ರ ಚುನಾವಣೆಯಲ್ಲಿ ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಡಿ 12 ಸ್ಥಾನ ಗೆದ್ದರೆ ಬಿಜೆಪಿಗೆ 8 ಸ್ಥಾನ ಸಿಕ್ಕಿತ್ತು. ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಗೆಲ್ಲಲು ಶಕ್ಯವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ