AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣಾ ಬೇಟೆ; ಜನವರಿಯಿಂದೀಚೆ 12,000 ಕೋಟಿ ರೂ ಮೌಲ್ಯದ ನಗದು ಮತ್ತಿತರ ವಸ್ತುಗಳು ಜಫ್ತಿ

Highest Seizures In Indian Lok Sabha Polls History: ಏಪ್ರಿಲ್ 19ರಿಂದ ಜೂನ್ 5ರವರೆಗೆ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಅಕ್ರಮದಿಂದ ಮುಕ್ತವಾಗಿ ಇರುವಂತೆ ಎಲೆಕ್ಷನ್ ಕಮಿಷನ್ ನಿಗಾ ಇರಿಸಿದೆ. ನಿಯಮಕ್ಕೆ ವಿರುದ್ಧವಾಗಿ ಅಕ್ರಮವಾಗಿ ಹಣ, ಹೆಂಡ ಇತ್ಯಾದಿ ವಸ್ತುಗಳು ಮತದಾರರಿಗೆ ಹಂಚಿಕೆ ಆಗುವುದುಂಟು. ಇದನ್ನು ತಡೆಯಲು ಚುನಾವಣಾ ಆಯೋಗ ಹಾಗೂ ಇತರ ಏಜೆನ್ಸಿಗಳು ಎಚ್ಚರದಿಂದಿರುತ್ತವೆ. ಮಾರ್ಚ್ 1ರಿಂದ ಏಪ್ರಿಲ್ 13ರವರೆಗೆ ಜಫ್ತಿಯಾದ ಅಕ್ರಮ ವಸ್ತುಗಳ ಮೌಲ್ಯ 4,658 ಕೋಟಿ ರೂ ಎಂದು ಹೇಳಲಾಗಿದೆ. ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಅತಿಹೆಚ್ಚು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ಬೇಟೆ; ಜನವರಿಯಿಂದೀಚೆ 12,000 ಕೋಟಿ ರೂ ಮೌಲ್ಯದ ನಗದು ಮತ್ತಿತರ ವಸ್ತುಗಳು ಜಫ್ತಿ
ಚುನಾವಣಾ ಆಯೋಗ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 16, 2024 | 4:04 PM

Share

ನವದೆಹಲಿ, ಏಪ್ರಿಲ್ 16: ಚುನಾವಣೆ ಎಂದರೆ ಅಭ್ಯರ್ಥಿಗಳ ಹಣಾಹಣಿ ಬಲು ಜೋರಾಗಿ ನಡೆಯುತ್ತದೆ. ಮತದಾರರನ್ನು ಆಕರ್ಷಿಸಲು ಅಭ್ಯರ್ಥಿಗಳು ತರಹೇವಾರಿ ತಂತ್ರಗಳ ಮೂಲಕ ಕಸರತ್ತು ನಡೆಸುತ್ತಾರೆ. ಹಣದ ಹೊಳೆಯೇ ಹರಿಯುವುದುಂಟು. ಗೋಲ್ಡ್, ಸಿಲ್ವರ್ ಕಾಯಿನ್, ಕುಕ್ಕರ್, ಸೀರೆ ಇತ್ಯಾದಿ ಉಡುಗೊರೆಗಳಂತೂ (election freebies) ಲೆಕ್ಕವಿಲ್ಲದಂತೆ ಮನೆ ಮನೆಗಳಿಗೆ ಸಾಗುವುದುಂಟು. ಹೆಂಡ, ಮಾದಕ ವಸ್ತುಗಳು ಸಾಕಷ್ಟು ಹಂಚಿಕೆ ಆಗುವುದುಂಟು. ಇವುಗಳೆಲ್ಲದರಿಂದ ಚುನಾವಣೆಯನ್ನು ಮುಕ್ತಗೊಳಿಸಲು ಎಲೆಕ್ಷನ್ ಕಮಿಷನ್ (Election Commission) ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೂ ಸಾಕಷ್ಟು ಕಡೆ ಇಂಥ ಅಕ್ರಮಗಳು ಆಗುತ್ತಿರುತ್ತವೆ. ಮಾರ್ಚ್​ನಿಂದೀಚೆ ಜಫ್ತಿ ಮಾಡಿಕೊಳ್ಳಲಾದ ಅಕ್ರಮ ಹಣ, ಹೆಂಡ, ಉಡುಗೊರೆ ಇತ್ಯಾದಿಗಳ ಮೌಲ್ಯ ನಾಲ್ಕು ಸಾವಿರ ಕೋಟಿ ರೂಗೂ ಹೆಚ್ಚಿದೆ.

ಮಾರ್ಚ್ 1ರಿಂದ ಏಪ್ರಿಲ್ 13ರವರೆಗೆ ವಿವಿಧ ಏಜೆನ್ಸಿಗಳ ಸಹಾಯದೊಂದಿಗೆ 4,658 ಕೋಟಿ ರೂ ಮೌಲ್ಯದ ಹಣ, ಹೆಂಡ, ಚಿನ್ನ, ಬೆಳ್ಳಿ, ಡ್ರಗ್ಸ್ ಇತ್ಯಾದಿ ವಸ್ತುಗಳ ಜಪ್ತಿ ಮಾಡಲಾಗಿದೆ ಎಂದು ಎಲೆಕ್ಷನ್ ಕಮಿಷನ್ ಮಾಹಿತಿ ನೀಡಿದೆ. ಲೋಕಸಭಾ ಚುನಾವಣೆಯ 75 ವರ್ಷದ ಇತಿಹಾಸದಲ್ಲಿ ಅತಿಹೆಚ್ಚು ಜಫ್ತಿ ಎಂದರೆ ಈ ಬಾರಿಯದ್ದೇ ಎಂದು ಹೇಳಲಾಗುತ್ತಿದೆ.

ಕುತೂಹಲವೆಂದರೆ, ಚುನಾವಣೆ ಘೋಷಣೆಗೆ ಮುನ್ನವೇ ಎಲೆಕ್ಷನ್ ಕಮಿಷನ್ ಮುನ್ನೆಚ್ಚರಿಕೆಯಾಗಿ ಕ್ರಮಗಳನ್ನು ಕೈಗೊಂಡಿತ್ತು. ಜನವರಿಯಿಂದ ತೆಗೆದುಕೊಳ್ಳಲಾಗಿರುವ ಕ್ರಮಗಳನ್ನು ಗಮನಿಸಿದರೆ ಜಫ್ತಿ ಮಾಡಲಾದ ವಸ್ತುಗಳ ಮೌಲ್ಯ 12,000 ಕೋಟಿ ರೂಗೂ ಹೆಚ್ಚಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. 2019ರಲ್ಲಿ ನಡೆದ ಇಡೀ ಲೋಕಸಭಾ ಚುನಾವಣೆಯಲ್ಲಿ 3,476 ಕೋಟಿ ರೂ ಮೌಲ್ಯದ ವಸ್ತುಗಳ ಜಫ್ತಿ ಆಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಜಫ್ತಿಗೊಂಡ ವಸ್ತುಗಳ ಮೌಲ್ಯ ಗಮನಾರ್ಹವಾಗಿ ಏರಿದೆ.

ಇದನ್ನೂ ಓದಿ: ಕಾಂಗ್ರೆಸ್, ರಾಹುಲ್ ಗಾಂಧಿ​ ಪಾಕಿಸ್ತಾನದಲ್ಲಿ ನೆಲೆ ಹುಡುಕಬೇಕಷ್ಟೆ: ಸಿಟಿ ರವಿ ವ್ಯಂಗ್ಯ

ಮಾರ್ಚ್ 1ರಿಂದ ಎಪ್ರಿಲ್ 13ರವರೆಗೆ ಮುಟ್ಟುಗೋಲು ಹಾಕಲಾಗಿರುವ 4,658 ಕೋಟಿ ರೂ ವಸ್ತುಗಳಲ್ಲಿ ಮಾದಕ ವಸ್ತುಗಳ ಪ್ರಮಾಣವೇ ಶೇ. 44ರಷ್ಟಿದೆಯಂತೆ. ಸೀರೆ, ಬಟ್ಟೆ ಬರೆ ಇತ್ಯಾದಿ ಉಡುಗೊರೆಗಳ ಪಾಲು ಶೇ. 24.5ರಷ್ಟಿದೆ.

2024ರ ಮಾರ್ಚ್ 1ರಿಂದ ಏಪ್ರಿಲ್ 13ರವರೆಗೆ ಜಫ್ತಿಯಾದ ವಸ್ತುಗಳು

ಒಟ್ಟು ಜಫ್ತಿಗೊಂಡ ವಸ್ತುಗಳ ಮೌಲ್ಯ: 4,658 ಕೋಟಿ ರೂ

  • ನಗದು ಹಣ: 395 ಕೋಟಿ ರೂ (ಶೇ. 8.5)
  • ಹೆಂಡ: 489 ಕೋಟಿ ರೂ (ಶೇ. 10.5)
  • ಡ್ರಗ್ಸ್: 2,069 ಕೋಟಿ ರೂ (ಶೇ. 44.5)
  • ಅಮೂಲ್ಯ ಲೋಹಗಳು: 562 ಕೋಟಿ ರೂ (ಶೇ. 12)
  • ಉಚಿತ ಉಡುಗೊರೆಗಳು: 1,143 ಕೋಟಿ ರೂ (ಶೇ. 24.5)

ಕರ್ನಾಟಕದಲ್ಲಿ ಹೆಂಡದ ಜಫ್ತಿ ಹೆಚ್ಚು

ಅತಿಹೆಚ್ಚು ವಸ್ತುಗಳ ಜಫ್ತಿ ಆಗಿರುವುದು ರಾಜಸ್ಥಾನ ಮತ್ತು ಗುಜರಾತ್​ನಲ್ಲಿ. ಇವೆರಡು ಪಶ್ಚಿಮ ರಾಜ್ಯಗಳಲ್ಲಿ ಒಟ್ಟು 1,383 ಕೋಟಿ ರೂ ಮೌಲ್ಯದ ವಸ್ತುಗಳ ಜಫ್ತಿಯಾಗಿದೆ. ರಾಜಸ್ಥಾನದಲ್ಲಿ ಅತಿಹೆಚ್ಚು, ಅಂದರೆ 778 ಕೋಟಿ ರೂ ಮೌಲ್ಯದ ಜಫ್ತಿಯಾಗಿದೆ. ಗುಜರಾತ್ ರಾಜ್ಯದಲ್ಲಿ ಅತಿಹೆಚ್ಚು ಡ್ರಗ್ಸ್ ಅನ್ನು ಮುಟ್ಟುಗೋಲು ಹಾಕಲಾಗಿದೆ.

ಇದನ್ನೂ ಓದಿ: ನಾಡು ಒಡೆಯಲು ಬಿಡುವುದಿಲ್ಲ, ಇದು ವಿಭಜಕರು ಮತ್ತು ರಕ್ಷಕರ ನಡುವಿನ ಯುದ್ಧ: ಮಣಿಪುರದಲ್ಲಿ ಗುಡುಗಿದ ಅಮಿತ್ ಶಾ

ದಕ್ಷಿಣ ರಾಜ್ಯಗಳೂ ಬೇರೆ ಬೇರೆ ಅಂಶಗಳಲ್ಲಿ ಮುಂಚೂಣಿಯಲ್ಲಿವೆ. ತೆಲಂಗಾಣದಲ್ಲಿ ಅತಿಹೆಚ್ಚು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತಮಿಳುನಾಡಿನಲ್ಲಿ ಜಫ್ತಿಯಾದ ವಸ್ತುಗಳ ಮೌಲ್ಯ 461 ಕೋಟಿ ರೂ. ಇದರಲ್ಲಿ ಡ್ರಗ್ಸ್ ಪಾಲು 293 ಕೋಟಿ ರೂ ಇದೆ. ಹಾಗೆಯೇ ಚಿನ್ನ ಇತ್ಯಾದಿ ಅಮೂಲ್ಯ ಲೋಹಗಳು ಅತಿಹೆಚ್ಚು ವಶವಾಗಿರುವುದು ತಮಿಳುನಾಡಿನಲ್ಲಿಯೇ. ಕರ್ನಾಟಕದಲ್ಲಿ ಅತಿಹೆಚ್ಚು ಮದ್ಯ ಜಫ್ತಿಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ