ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ (DMK) ಪಕ್ಷದ ವಿರುದ್ಧ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ (Annamalai) ಬಿಡುಗಡೆ ಮಾಡಿರುವ ‘ಡಿಎಂಕೆ ಫೈಲ್ಸ್’ ಈಗ ರಾಜ್ಯದಲ್ಲಿ ರಾಜಕೀಯ ಕಿಡಿ ಹೊತ್ತಿಸಿದೆ. ಅಣ್ಣಾಮಲೈ ಅವರು ನಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆ ಬಿಡುಗಡೆ ಮಾಡದಿದ್ದರೆ ಎಲ್ಲ ಶಾಸಕರೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಿದ್ದೇವೆ ಎಂದು ಡಿಎಂಕೆ ಎಚ್ಚರಿಕೆ ನೀಡಿದೆ. ‘ಡಿಎಂಕೆ ಫೈಲ್ಸ್’ ಬಿಡುಗಡೆ ಮಾಡಿದ ಕೆಲವೇ ಗಂಅಟೆಗಳಲ್ಲಿ ಆ ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ, ತಾಕತ್ತಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಿ. ದಾಖಲೆ ಸಮೇತ ಆರೋಪ ಸಾಬೀತುಪಡಿಸಿ ಎಂದು ಸವಾಲೆಸೆದಿದೆ. ಡಿಎಂಕೆ ನಾಯಕರ ಮತ್ತು ಸಚಿವರ ವಿರುದ್ಧ ಮಾಡಿರುವ ಆರೋಪಕ್ಕೆ ಅಣ್ಣಾಮಲೈ 15 ದಿನಗಳ ಒಳಗೆ ಸಾಕ್ಷ್ಯ ಒದಗಿಸಬೇಕು. ಅದಕ್ಕೆ ಸಂಬಂಧಪಟ್ಟವರು ಕಾನೂನಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಇಲ್ಲವಾದಲ್ಲಿ ಕ್ರಿಮಿನಲ್ ಪ್ರಕರಣ ಎದುರಿಸಲು ಅವರು (ಅಣ್ಣಾಮಲೈ) ಸಿದ್ಧರಾಗಿರಲಿ ಎಂದು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್ಎಸ್ ಭಾರತಿ ತಿಳಿಸಿದ್ದಾರೆ.
ಅಣ್ಣಾಮಲೈ ಈ ಹಿಂದೆ ಘೋಷಿಸಿದ್ದಂತೆ ಡಿಎಂಕೆ ನಾಯಕರ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಒಂದೇ ಒಂದು ದಾಖಲೆಯನ್ನೂ ಬಹಿರಂಗಪಡಿಸಿಲ್ಲ. ಅಣ್ಣಾಮಲೈ ಅವರ ಈ ಆರೋಪಗಳು (ಡಿಎಂಕೆ ಫೈಲ್ಸ್) ನಗು ಬರಿಸುವ ಸಂಗತಿಗಳಾಗಿವೆ. ಅಣ್ಣಾಮಲೈ ಅವರು ಈ ಹಿಂದೆ ಅಷ್ಟೊಂದು ದಿನ ಪೊಲೀಸ್ ಇಲಾಖೆಯಲ್ಲಿ ಹೇಗೆ ಇದ್ದರು ಎಂಬುದೇ ಆಶ್ಚರ್ಯ ಎಂದು ಅವರು ಟೀಕಿಸಿದ್ದಾರೆ.
ಅಣ್ಣಾಮಲೈ ಅವರಿಗೆ 15 ದಿನಗಳ ಕಾಲಾವಕಾಶ ನೀಡುತ್ತೇವೆ. ಅವರು ಮಾಡಿರು ಆರೋಪಗಳಿಗೆ ಸಾಕ್ಷ್ಯಗಳನ್ನು ಒದಗಿಸದಿದ್ದಲ್ಲಿ ತಮಿಳುನಾಡಿನಾದ್ಯಂತ ಕೋರ್ಟ್ಗಳನ್ನು ಅಲೆಯಬೇಕಾಗಲಿದೆ ಎಂದು ಭಾರತಿ ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆ ಅಣ್ಣಾಮಲೈ ಅವರು ಡಿಎಂಕೆಯ ಉನ್ನತ ನಾಯಕರ ಸಂಪತ್ತಿನ ವಿವರ ಒಳಗೊಂಡ ಡಿಎಂಕೆ ಫೈಲ್ಸ್ ಬಿಡುಗಡೆ ಮಾಡಿದ್ದರು. ಕೇವಲ 27 ಮಂದಿ ಡಿಎಂಕೆ ನಾಯಕರು 2.24 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದಾರೆ. ಇದು ತಮಿಳುನಾಡಿನ ಜಿಡಿಪಿಯ ಶೇ 10ರಷ್ಟಾಗಿದೆ ಎಂದು ಡಿಎಂಕೆ ಫೈಲ್ಸ್ನಲ್ಲಿ ಅವರು ಪ್ರತಿಪಾದಿಸಿದ್ದರು. ತಮಿಳುನಾಡಿನ ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷರಾಗಿರುವ ಎಂಕೆ ಸ್ಟಾಲಿನ್ ವಿರುದ್ಧ ಅಣ್ಣಾಮಲೈ 200 ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪವನ್ನೂ ಮಾಡಿದ್ದರು. ಸಿಎಂಆರ್ಎಲ್ಗೆ ಟೆಂಡರ್ ನೀಡುವುದಕ್ಕಾಗಿ 2011ರಲ್ಲಿ ಶೆಲ್ ಕಂಪನಿಗಳ ಮೂಲಕ ಸ್ಟಾಲಿನ್ ಅವರು ಚುನಾವಣಾ ನಿಧಿ ಪಡೆದಿದ್ದರು ಎಂದೂ ಅಣ್ಣಾಮಲೈ ಆರೋಪ ಮಾಡಿದ್ದರು. ಈ ಬಗ್ಗೆ ಸಿಬಿಐಗೆ ದೂರು ನೀಡುವುದಾಗಿಯೂ ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ