ರಷ್ಯಾದಿಂದ ಭಾರತ ತೈಲ ಖರೀದಿಸೋದರಿಂದ ಭಾರತದ ಬ್ರಾಹ್ಮಣರಿಗೆ ಲಾಭ: ಭಾರಿ ಚರ್ಚೆಗೆ ಗ್ರಾಸವಾದ ಟ್ರಂಪ್ ಸಲಹೆಗಾರನ ಹೇಳಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆಗಾರ ಪೀಟರ್ ನವರೋ ಭಾರತವು ರಷ್ಯಾದಿಂದ ತೈಲ ಖರೀದಿಸುವುದರಿಂದ ಕೇವಲ ಭಾರತದ ಬ್ರಾಹ್ಮಣರಿಗೆ ಪ್ರಯೋಜನವಾಗುತ್ತಿದೆ, ಇತರರು ಇದನ್ನು ಗಮನಿಸಬೇಕು ಎಂದು ಹೇಳಿ ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ಈ ಹೇಳಿಕೆಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ರಷ್ಯಾ-ಉಕ್ರೇನ್ ಯುದ್ಧವನ್ನು ಮೋದಿ ಯುದ್ಧ ಎಂದಿದ್ದ ನವರೋ ಈಗ ‘ಬ್ರಾಹ್ಮಣ’ ಪದ ಬಳಸಿದ್ದರ ಹಿಂದಿನ ಮರ್ಮವೇನಿರಬಹುದು? ವಿವರಗಳಿಗೆ ಮುಂದೆ ಓದಿ.

ರಷ್ಯಾದಿಂದ ಭಾರತ ತೈಲ ಖರೀದಿಸೋದರಿಂದ ಭಾರತದ ಬ್ರಾಹ್ಮಣರಿಗೆ ಲಾಭ: ಭಾರಿ ಚರ್ಚೆಗೆ ಗ್ರಾಸವಾದ ಟ್ರಂಪ್ ಸಲಹೆಗಾರನ ಹೇಳಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೋ

Updated on: Sep 01, 2025 | 12:53 PM

ನವದೆಹಲಿ, ಸೆಪ್ಟೆಂಬರ್​ 1: ರಷ್ಯಾದಿಂದ (Russia) ಭಾರತ ತೈಲ ಖರೀದಿಸುವ ಮೂಲಕ ಭಾರತದ ಬ್ರಾಹ್ಮಣರಿಗೆ (Brahmins) ಲಾಭವಾಗುತ್ತಿದೆ. ಇದನ್ನು ಬೇರೆಯವರು ಗಮನಿಸಬೇಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೋ (Peter Navarro) ಹೊಸ ತಗಾದೆ ತೆಗೆದಿದ್ದಾರೆ. ಈ ಹಿಂದೆ ರಷ್ಯಾ-ಉಕ್ರೇನ್ ಯುದ್ಧವನ್ನು ಮೋದಿ ಯುದ್ಧ ಎಂದು ಬಣ್ಣಿಸಿದ್ದ ಪೀಟರ್ ನವರೋ ಇದೀಗ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್​​ಪಿಂಗ್ ಚೀನಾದಲ್ಲಿ ಮಾತುಕತೆ ನಡೆಸುತ್ತಿರುವ ಮಹತ್ವದ ಸಂದರ್ಭದಲ್ಲೇ ಈ ಹೇಳಿಕೆ ನೀಡಿರುವುದಕ್ಕೆ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಪೀಟರ್ ನವರೋ ಹೇಳಿಕೆಯನ್ನು ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ಪೆಸಿಫಿಕ್ ವಿಶ್ಲೇಷಕ, ಪ್ರೊಫೆಸರ್ ಡೆರೆಕ್ ಜೆ ಗ್ರಾಸ್​​ಮ್ಯಾನ್ ಖಂಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಭಾರತದಲ್ಲಿ ಜಾತಿ ಅಶಾಂತಿಯನ್ನು ಪ್ರಚೋದಿಸುವುದು ಎಂದಿಗೂ ಅಮೆರಿಕದ ವಿದೇಶಾಂಗ ನೀತಿಯಾಗಬಾರದು ಎಂದು ಹೇಳಿದ್ದಾರೆ.

ಪೀಟರ್ ನವರೋ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ


‘ರಷ್ಯಾದ ತೈಲ ಖರೀದಿಯಿಂದ ಕೇವಲ ಬ್ರಾಹ್ಮಣರಿಗೆ ಪ್ರಯೋಜನವಾಗುತ್ತಿದೆ ಎಂದು ಈತ ಹೇಳಿದ್ದಾನೆ. ಬ್ರಾಹ್ಮಣ ದ್ವೇಷ ಎಂಬುದು ಈಗ ಜಾಗತಿಕವಾಗಿ ಮಾರ್ಪಟ್ಟಿದೆ. ಯಾರೋ ಅವರಿಗೆ ಜಾತಿ ರಾಜಕೀಯದ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡುತ್ತಿದ್ದಾರೆ. ಪ್ರತಿಯೊಂದು ಬಿಕ್ಕಟ್ಟಿಗೂ ಬ್ರಾಹ್ಮಣರನ್ನು ದೂಷಿಸುವುದರ ಬಗ್ಗೆ ತಿಳಿಸುತ್ತಿದ್ದಾರೆ. ಬ್ರಾಹ್ಮಣರ ಭವಿಷ್ಯ ನಿಜಕ್ಕೂ ಚಿಂತಾಜನಕವಾಗಿದೆ’ ಎಂದು ಅನುರಾಧಾ ತಿವಾರಿ ಎಂಬ ಎಕ್ಸ್ ಬಳಕೆದಾರರು ಉಲ್ಲೇಖಿಸಿದ್ದಾರೆ.


ಪೀಟರ್ ನವರೋ ವೃದ್ಧಾಪ್ಯದ ಅರಳುಮರಳಿನಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಇದು ನಾಚಿಕೆಗೇಡಿನ ಮತ್ತು ದುಷ್ಟತನದಿಂದ ಕೂಡಿದ ನಡೆ ಎಂದು ಶಿವಸೇನಾದ ಪ್ರಿಯಾಂಕಾ ಚತುರ್ವೇದಿ ಟೀಕಿಸಿದ್ದಾರೆ.

ಅಮೆರಿಕದಲ್ಲಿ ಬಳಕೆಯಲ್ಲಿದೆ ‘ಬೋಸ್ಟನ್ ಬ್ರಾಹ್ಮಣ’ ಪದ: ಅರ್ಥವೇನು?

ಅಮೆರಿಕದ ಪರಿಕಲ್ಪನೆಯಲ್ಲಿ ‘‘ಬೋಸ್ಟನ್ ಬ್ರಾಹ್ಮಣ’’ ಎಂಬ ಪದ ಬಳಕೆ ಇದೆ. ಆದರೆ, ಭಾರತದ ವಿಚಾರದಲ್ಲಿ ಅಮೆರಿಕದ ಸರ್ಕಾರದ ಹಿರಿಯ ವ್ಯಕ್ತಿ ಈ ಪದ ಬಳಸಿದ್ದು ಆಕಸ್ಮಿಕವಂತೂ ಅಲ್ಲ. ಇದರ ಹಿಂದೆ ಕುತಂತ್ರ ಕಾಣಿಸುತ್ತಿದೆ ಎಂದು ಪ್ರಿಯಾಂಕಾ ಚತುರ್ವೇದಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಟ್ರಂಪ್ ಸುಂಕ ಬೆದರಿಕೆಗೆ ಜಗ್ಗದ ಮೋದಿ, ಚೀನಾದಲ್ಲಿ ಷಿ ಜಿನ್​​ಪಿಂಗ್, ಪುಟಿನ್ ಜತೆ ಮಾತುಕತೆ

‘‘ಬೋಸ್ಟನ್ ಬ್ರಾಹ್ಮಣ’’ ಎಂಬುದು ಅಮೆರಿಕದ ನ್ಯೂ ಇಂಗ್ಲೆಂಡ್‌ನ ಶ್ರೀಮಂತ ಗಣ್ಯರನ್ನು ಉಲ್ಲೇಖಿಸಲು ವ್ಯಾಪಕವಾಗಿ ಬಳಸುತ್ತಿದ್ದ ಪದವಾಗಿತ್ತು. ಇಂಗ್ಲಿಷ್ ಜಗತ್ತಿನಲ್ಲಿ ಸಾಮಾಜಿಕ ಅಥವಾ ಆರ್ಥಿಕವಾಗಿ ಶ್ರೀಮಂತರನ್ನು ಸೂಚಿಸಲು ಬಳಸುವ ಪದ ‘‘ಬೋಸ್ಟನ್ ಬ್ರಾಹ್ಮಣ’’ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಸಾಗರಿಕಾ ಘೋಷ್ ವಿವರಿಸಿದ್ದಾರೆ. ಆದರೆ, ಪೀಟರ್ ನವರೋ ‘ಭಾರತದ ಬ್ರಾಹ್ಮಣ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ಎಂಬುದು ಗಮನಾರ್ಹ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:31 pm, Mon, 1 September 25