ಕಸದ ಬುಟ್ಟಿಯ ಬದಲು ಈ ರೂಂನಲ್ಲಿ ಮಗುವನ್ನಿಟ್ಟು ಹೋಗಿ; ಸರ್ಕಾರಿ ಆಸ್ಪತ್ರೆಯಲ್ಲಿ ಹೊಸ ವ್ಯವಸ್ಥೆ!

|

Updated on: Oct 02, 2023 | 2:43 PM

ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲಾಡಳಿತ ಕಳೆದ 1 ತಿಂಗಳಲ್ಲಿ 5 ನವಜಾತ ಶಿಶುಗಳನ್ನು ರಕ್ಷಿಸಿ, ಆ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಿಗಾ ವಹಿಸಿತ್ತು. ಇನ್ನುಮುಂದೆ ಈ ರೀತಿಯ ಘಟನೆಗಳನ್ನು ನಿಯಂತ್ರಿಸಲು ಇಲ್ಲಿನ ಜಿಲ್ಲಾಡಳಿತ ಸರ್ಕಾರ ಆಸ್ಪತ್ರೆಯಲ್ಲೇ ಒಂದು ಕೊಠಡಿಯನ್ನು ಮೀಸಲಿಟ್ಟಿದೆ.

ಕಸದ ಬುಟ್ಟಿಯ ಬದಲು ಈ ರೂಂನಲ್ಲಿ ಮಗುವನ್ನಿಟ್ಟು ಹೋಗಿ; ಸರ್ಕಾರಿ ಆಸ್ಪತ್ರೆಯಲ್ಲಿ ಹೊಸ ವ್ಯವಸ್ಥೆ!
ಮಗು
Follow us on

ಮೇದಿನಿಪುರ: ಅಕ್ರಮ ಸಂಬಂಧದಿಂದ ಹುಟ್ಟಿದ್ದು ಎಂಬ ಕಾರಣಕ್ಕೋ, ಹೆಣ್ಣು ಮಗುವಾಯಿತು ಎಂದೋ, ಸಾಕಲು ಸಾಧ್ಯವಿಲ್ಲವೆಂದೋ ಹೀಗೆ ನಾನಾ ಕಾರಣಗಳಿಂದ ನವಜಾತ ಶಿಶುಗಳನ್ನು ಕಸದ ಬುಟ್ಟಿಯಲ್ಲಿ, ಚರಂಡಿ ಬದಿಯಲ್ಲಿ ಎಸೆದು ಹೋಗುವವರ ಸಂಖ್ಯೆ ಇಂದಿನ ಕಾಲದಲ್ಲೂ ಕಡಿಮೆಯಾಗಿಲ್ಲ. ಇನ್ನೂ ಕರುಳು ಬಳ್ಳಿಯ ರಕ್ತ ಕೂಡ ಹಸಿಯಾಗಿರುವ ಹಸುಗೂಸುಗಳು ಆಗಾಗ ಕಸದ ಬುಟ್ಟಿಯಲ್ಲಿ ಸಿಗುತ್ತಿರುತ್ತವೆ. ಈ ಮಗುವಿನ ರಕ್ತದ ಮೈಗೆ ಇರುವೆ ಮುತ್ತಿಕೊಳ್ಳುವುದು, ಮಗುವನ್ನು ನಾಯಿ ಕಚ್ಚಿಕೊಂಡು ಹೋಗುವುದು ಹೀಗೆ ಹಲವು ಘಟನೆಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ, ಈ ರೀತಿಯ ಘಟನೆಗಳನ್ನು ನಿಯಂತ್ರಿಸಲು ಪಶ್ಚಿಮ ಬಂಗಾಳದ ಮೇದಿನಿಪುರ (ಮಿದ್ನಾಪುರ) ಜಿಲ್ಲಾಡಳಿತ ಸರ್ಕಾರಿ ಆಸ್ಪತ್ರೆಯಲ್ಲಿ ಅಂತಹ ಮಕ್ಕಳನ್ನು ಇಟ್ಟು ಹೋಗಲೆಂದೇ ಒಂದು ಕೊಠಡಿಯನ್ನು ನಿರ್ಮಿಸಿದೆ!

ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲಾಡಳಿತ ಕಳೆದ 1 ತಿಂಗಳಲ್ಲಿ 5 ನವಜಾತ ಶಿಶುಗಳನ್ನು ರಕ್ಷಿಸಿದೆ. ಕಸದ ಬುಟ್ಟಿ, ಕಸದ ರಾಶಿ, ರಸ್ತೆ ಬದಿಯಲ್ಲಿ ಬಿದ್ದು ಹಸಿವು, ಚಳಿಯಿಂದ ಅಳುತ್ತಿದ್ದ ಪುಟ್ಟ ಕಂದಮ್ಮಗಳನ್ನು ರಕ್ಷಿಸಿದ್ದ ಜಿಲ್ಲಾಡಳಿತ ಆ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಿಗಾ ವಹಿಸಿತ್ತು. ಹೀಗಾಗಿ, ಇನ್ನುಮುಂದೆ ಈ ರೀತಿಯ ಘಟನೆಗಳನ್ನು ನಿಯಂತ್ರಿಸಲು ಇಲ್ಲಿನ ಜಿಲ್ಲಾಡಳಿತ ಸರ್ಕಾರ ಆಸ್ಪತ್ರೆಯಲ್ಲೇ ಒಂದು ಕೊಠಡಿಯನ್ನು ಮೀಸಲಿಟ್ಟಿದೆ.

ಇದನ್ನೂ ಓದಿ: ಮಗುವನ್ನು ಕಾರಿನಲ್ಲೇ ಮಲಗಿಸಿ ಮರೆತು ಹೋಗಿದ್ದ ತಂದೆ, 7 ಗಂಟೆಯ ಬಳಿಕ ವಾಪಸಾಗುವಷ್ಟರಲ್ಲಿ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು

ಈ ಬಾರಿ ಮೇದಿನಿಪುರ ಜಿಲ್ಲಾಡಳಿತ ‘ಪಲ್ನಾ’ ಎಂಬ ಯೋಜನೆಗೆ ಚಾಲನೆ ನೀಡಿದೆ. ಪಶ್ಚಿಮ ಮೇದಿನಿಪುರ ಜಿಲ್ಲಾಡಳಿತವು ಜಿಲ್ಲೆಯ 4 ಆಸ್ಪತ್ರೆಗಳಲ್ಲಿ ತಾತ್ಕಾಲಿಕ ಕೊಠಡಿಯನ್ನು ನಿರ್ಮಿಸಿದೆ. ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಇಲ್ಲಿನ ಮೇದಿನಿಪುರ ವೈದ್ಯಕೀಯ ಕಾಲೇಜು ಆಸ್ಪತ್ರೆ, ಘಟಾಲ್, ಖರಗ್‌ಪುರ ವಿಭಾಗೀಯ ಆಸ್ಪತ್ರೆ ಮತ್ತು ಚಂದ್ರಕೋನಾ ಆಸ್ಪತ್ರೆಯಲ್ಲಿ ‘ಕೇರ್’ ಕೊಠಡಿಗಳನ್ನು ನಿರ್ಮಿಸಲಾಗಿದೆ. ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಆ ನವಜಾತ ಶಿಶುವನ್ನು ಮನೆಗೆ ಕರೆದೊಯ್ಯಲು ನಿಮಗೆ ಇಷ್ಟವಿಲ್ಲದಿದ್ದರೆ ಅದನ್ನು ಕಸದ ಬುಟ್ಟಿಗೆ ಹಾಕುವ ಅಥವಾ ಸಾಯಿಸುವ ಬದಲು ಆ ಮಗುವನ್ನು ಕೇರ್ ಕೊಠಡಿಯಲ್ಲಿ ಬಿಟ್ಟು ಹೋಗಬಹುದು. ಆ ಕೊಠಡಿಯಲ್ಲಿ ಮಗುವನ್ನು ಬಿಟ್ಟು ಹೋದರೆ ಅಲ್ಲಿರುವ ಅಲಾರಾಂ ಅಧಿಕಾರಿಗಳಿಗೆ ಸೂಚನೆ ಕೊಡುತ್ತದೆ. ಆಗ ಕೂಡಲೇ ಆಸ್ಪತ್ರೆಯ ಅಧಿಕಾರಿಗಳು ಆ ಮಗುವನ್ನು ರಕ್ಷಿಸಿ ಚಿಕಿತ್ಸೆ ನೀಡಲಿದ್ದಾರೆ.

ಇದನ್ನೂ ಓದಿ: ಗರ್ಭ ಧರಿಸಿದ್ದೇ ಗೊತ್ತಿರದ ಅಪ್ರಾಪ್ತೆಗೆ ಬಾತ್​ ರೂಂನಲ್ಲಿ ಹೆರಿಗೆ!; ಹುಟ್ಟಿದ ಕೂಡಲೆ ಕಸದ ತೊಟ್ಟಿ ಸೇರಿತು ಮಗು

ನಂತರ ಆ ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಲಾಗುವುದು. ಈ ಯೋಜನೆಯನ್ನು ಗುರುವಾರ ಉದ್ಘಾಟಿಸಿದ ಜಿಲ್ಲಾ ಗವರ್ನರ್ ಖುರ್ಷಿದ್ ಅಲಿ ಖಾದ್ರಿ, ”ಕಳೆದ ಒಂದು ತಿಂಗಳಲ್ಲಿ ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ 5 ಮಕ್ಕಳನ್ನು ಕಸದ ತೊಟ್ಟಿಗಳು ಮತ್ತು ಕಾಡುಗಳಿಂದ ರಕ್ಷಿಸಲಾಗಿದೆ. ಆ ಮಕ್ಕಳು ಮಾಡಿದ ತಪ್ಪಾದರೂ ಏನು? ಅವರಿಗೂ ಒಂದು ಭವಿಷ್ಯವಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಪಲ್ನಾ ಯೋಜನೆ ಜಾರಿಮಾಡಲಾಗಿದೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Mon, 2 October 23