ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ (Presidential Elections) ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು (Draupadi Murmu) ಅವರು ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಂಪುಟ ಸಚಿವರು, ಬಿಜೆಪಿ ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಇಂದು (ಜೂನ್ 24) ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ನಂತರ ಪ್ರತಿಪಕ್ಷಗಳ ವಿಶ್ವಾಸ ಗಳಿಸಲು ಮುರ್ಮು ಯತ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ನಾಮಪತ್ರ ಸಲ್ಲಿಸುವ ಮೊದಲು ಈ ಮೂವರೂ ನಾಯಕರಿಗೆ ಕರೆ ಮಾಡಿದ್ದ ಮುರ್ಮು ತಮ್ಮನ್ನು ಬೆಂಬಲಿಸುವಂತೆ ವಿನಂತಿಸಿದರು ಎಂದು ಅನಾಮಿಕ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ದ್ರೌಪದಿ ಮುರ್ಮು ಅವರು ಶುಕ್ರವಾರ (ಜೂನ್ 24) ಪ್ರಧಾನಿ ನರೇಂದ್ರ ಮೋದಿ ಸಮಕ್ಷಮದಲ್ಲಿ ಚುನಾವಣಾಧಿಕಾರಿ ಪಿ.ಸಿ.ಮೋದಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಬಿಜೆಪಿಯ ಮುಂಚೂಣಿ ನಾಯಕರು ಮತ್ತು ಮುಖ್ಯಮಂತ್ರಿಗಳೊಂದಿಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು ಅವರಿಗೆ ಬೆಂಬಲ ಘೋಷಿಸಿರುವ ವೈಎಸ್ಆರ್ಸಿಪಿ, ಬಿಜೆಡಿ ಮತ್ತು ಎಐಎಡಿಎಂಕೆ ಪ್ರತಿನಿಧಿಗಳು ಉಪಸ್ಥಿತರಿದ್ದರು.
NDA's Presidential election candidate Droupadi Murmu speaks with Congress interim-President Sonia Gandhi, West Bengal CM Mamata Banerjee & NCP chief Sharad Pawar seeking their party's support for her candidature in the Presidential election: Sources
— ANI (@ANI) June 24, 2022
ನಾಮಪತ್ರ ಸಲ್ಲಿಸುವ ಒಂದು ದಿನದ ಮುನ್ನ ದ್ರೌಪದಿ ಮುರ್ಮು ಅವರು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಜೆ.ಪಿ. ನಡ್ಡಾ ಅವರನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೇಟಿ ಮಾಡಿದ್ದರು. ಎಲ್ಲರಿಗೂ ಧನ್ಯವಾದಗಳು. ಅಧ್ಯಕ್ಷೀಯ ಚುನಾವಣೆಗೆ ನಾನು ಎಲ್ಲರಿಂದ ಸಹಕಾರವನ್ನು ಕೋರುತ್ತೇನೆ. ನಾನು ಎಲ್ಲಾ ಮತದಾರರನ್ನು (ಶಾಸಕರನ್ನು) ಭೇಟಿ ಮಾಡುತ್ತೇನೆ. ಜುಲೈ 18ರ ಮೊದಲು ಅವರ ಬೆಂಬಲವನ್ನು ಕೇಳುತ್ತೇನೆ ಎಂದು ದ್ರೌಪದಿ ಮುರ್ಮು ಹೇಳಿದ್ದರು.
ಒಡಿಶಾದ ಸಂತಾಲ್ ಸಮುದಾಯದಿಂದ 64 ವರ್ಷದ ಅವರನ್ನು ಮಂಗಳವಾರ ರಾತ್ರಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ಎಂದು ಹೆಸರಿಸಲಾಯಿತು. ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಆಡಳಿತಾರೂಢ ಎನ್‌ಡಿಎ ಪರವಾಗಿ ಅಂಕಿ-ಅಂಶಗಳು ಹೆಚ್ಚಿರುವುದರಿಂದ ಮುರ್ಮು ಅವರ ಆಯ್ಕೆ ಬಹುತೇಕ ಖಚಿತವಾಗಿದೆ.
Published On - 1:24 pm, Fri, 24 June 22