Gujarat Riots: ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿಗೆ ಕ್ಲೀನ್‌ಚಿಟ್ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ
ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲಾಗಿದ್ದ ಕ್ಲೀನ್‌ಚಿಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ನವದೆಹಲಿ: 2002ರ ಗುಜರಾತ್ ಗಲಭೆಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ (Narendra Modi) ಮತ್ತು ಇತರ ಹಲವರಿಗೆ ವಿಶೇಷ ತನಿಖಾ ತಂಡ (SIT) ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಫ್ರಿ ಅವರ ಹೆಂಡತಿ ಜಾಕಿಯಾ ಜಫ್ರಿ (Zakia Jafri) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಗುಜರಾತ್ ಗಲಭೆ (Gujarat Riots 2002) ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲಾಗಿದ್ದ ಕ್ಲೀನ್‌ಚಿಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
2002ರ ಗುಜರಾತ್ ದಂಗೆಯ ಕುರಿತು ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರಿಗೆ ಎಸ್‌ಐಟಿ ನೀಡಿದ್ದ ಕ್ಲೀನ್‌ಚಿಟ್ ಅನ್ನು ಪ್ರಶ್ನಿಸಿ ಜಾಕಿಯಾ ಜಫ್ರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಇಶಾನ್ ಜಫ್ರಿ ಅವರ ಪತ್ನಿ ಜಾಕಿಯಾ ಜಫ್ರಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಲಾಗಿದೆ.
Supreme Court dismisses plea filed by Zakia Jafri, widow of former Congress MP Ehsan Jafri, challenging the clean chit given by the Special Investigation Team (SIT) to the then state CM Narendra Modi and several others in the 2002 Gujarat riots.
— ANI (@ANI) June 24, 2022
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠವು ಗುಜರಾತ್ ಹತ್ಯಾಕಾಂಡದ ಹಿಂದಿನ ಪಿತೂರಿಯನ್ನು ತನಿಖೆ ಮಾಡಬೇಕೆಂದು 2021ರ ಡಿಸೆಂಬರ್ 9ರಂದು ಜಾಕಿಯಾ ಜಫ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ತೀರ್ಪನ್ನು ಕಾಯ್ದಿರಿಸಿತ್ತು.
ಜಾಕಿಯಾ ಜಫ್ರಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹಲವು ದಿನಗಳ ಕಾಲ ವಾದ ಮಂಡಿಸಿದ್ದರು. ಹಿರಿಯ ವಕೀಲ ಮುಕುಲ್ ರೋಹ್ಟಗಿ ಎಸ್‌ಐಟಿ ಪರವಾಗಿ ವಾದ ಮಂಡಿಸಿದ್ದರು. ಸಾಲಿಟರ್ ಜನರಲ್ ಆಫ್ ಇಂಡಿಯಾ ತುಷಾರ್ ಮೆಹ್ತಾ ಗುಜರಾತ್ ಸರ್ಕಾರದ ಪರವಾಗಿ ವಾದ ಮಂಡಿಸಿ, ಈ ಅರ್ಜಿಯನ್ನು ವಿರೋಧಿಸಿದ್ದರು. ಇದೀಗ ನರೇಂದ್ರ ಮೋದಿ ಸೇರಿದಂತೆ ಇನ್ನೂ ಕೆಲವರಿಗೆ ಗುಜರಾತ್ ಗಲಭೆ ಪ್ರಕರಣದಲ್ಲಿ ನೀಡಲಾಗಿದ್ದ ಕ್ಲೀನ್ ಚಿಟ್ ಪ್ರಶ್ನಿಸಿದ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.
ಏನಿದು ಪ್ರಕರಣ?:
2002ರ ಫೆಬ್ರವರಿ 28ರಂದು ಗೋಧ್ರಾ ರೈಲು ದುರಂತದ ಒಂದು ದಿನದ ನಂತರ ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ಹಿಂಸಾಚಾರದ ಸಂದರ್ಭದಲ್ಲಿ ಕೊಲ್ಲಲ್ಪಟ್ಟ 68 ಜನರಲ್ಲಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಎಹ್ಸಾನ್ ಜಫ್ರಿ ಕೂಡ ಒಬ್ಬರು. ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿ ಸೇರಿದಂತೆ ಹಲವರಿಗೆ ಎಸ್‌ಐಟಿ ಕ್ಲೀನ್‌ಚಿಟ್ ನೀಡಿತ್ತು. 2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಸೇರಿದಂತೆ 64 ಮಂದಿಗೆ ಎಸ್‌ಐಟಿ ಕ್ಲೀನ್ ಚಿಟ್ ನೀಡಿದ್ದರ ವಿರುದ್ಧ ಎಹ್ಸಾನ್ ಜಫ್ರಿ ಅವರ ಪತ್ನಿ ಜಾಕಿಯಾ ಜಫ್ರಿ ಸವಾಲು ಹಾಕಿದ್ದರು.
ಕಳೆದ ವರ್ಷ ಡಿಸೆಂಬರ್ 9ರಂದು ಸುಪ್ರೀಂ ಕೋರ್ಟ್ ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಜಾಕಿಯಾ ಜಫ್ರಿ ಅವರ ಅರ್ಜಿಯನ್ನು ಹೊರತುಪಡಿಸಿ 2002ರ ಗುಜರಾತ್ ಗಲಭೆಯಲ್ಲಿ ನಡೆಸಿದ ತನಿಖೆಯ ವಿರುದ್ಧ ಬೇರೆ ಯಾರೂ ಬೆರಳು ತೋರಿಸಿಲ್ಲ ಎಂದು ವಿಚಾರಣೆ ಸಂದರ್ಭದಲ್ಲಿ ಹೇಳಿತ್ತು. 2002ರ ಫೆಬ್ರವರಿ 27ರಂದು ಗೋಧ್ರಾದಲ್ಲಿ ಸಬರಮತಿ ಎಕ್ಸ್‌ಪ್ರೆಸ್‌ನ ಎಸ್ -6 ಕೋಚ್ ಅನ್ನು ಸುಟ್ಟುಹಾಕಿದಾಗ 59 ಜನರು ದಾರುಣವಾಗಿ ಮೃತಪಟ್ಟಿದ್ದರು. ಇದರ ವಿರುದ್ಧ ನಂತರ ಗುಜರಾತ್ನಲ್ಲಿ ತೀವ್ರ ಗದ್ದಲ, ಗಲಭೆ ಉಂಟಾಗಿತ್ತು.
ಫೆಬ್ರುವರಿ 8, 2012ರಂದು, ಎಸ್‌ಐಟಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಸೇರಿದಂತೆ 63 ಇತರರಿಗೆ ಕ್ಲೀನ್ ಚಿಟ್ ನೀಡುವ ಅಂತಿಮ ವರದಿಯನ್ನು ಸಲ್ಲಿಸಿತ್ತು. ಅವರ ವಿರುದ್ಧ ಯಾವುದೇ ಪ್ರಾಸಿಕ್ಯೂಟಬಲ್ ಸಾಕ್ಷ್ಯಗಳಿಲ್ಲ ಎಂದು ಹೇಳಿತ್ತು. ಆದರೆ, ಜಾಕಿಯಾ ಜಾಫ್ರಿ 2018ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಖಾನ್ವಿಲ್ಕರ್, ಮಹೇಶ್ವರಿ ಮತ್ತು ರವಿಕುಮಾರ್ ಅವರಿದ್ದ 3 ನ್ಯಾಯಾಧೀಶರ ಪೀಠವು ವಿಚಾರಣೆ ನಡೆಸಿತು. ” ಅವರು ಎದುರಿಸಬೇಕಾದ ಸವಾಲಿನ ಸಂದರ್ಭಗಳಲ್ಲಿ ಎಸ್‌ಐಟಿ ಅಧಿಕಾರಿಗಳ ತಂಡ ಮಾಡಿದ ಅವಿಶ್ರಾಂತ ಕಾರ್ಯಕ್ಕೆ ನಾವು ನಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ ಎಂದು ನ್ಯಾಯಾಲಯವು ಗಮನಿಸಿತು. ಅಂತೂಕೊನೆಯಲ್ಲಿ ಗುಜರಾತ್ ರಾಜ್ಯದ ಅತೃಪ್ತ ಅಧಿಕಾರಿಗಳ ಒಗ್ಗಟ್ಟಿನ ಪ್ರಯತ್ನವು ಇತರರೊಂದಿಗೆ ಸೇರಿ ತಮ್ಮ ಸ್ವಂತ ಜ್ಞಾನಕ್ಕೆ ಸುಳ್ಳಾಗಿರುವ ಬಹಿರಂಗಪಡಿಸುವಿಕೆಗಳನ್ನು ಮಾಡುವ ಮೂಲಕ ಸಂಚಲನ ಮೂಡಿಸುತ್ತಿದ್ದರು ಎಂದು ನಮಗೆ ತೋರುತ್ತದೆ. ಕೂಲಂಕುಷ ತನಿಖೆಯ ನಂತರ ಎಸ್‌ಐಟಿಯು ಅವರ ಹೇಳಿಕೆಗಳ ಸುಳ್ಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯ ಹೇಳಿದ್ದೇನು?
ಎಸ್‌ಐಟಿ ತನಿಖೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ದಿಟ್ಟತನವನ್ನು ತೋರಿಸಿದ್ದಕ್ಕಾಗಿ ನ್ಯಾಯಾಧೀಶರು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡರು. ಪ್ರಸ್ತುತ ಪ್ರಕ್ರಿಯೆಗಳನ್ನು ಕಳೆದ 16 ವರ್ಷಗಳಿಂದ ಅನುಸರಿಸಲಾಗಿದೆ. ವಾಸ್ತವವಾಗಿ, ಇಂತಹ ಪ್ರಕ್ರಿಯೆಯ ದುರುಪಯೋಗದಲ್ಲಿ ತೊಡಗಿರುವ ಎಲ್ಲರೂ ವಿಚಾರಣೆಗೊಳಪಡಬೇಕು ಮತ್ತು ಕಾನೂನಿನ ಪ್ರಕಾರ ಮುಂದುವರಿಯಬೇಕು ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಸ್ವತಂತ್ರ ವಿಶೇಷ ತನಿಖಾ ತಂಡವು ಸಂಗ್ರಹಿಸಿದ ಸಾಕ್ಷ್ಯದ ಆಧಾರದ ಮೇಲೆ ಸರ್ಕಾರದ ಉನ್ನತ ಮಟ್ಟದಲ್ಲಿ ‘ದೊಡ್ಡ ಕ್ರಿಮಿನಲ್ ಪಿತೂರಿ’ಯ ಆರೋಪವನ್ನು ನ್ಯಾಯಾಧೀಶರು ತಳ್ಳಿಹಾಕಿದರು.
ತನಿಖೆಯ ವೇಳೆ ಕ್ರೋಡೀಕರಿಸಿದ ಎಲ್ಲಾ ವಸ್ತುಗಳನ್ನು ಪರಿಗಣಿಸಿದ ನಂತರ ಎಸ್‌ಐಟಿ ತನ್ನ ಅಭಿಪ್ರಾಯವನ್ನು ಹೇಳಿದೆ. ಹೆಚ್ಚಿನ ತನಿಖೆಯ ಪ್ರಶ್ನೆಯು ಉನ್ನತ ಮಟ್ಟದಲ್ಲಿ ದೊಡ್ಡ ಪಿತೂರಿಯ ಆರೋಪಕ್ಕೆ ಸಂಬಂಧಿಸಿದಂತೆ ಹೊಸ ವಸ್ತು / ಮಾಹಿತಿಯ ಲಭ್ಯತೆಯ ಮೇಲೆ ಮಾತ್ರ ಉದ್ಭವಿಸುತ್ತದೆ, ಅದು ಈ ಪ್ರಕರಣದಲ್ಲಿ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
Published On - 10:43 am, Fri, 24 June 22