‘ಮಗಳು ಮಧ್ಯರಾತ್ರಿ ನಂತರ ಆಚೆ ಹೋಗಿದ್ದಲ್ಲ, ಸಿಎಂ ಮಮತಾ ಹೇಳಿದ್ದು ಸುಳ್ಳು’- ಅತ್ಯಾಚಾರ ಸಂತ್ರಸ್ತೆಯ ತಂದೆ ಹೇಳಿಕೆ

West Bengal Durgapur Sexual Assault case: ಅಕ್ಟೋಬರ್ 10ರಂದು ಸಾಮೂಹಿಕ ಅತ್ಯಾಚಾರಕ್ಕೊಳಗಾದಳೆಂದು ಹೇಳಲಾದ ವೈದ್ಯಕೀಯ ವಿದ್ಯಾರ್ಥಿನಿಯ ತಂದೆ ಮಾತನಾಡಿದ್ದಾರೆ. ತಮ್ಮ ಮಗಳ ಮೇಲೆ ರಾತ್ರಿ 8ರಿಂದ 9ರ ಅವಧಿಯಲ್ಲಿ ಲೈಂಗಿಕ ಹಲ್ಲೆಯಾಗಿದೆ ಎಂದು ಅವರು ಹೇಳಿದ್ದಾರೆ. ಆಕೆ 12:30ಕ್ಕೆ ಕ್ಯಾಂಪಸ್ ಹೊರಗೆ ಇದ್ದಳು. ಅಷ್ಟು ಹೊತ್ತಿನಲ್ಲಿ ಹುಡುಗಿಯರು ಹೊರಗೆಹೋಗಬಾರದು ಎಂದಿದ್ದ ಸಿಎಂ ಹೇಳಿಕೆಗೆ ಯುವತಿ ತಂದೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಮಗಳು ಮಧ್ಯರಾತ್ರಿ ನಂತರ ಆಚೆ ಹೋಗಿದ್ದಲ್ಲ, ಸಿಎಂ ಮಮತಾ ಹೇಳಿದ್ದು ಸುಳ್ಳು’- ಅತ್ಯಾಚಾರ ಸಂತ್ರಸ್ತೆಯ ತಂದೆ ಹೇಳಿಕೆ
ಮಮತಾ ಬ್ಯಾನರ್ಜಿ

Updated on: Oct 13, 2025 | 12:05 PM

ಭುವನೇಶ್ವರ್, ಅಕ್ಟೋಬರ್ 13: ಪಶ್ಚಿಮ ಬಂಗಾಳದ ದುರ್ಗಾಪುರ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಕಳೆದ ಶುಕ್ರವಾರ ಸಂಭವಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ (Durgapur Rape case) ಅಲ್ಲಿಯ ಸಿಎಂ ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ. ‘ಆ ಹುಡುಗಿ (ಅತ್ಯಾಚಾರ ಸಂತ್ರಸ್ತೆ) ರಾತ್ರಿ 12:30ಕ್ಕೆ ತನ್ನ ಪುರುಷ ಸಹಪಾಠಿ ಜೊತೆ ಕ್ಯಾಂಪಸ್​ನಿಂದ ಹೊರಗೆ ಇದ್ದಳೆಂಬ ಮಾಹಿತಿ ಬಂದಿದೆ. ಹುಡುಗಿಯರು ಅಷ್ಟು ಹೊತ್ತಿನಲ್ಲಿ ಹೊರಗೆ ಹೋಗಬಾರದು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ಹೇಳಿದ್ದರು. ಈ ಹೇಳಿಕೆಯನ್ನು ಅತ್ಯಾಚಾರ ಸಂತ್ರಸ್ತೆಯ ತಂದೆ ತಿರಸ್ಕರಿಸಿದ್ದಾರೆ. ತಮ್ಮ ಮಗಳು ಮಧ್ಯರಾತ್ರಿ ನಂತರ ಹೊರಗೆ ಹೋಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಶುಕ್ರವಾರ ರಾತ್ರಿ 8ರಿಂದ 9 ಗಂಟೆಯ ನಡುವೆ ನನ್ನ ಮಗಳ ಮೇಲೆ ಲೈಂಗಿಕ ಹಲ್ಲೆ ಆಗಿದೆ. ಆದರೆ, ಮುಖ್ಯ ಮಂತ್ರಿಗಳು ಈ ಘಟನೆ ಮಧ್ಯರಾತ್ರಿ ನಂತರ ಸಂಭವಿಸಿತು ಎನ್ನುತ್ತಿದ್ದಾರೆ. ಅವರು ಒಬ್ಬ ಮಹಿಳೆಯಾಗಿ, ರಾತ್ರಿಯ ವೇಳೆ ಮಹಿಳೆಯರು ಹೊರಗೆ ಹೋಗಬಾರದು ಎಂದು ಹೇಳುವುದು ಎಷ್ಟು ಸರಿ’ ಎಂದು 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ತಂದೆ ಕೇಳುತ್ತಾರೆ.

ಇದನ್ನೂ ಓದಿ: ಹುಡುಗಿಯರು ರಾತ್ರಿ ಹೊರಗೆ ಹೋಗಬಾರದು; ಅತ್ಯಾಚಾರದ ಬಗ್ಗೆ ಮಮತಾ ಬ್ಯಾನರ್ಜಿ ಶಾಕಿಂಗ್ ಹೇಳಿಕೆ

ಅಕ್ಟೋಬರ್ 10ರಂದು ದುರ್ಗಾಪುರ್​ನಲ್ಲಿ ಸಾಮೂಹಿಕವಾಗಿ ಅತ್ಯಾಚಾರಕ್ಕೊಳಗಾದಳೆಂದು ಹೇಳಲಾದ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಒಡಿಶಾ ಮೂಲದವಳು. ಐಕ್ಯೂ ಸಿಟಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುವ ಆ ಯುವತಿ ಹಾಸ್ಟಲ್​ನಲ್ಲಿ ಉಳಿದುಕೊಂಡಿದ್ದಳು. ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಈ ಘಟನೆಯ ಬಗ್ಗೆ ಎಕ್ಸ್​ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ‘ಕಾಲೇಜಿನಿಂದ ನೀಡಲಾದ ಹೇಳಿಕೆ ಪ್ರಕಾರ ಹುಡುಗಿ ರಾತ್ರಿ 8ಗಂಟೆಗೆ ಹಾಸ್ಟೆಲ್​ನಿಂದ ಹೊರಗೆ ಹೋಗಿದ್ದಾರೆ. ಯಾವುದೇ ದೃಷ್ಟಿಯಲ್ಲಿ ನೋಡಿದರೂ ಅದು ಅಪವೇಳೆಯಲ್ಲ’ ಎಂದು ಅಮಿತ್ ಮಾಳವೀಯ ಸ್ಪಷ್ಟಪಡಿಸಿದ್ದಾರೆ.

‘ಕಾಲೇಜು ಸಮೀಪದ ಪ್ರದೇಶದಲ್ಲಿ ಸರಿಯಾದ ದೀಪದ ವ್ಯವಸ್ಥೆ ಇಲ್ಲ. ಬಹಳ ಕಾಲದಿಂದ ಅಲ್ಲಿ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಪೊಲೀಸರು ಆ ಸ್ಥಳಕ್ಕೆ ಭದ್ರತೆ ಒದಗಿಸಲು ವಿಫಲರಾಗಿದ್ದಾರೆ. ಇದರಿಂದಾಗಿ ಈ ದುರಂತ ಸಂಭವಿಸಿದೆ’ ಎಂದು ಹೇಳಿದ ಬಿಜೆಪಿ ವಕ್ತಾರರು, ಸಿಎಂ ಮಮತಾ ಬ್ಯಾನರ್ಜಿ ಈ ಘಟನೆಯ ಜವಾಬ್ದಾರಿಯನ್ನು ಖಾಸಗಿ ಕಾಲೇಜಿನ ಮೇಲೆ ಹಾಕಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ವಿರೋಧದ ಬೆನ್ನಲ್ಲೇ ಹೊಸ ಪತ್ರಿಕಾಗೋಷ್ಠಿಗೆ ಮಹಿಳೆಯರನ್ನು ಸೇರಿಸಿಕೊಂಡ ತಾಲಿಬಾನ್ ಸಚಿವ ಮುತ್ತಕಿ

ಇದೇ ವೇಳೆ, ತಮ್ಮ ಹೇಳಿಕೆಯಿಂದ ಸೃಷ್ಟಿಯಾದ ವಿವಾದದ ಬಗ್ಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ. ‘ರಾಜಕೀಯ ದುರುದ್ದೇಶಕ್ಕೆ ತಮ್ಮ ಹೇಳಿಕೆಯನ್ನು ಬೇಕಂತಲೇ ತಿರುಚಲಾಗುತ್ತಿದೆ ಎಂದ ಅವರು, ತಾವು ನನಗೆ ಪ್ರಶ್ನೆ ಕೇಳುತ್ತೀರಿ. ನಾನು ಉತ್ತರಿಸಿದಾಗ ನನ್ನ ಪದಗಳನ್ನು ತಿರುಚಿ ಬೇರೆ ಅರ್ಥ ಬರುವಂತೆ ಮಾಡಲಾಗುತ್ತದೆ. ನಾನು ನೇರವಾಗಿ ಮಾತನಾಡುತ್ತೇನೆ. ಬೇರೆಯವರಂತಲ್ಲ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:34 am, Mon, 13 October 25