ಬೆಂಗಳೂರು ಸೆಂಟ್ರಲ್ ವೋಟರ್ಸ್ ಲಿಸ್ಟ್ ಅಕ್ರಮ: ಎಸ್ಐಟಿ ತನಿಖೆಗೆ ಸುಪ್ರೀಂ ನಕಾರ; ಚುನಾವಣಾ ಆಯೋಗಕ್ಕೆ ಹೋಗಲು ಸೂಚನೆ
Supreme Court refuses to direct SIT probe on Bengaluru central constituency voters list manipulation: 2024ರ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಕೇಂದ್ರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಈ ಸಂಬಂಧ ವಿಶೇಷ ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಮುಂದೆ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ಎಸ್ಐಟಿ ತನಿಖೆಗೆ ಕೋರ್ಟ್ ನಕಾರ ವ್ಯಕ್ತಪಡಿಸಿದ್ದು, ಅರ್ಜಿದಾರರು ಚುನಾವಣಾ ಆಯೋಗಕ್ಕೆ ದೂರು ನೀಡಬೇಕೆಂದು ಸೂಚಿಸಿದೆ.

ನವದೆಹಲಿ, ಅಕ್ಟೋಬರ್ 13: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎನ್ನುವ ಆರೋಪದ ಮೇಲೆ ಎಸ್ಐಟಿಯಿಂದ ತನಿಖೆ ನಡೆಸಬೇಕು ಎಂದು ಮಾಡಲಾಗಿದ್ದ ಮನವಿಯನ್ನು ಸುಪ್ರೀಂಕೋರ್ಟ್ (Supreme Court) ತಿರಸ್ಕರಿಸಿದೆ. ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಯಮಾಲ್ಯ ಬಾಗಚಿ ಅವರಿದ್ದ ಸರ್ವೋಚ್ಚ ನ್ಯಾಯಪೀಠ, ಎಸ್ಐಟಿಗೆ ತನಿಖೆ ವಹಿಸಲು ನಿರಾಕರಿಸಿತು. ಈ ವಿಷಯವನ್ನು ಭಾರತೀಯ ಚುನಾವಣಾ ಆಯೋಗದಲ್ಲಿ ಬಗೆಹರಿಸಿಕೊಳ್ಳಬೇಕೆಂದು ಅರ್ಜಿದಾರರಿಗೆ ಕೋರ್ಟ್ ಸೂಚಿಸಿತು.
ಚುನಾವಣಾ ಆಯೋಗಕ್ಕೆ ಡೆಡ್ಲೈನ್ ನೀಡಲೂ ಕೋರ್ಟ್ ನಕಾರ
ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಲಾಗಿರುವುದರ ಸಂಬಂಧ ಚುನಾವಣಾ ಆಯೋಗದಲ್ಲಿ ದೂರು ಸಲ್ಲಿಸಿ ಎಂದು ಕೋರ್ಟ್ ಸೂಚಿಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ಉತ್ತರಿಸಿ, ಚುನಾವಣಾ ಆಯೋಗಕ್ಕೆ ದೂರು ಕೊಡಲಾಗಿದ್ದು, ಇನ್ನೂ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ವಾದಿಸಿದರು.
ಇದನ್ನೂ ಓದಿ: ಕರೂರು ಕಾಲ್ತುಳಿತ ಘಟನೆ: ಸಿಬಿಐಗೆ ತನಿಖೆ ಹೊಣೆ ವಹಿಸಿದ ಸುಪ್ರೀಂಕೋರ್ಟ್
ಚುನಾವಣಾ ಆಯೋಗ ಯಾವಾಗ ಕ್ರಮ ಕೈಗೊಳ್ಳಬೇಕು ಎಂದು ಒಂದು ಗಡುವು ನಿಗದಿ ಮಾಡಬೇಕು ಎಂದೂ ಅರ್ಜಿದಾರರು ಸರ್ವೋಚ್ಚ ನ್ಯಾಯಪೀಠಕ್ಕೆ ಮನವಿಯನ್ನೂ ಮಾಡಿದರು. ಕೋರ್ಟ್ ಈ ಮನವಿಯನ್ನೂ ತಿರಸ್ಕರಿಸಿತು.
‘ಅರ್ಜಿದಾರರ ವಕೀಲರ ವಾದ ಆಲಿಸಿದೆವು. ಸಾರ್ವಜನಿಕ ಹಿತಾಸಕ್ತಿಯಿಂದ ಅರ್ಜಿ ಸಲ್ಲಿಸಲಾಗಿದೆ. ಆದರೆ, ಅರ್ಜಿಯನ್ನು ಪುರಸ್ಕರಿಸದಿರಲು ನಿರ್ಧರಿಸಿದ್ದೇವೆ. ಚುನಾವಣಾ ಆಯೋಗದಲ್ಲಿ ಪ್ರಕರಣ ತೆಗೆದುಕೊಂಡು ಹೋಗಬೇಕೆಂದು ಅರ್ಜಿದಾರರಿಗೆ ಸಲಹೆ ನೀಡಿದ್ದೇವೆ’ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೊಯಮಾಲ್ಯ ಬಾಗಚಿ ಅವರಿದ್ದ ನ್ಯಾಯಪೀಠ ತಿಳಿಸಿತು.
ಇದನ್ನೂ ಓದಿ: ಬಿಹಾರ ಚುನಾವಣೆ: ಸಮಾನ ಕ್ಷೇತ್ರಗಳಲ್ಲಿ ಬಿಜೆಪಿ – ಜೆಡಿಯು ಸ್ಪರ್ಧೆ
2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗಷ್ಟೇ ಆರೋಪಿಸಿದ್ದರು. ದೊಡ್ಡ ಸಂಖ್ಯೆಯಲ್ಲಿ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ ಎಂದೂ ಹೇಳಿ, ದೇಶಾದ್ಯಂತ ಮತಕಳ್ಳತನ ಅಭಿಯಾನವನ್ನೇ ಆರಂಭಿಸಿದ್ದರು. ಈ ಆರೋಪ ಸಂಬಂಧ ಅಕ್ರಮದ ಬಗ್ಗೆ ವಿಶೇಷ ತನಿಖೆ ನಡೆಸಲು ನಿರ್ದೇಶನ ನೀಡಬೇಕು ಎಂದು ಕೋರಿ ರೋಹಿತ್ ಪಾಂಡೆ ಎಂಬುವವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Mon, 13 October 25




