ಕರೂರು ಕಾಲ್ತುಳಿತ ಘಟನೆ: ಸಿಬಿಐಗೆ ತನಿಖೆ ಹೊಣೆ ವಹಿಸಿದ ಸುಪ್ರೀಂಕೋರ್ಟ್
SC Hands Over Karur Stampede Investigation To CBI: ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ನಡೆದ ನಟ ವಿಜಯ್ ರಾಜಕೀಯ ಕಾರ್ಯಕ್ರಮದಲ್ಲಿ ಕಾಲ್ತುಳಿತವಾಗಿ ಹಲವರು ಬಲಿಯಾಗಿದ್ದರು. ಆ ಘಟನೆಯ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಿ ಸರ್ವೋಚ್ಚ ನ್ಯಾಯಾಲಯ ಇಂದು (ಅ. 13) ಆದೇಶ ಹೊರಡಿಸಿದೆ. ನಟ ವಿಜಯ್ ಕೂಡ ಆ ಘಟನೆಯನ್ನು ಸಿಬಿಐ ತನಿಖೆಗೆ ಕೊಡಬೇಕೆಂದು ಒತ್ತಾಯಿಸಿದ್ದರು.

ನವದೆಹಲಿ, ಅಕ್ಟೋಬರ್ 13: ಕಳೆದ ತಿಂಗಳು ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ (Actor Vijay) ಅವರ ರಾಜಕೀಯ ಸಮಾವೇಶದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಘಟನೆಯ ತನಿಖೆಯನ್ನು ಸಿಬಿಐ ನಡೆಸಲಿದೆ. ಈ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್ (Supreme Court) ಸೋಮವಾರ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎನ್.ವಿ. ಅಂಜಾರಿಯಾ ಅವರಿಬ್ಬರ ಸರ್ವೋಚ್ಚ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಇದೇ ವೇಳೆ, ಸುಪ್ರೀಂಕೋರ್ಟ್ ಈ ಪ್ರಕರಣದ ಮೇಲ್ವಿಚಾರಣೆ ನಡೆಸಲು ಮೂರು ಸದಸ್ಯರ ಮಂಡಳಿಯನ್ನು ರಚಿಸಿದೆ. ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರಿಗೆ ಈ ಮಂಡಳಿಯ ನೇತೃತ್ವ ವಹಿಸಲಾಗಿದೆ. ಈ ಪ್ರಕರಣದಲ್ಲಿ ಸಿಬಿಐ ತನಿಖೆಯ ಮೇಲೆ ನಿಗಾ ಇಡುವಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ನ್ಯಾ| ರಸ್ತೋಗಿ ಅವರಿಗೆ ಕೋರ್ಟ್ ಮನವಿ ಮಾಡಿದೆ.
ಇದನ್ನೂ ಓದಿ: ‘ಮಗಳು ಮಧ್ಯರಾತ್ರಿ ನಂತರ ಆಚೆ ಹೋಗಿದ್ದಲ್ಲ, ಸಿಎಂ ಮಮತಾ ಹೇಳಿದ್ದು ಸುಳ್ಳು’- ಅತ್ಯಾಚಾರ ಸಂತ್ರಸ್ತೆಯ ತಂದೆ ಹೇಳಿಕೆ
ನಟ ವಿಜಯ್ ಮತ್ತಿತರರಿಂದ ಕೋರ್ಟ್ಗೆ ಮನವಿ
ಸೆಪ್ಟೆಂಬರ್ 27ರಂದು ಸ್ಟಾರ್ ನಟ ವಿಜಯ್ ಅವರು ತಮ್ಮ ಹೊಸ ರಾಜಕೀಯ ಪಕ್ಷದ ಸಮಾವೇಶವನ್ನು ಕರೂರಿನಲ್ಲಿ ಆಯೋಜಿಸಿದ್ದರು. 10,000 ಜನರು ಬರುವ ನಿರೀಕ್ಷೆ ಇತ್ತು. ಆದರೆ, 27,000 ಜನರು ಸೇರಿದ್ದರು. ಈ ವೇಳೆ ನೂಕುನುಗ್ಗಲು ಹೆಚ್ಚಾಗಿ, ಕಾಲ್ತುಳಿತ ಸಂಭವಿಸಿ 41 ಮಂದಿ ಬಲಿಯಾಗಿದ್ದರು.
ನಟ ವಿಜಯ್ ತಡವಾಗಿ ಬಂದಿದ್ದೇ ಕಾಲ್ತುಳಿತಕ್ಕೆ ಕಾರಣ ಎನ್ನುವುದು ಪೊಲೀಸರ ಮತ್ತು ತಮಿಳುನಾಡು ಸರ್ಕಾರದ ವಾದ. ಆದರೆ, ನಟ ವಿಜಯ್ ಹಾಗೂ ಇತರರು ಈ ಘಟನೆಯನ್ನು ಸ್ವತಂತ್ರ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸುತ್ತಾ ಬಂದಿದ್ದರು. ಮದ್ರಾಸ್ ಹೈಕೋರ್ಟ್ನಿಂದ ಎಸ್ಐಟಿ ತನಿಖೆಗೆ ನೀಡಲಾಗಿದ್ದ ನಿರ್ದೇಶನವನ್ನು ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ ಆಕ್ಷೇಪಿಸಿತ್ತು.
ಇದನ್ನೂ ಓದಿ: ಬಿಹಾರ ಚುನಾವಣೆ: ಸಮಾನ ಕ್ಷೇತ್ರಗಳಲ್ಲಿ ಬಿಜೆಪಿ – ಜೆಡಿಯು ಸ್ಪರ್ಧೆ
ಈ ಎಲ್ಲಾ ಅರ್ಜಿಗಳನ್ನು ಆಲಿಸಿದ ಸುಪ್ರೀಂಕೋರ್ಟ್ ಇದೀಗ ತನಿಖೆಯನ್ನು ಸಿಬಿಐ ವಹಿಸಿ ಆದೇಶ ಹೊರಡಿಸಿದೆ. ಕಾಲ್ತುಳಿತಕ್ಕೆ ನಿಜವಾದ ಕಾರಣ ಏನು ಎಂಬುದು ತನಿಖೆಯಿಂದ ಬೆಳಕಿಗೆ ಬರುವ ನಿರೀಕ್ಷೆ ಇದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Mon, 13 October 25




