ಪ್ರಧಾನಿ ಮೋದಿ ಭೇಟಿಯಾಗಿ ದೀಪಾವಳಿ ಶುಭಕೋರಿದ ಬಿ.ಎಸ್. ಯಡಿಯೂರಪ್ಪ
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯ ಬಿ.ಎಸ್. ಯಡಿಯೂರಪ್ಪ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಬಿಹಾರ ಚುನಾವಣೆಗೆ ಸಂಬಂಧಿಸಿ ನಡೆದ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸಭೆಯಲ್ಲೂ ಅವರು ಭಾಗಿಯಾಗಿದ್ದಾರೆ.

ನವದೆಹಲಿ, ಅಕ್ಟೋಬರ್ 13: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಕರ್ನಾಟಕ ಮಾಜಿ ಸಿಎಂ, ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯರಾದ ಬಿ.ಎಸ್. ಯಡಿಯೂರಪ್ಪ (B.S.Yediyurappa) ಭೇಟಿ ಮಾಡಿ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ ಹಿನ್ನಲೆ ನವದೆಹಲಿಯಲ್ಲಿ ನಡೆದ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸಭೆಯಲ್ಲಿಯೂ ಯಡಿಯೂರಪ್ಪ ಭಾಗಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಪಕ್ಷದ ಹಿರಿಯ ನಾಯಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಬಿ.ಎಸ್. ಯಡಿಯೂರಪ್ಪ ಟ್ವೀಟ್
An honour to have met with our Hon’ble Prime Minister Shri @narendramodi ji in New Delhi ahead of Deepavali.@PMOIndia @BJP4India @BJP4Karnataka pic.twitter.com/tX2oGGbFFo
— B.S.Yediyurappa (@BSYBJP) October 13, 2025
ಬಿಹಾರ ಚುನಾವಣೆಯಲ್ಲಿ ಶತಾಯಗತಾಯ NDA ಗೆಲುವಿಗೆ ಬಿಜೆಪಿ ಪಣ ತೊಟ್ಟಿದ್ದು, ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಕೇಂದ್ರೀಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಆಡಳಿತಾರೂಢ NDA ನಿನ್ನೆಯಷ್ಟೇ ಬಿಹಾರ ಚುನಾವಣೆಗೆ ಸೀಟು ಹಂಚಿಕೆ ಘೋಷಿಸಿದೆ. ಪಕ್ಷಗಳ ನಡುವಿನ ನಿರ್ಧಾರದಂತೆ ಬಿಜೆಪಿ ಮತ್ತು ಜೆಡಿಯು ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ. ಉಳಿದಂತೆ ಲೋಕ ಜನಶಕ್ತಿ ಪಕ್ಷಕ್ಕೆ (ರಾಮ್ ವಿಲಾಸ್) 29, ರಾಷ್ಟ್ರೀಯ ಲೋಕ್ ಮೋರ್ಚಾ ಮತ್ತು ಹಿಂದೂಸ್ತಾನಿ ಆವಂ ಮೋರ್ಚಾಗೆ ತಲಾ 6 ಕ್ಷೇತ್ರಗಳನ್ನ ಬಿಟ್ಟುಕೊಡಲಾಗಿದೆ.
ರಾಜಕೀಯ ವಿರೋಧಿ ಮಹಾಘಟಬಂದನ್ ಅಥವಾ ಇಂಡಿ ಒಕ್ಕೂಟದ ಜೊತೆ ಗೆಲುವಿಗಾಗಿ ಬಿಹಾರದಲ್ಲಿ NDA ಸೆಣೆಸಬೇಕಿದ್ದು, ಈ ಬಗ್ಗೆ ಮಹತ್ವದ ಸಭೆಯಲ್ಲಿ ಚರ್ಚೆ ನಡೆದಿದೆ. ತೇಜಸ್ವಿ ಯಾದವ್ ನೇತೃತ್ವದ RJD, ಕಾಂಗ್ರೆಸ್, CPI(ML), CPI, CPI(M) ಮತ್ತು ವಿಐಪಿ ಒಳಗೊಂಡ ಮೈತ್ರಿಪಡೆ ಬಿಹಾರದಲ್ಲಿ NDAಗೆ ಸವಾಲು ಒಡ್ಡಿದೆ. ಮಹಾಘಟಬಂದನ್ನ ಸೀಟು ಹಂಚಿಕೆ ಇನ್ನಷ್ಟೇ ಆಗಬೇಕಿದ್ದು, ಮಾಹಿತಿಯ ಪ್ರಕಾರ RJD ಮತ್ತು ಕಾಂಗ್ರೆಸ್ ನಡುವೆ ಈ ಬಗ್ಗೆ ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ. ಎರಡು ಹಂತಗಳಲ್ಲಿ ಬಿಹಾರ ಚುನಾವಣೆ ಘೋಷಣೆಯಾಗಿದ್ದು, ನವೆಂಬರ್ 6 ಮತ್ತು 11 ರಂದು ಮತದಾನ ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:50 pm, Mon, 13 October 25




