ಆರ್​​ಎಸ್​​ಎಸ್ ಮೇಲೆ ನಿಷೇಧವಿದ್ದಾಗ ಹೀಗೆ ನಡೆದಿತ್ತು ಸರ್ಕಾರಿ ನೌಕರರ ಕಾನೂನು ಹೋರಾಟ

|

Updated on: Jul 22, 2024 | 9:09 PM

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯತ್ವವಿರುವ ಸರ್ಕಾರಿ ಅಧಿಕಾರಿ ಬಡ್ತಿಗೆ ಅನರ್ಹವಲ್ಲ ಎಂದು ಮೈಸೂರು ಹೈಕೋರ್ಟ್ ತೀರ್ಪು ನೀಡಿತ್ತು. ಆರ್​​ಎಸ್​ಎಸ್​​ನಲ್ಲಿ ಸಕ್ರಿಯರಾಗಿದ್ದಕ್ಕೆ ಸರ್ಕಾರ ಬಡ್ಚಿ ನೀಡಿಲ್ಲ ಎಂದು 1966ರಲ್ಲಿ ರಂಗನಾಥಾಚಾರ್ ಅಗ್ನಿ ಹೋತ್ರಿ ಮೈಸೂರು ರಾಜ್ಯ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು.

ಆರ್​​ಎಸ್​​ಎಸ್ ಮೇಲೆ ನಿಷೇಧವಿದ್ದಾಗ ಹೀಗೆ ನಡೆದಿತ್ತು ಸರ್ಕಾರಿ ನೌಕರರ ಕಾನೂನು ಹೋರಾಟ
ಆರ್​​ಎಸ್​​ಎಸ್
Follow us on

ದೆಹಲಿ ಜುಲೈ 22: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಚಟುವಟಿಕೆಗಳಲ್ಲಿ ಒಡನಾಟ ಹೊಂದಬಾರದು ಎಂದು ಸರ್ಕಾರಿ ಉದ್ಯೋಗಿಗಳ ಮೇಲೆ ಹೇರಲಾಗಿದ್ದ ದಶಕಗಳ ಹಿಂದಿನ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಎನ್​​​ಡಿಎ (NDA) ಸರ್ಕಾರ ತೆರವುಗೊಳಿಸಿದೆ. ಸರ್ಕಾರದ ಈ ನಿರ್ಧಾರವನ್ನು ಆರ್​​ಎಸ್ಎಸ್ ಸ್ವಾಗತಿಸಿದ್ದು ಇದು ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಹೇಳಿದೆ.

ನಿಷೇಧ ಮಾಡಿದ್ದು ಯಾಕೆ?

ಆರ್​​ಎಸ್ಎಸ್ ಸದಸ್ಯ ನಾಥೂರಾಂ ಗೋಡ್ಸೆ, ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಂತರ ಅದರ ಚಟುವಟಿಕೆಗಳ ಮೇಲಿನ ಕಳವಳದಿಂದಾಗಿ ಆರ್​​ಎಸ್ಎಸ್ ಅನ್ನು 1948ರಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಆಗಿನ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. 1948ರ ಫೆಬ್ರುವರಿಯಲ್ಲಿ ಗಾಂಧೀಜಿಯವರ ಹತ್ಯೆಯ ನಂತರ ಸರ್ದಾರ್ ಪಟೇಲ್ ಅವರು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದರು. ಆದಾಗ್ಯೂ, 1966 ರಲ್ಲಿ ಮತ್ತೊಮ್ಮೆ ನಿಷೇಧಿಸಲಾಗಿತ್ತು. ಗೋಹತ್ಯೆ ವಿರುದ್ಧ 1966ರಲ್ಲಿ ಸಂಸತ್‌ನಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಗಾಗಿ ಆರ್​​ಎಸ್ಎಸ್- ಜನಸಂಘ ಲಕ್ಷಾಂತರ ಜನರನ್ನು ಒಗ್ಗೂಡಿಸಿತ್ತು. ಆಗ ನಡೆದ ಗೋಲಿಬಾರ್‌ನಲ್ಲಿ ಅನೇಕರು ಮೃತಪಟ್ಟಿದ್ದರು. ಆಗ ಇಂದಿರಾ ಗಾಂಧಿ, 1966 ನವೆಂಬರ್ 30ರಂದು ಸರ್ಕಾರಿ ಸಿಬ್ಬಂದಿಗಳು ಆರ್​​ಎಸ್ಎಸ್ ಸೇರದಂತೆ ನಿರ್ಬಂಧಿಸಿದರು ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.

1992 ರಲ್ಲಿ, ಬಾಬರಿ ಮಸೀದಿ ಧ್ವಂಸದ ನಂತರ ಆರ್​​ಎಸ್ಎಸ್ ಅನ್ನು ನಿಷೇಧಿಸಲಾಯಿತು. ಈ ನಿರ್ಧಾರ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆದಿತ್ತು. ಆಗ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ವಿಎಚ್‌ಪಿ, ಬಜರಂಗದಳ, ಜಮಾತ್- ಇ- ಇಸ್ಲಾಮಿ ಹಿಂದಿ ಮತ್ತು ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾದ ಮೇಲೂ ನಿಷೇಧ ಹೇರಿದ್ದರು.

ಕಾನೂನು ಹೋರಾಟ

ರಂಗನಾಥಾಚಾರ್ ಅಗ್ನಿಹೋತ್ರಿ Vs ಮೈಸೂರು ರಾಜ್ಯ ಮತ್ತು ಇತರೆ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸದಸ್ಯತ್ವವಿರುವ ಸರ್ಕಾರಿ ಅಧಿಕಾರಿ ಬಡ್ತಿಗೆ ಅನರ್ಹವಲ್ಲ ಎಂದು ಮೈಸೂರು ಹೈಕೋರ್ಟ್ ತೀರ್ಪು ನೀಡಿತ್ತು. ಯಲಬುರ್ಗಾ (ರಾಯಚೂರು ಜಿಲ್ಲೆ) ಯಲ್ಲಿ ಸಹಾಯಕ ಸರ್ಕಾರಿ ವಕೀಲ ರಂಗನಾಥಾಚಾರ್ ಅಗ್ನಿಹೋತ್ರಿ ಅವರು ರಾಜ್ಯ ಸರ್ಕಾರದ ವಿರುದ್ಧ ಸಲ್ಲಿಸಿದ ಅರ್ಜಿ ಮೇಲಿನ ತೀರ್ಪಿನಲ್ಲಿ ಹೈಕೋರ್ಟ್ 1966 ಜುಲೈ 06ರಂದು ಈ ತೀರ್ಪು ನೀಡಿತ್ತು.
ರಾಜ್ಯ ಸರ್ಕಾರವು ಅಗ್ನಿಹೋತ್ರಿಯನ್ನು ಆರ್‌ಎಸ್‌ಎಸ್‌ನ ಸಕ್ರಿಯ ಸದಸ್ಯ ಎಂಬ ಕಾರಣಕ್ಕಾಗಿ ಮುನ್ಸಿಫ್ ಆಗಿ ನೇಮಕ ಮಾಡಲಿಲ್ಲ. ಇದನ್ನು ಪ್ರಶ್ನಿಸಿ ಅಗ್ನಿಹೋತ್ರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಅಗ್ನಿಹೋತ್ರಿ ಅವರನ್ನು ಮುನ್ಸಿಫ್ ಆಗಿ ನೇಮಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಮೇಲ್ನೋಟಕ್ಕೆ, ಆರ್‌ಎಸ್‌ಎಸ್ ರಾಜಕೀಯೇತರ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಹಿಂದೂಗಳಲ್ಲದವರ ಬಗ್ಗೆ ಯಾವುದೇ ದ್ವೇಷ ಅಥವಾ ಕೋಪವಿಲ್ಲ. ಪ್ರಜಾಸತ್ತಾತ್ಮಕ ಜೀವನ ವಿಧಾನವನ್ನು ಒಪ್ಪಿಕೊಂಡಿರುವ ಭಾರತದಂತಹ ದೇಶದಲ್ಲಿ, ಇಂತಹ ಶಾಂತಿಯುತ ಸಂಘಟನೆಗಳ ಸದಸ್ಯತ್ವವು ಮುನ್ಸಿಫ್‌ಗಳ ನೇಮಕಾತಿಗೆ ವ್ಯಕ್ತಿಗಳನ್ನು ಅನರ್ಹಗೊಳಿಸುತ್ತದೆ ಎಂಬ ಪ್ರತಿಪಾದನೆಯನ್ನು ಒಪ್ಪಿಕೊಳ್ಳುವುದು ಸಮಂಜಸವಲ್ಲ ಎಂದು ತೀರ್ಪು ಪ್ರಕಟಿಸಿದ ಮೈಸೂರು ಹೈಕೋರ್ಟ್ ಹೇಳಿತ್ತು.

ಇದನ್ನೂ ಓದಿ: ಈ ನಿರ್ಧಾರ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ; ನಿಷೇಧ ತೆರವುಗೊಳಿಸಿದ್ದಕ್ಕೆ ಆರ್​ಎಸ್​ಎಸ್​ ಮೆಚ್ಚುಗೆ

ರಾಮ್‌ಫಾಲ್ Vs ಪಂಜಾಬ್ ರಾಜ್ಯ ಮತ್ತು ಇತರರು:
ಪಂಜಾಬ್ ಮತ್ತು ಹರ್ಯಾಣ ರಾಜ್ಯ ವಿರುದ್ಧದ ಪ್ರಕರಣದಲ್ಲಿ ಚಂಡೀಗಢದ ಹೈಕೋರ್ಟ್ 21 ಡಿಸೆಂಬರ್ 1967 ರಂದು ರಾಮ್‌ಫಾಲ್ ಅವರ ವಜಾ ಆದೇಶಗಳನ್ನು ರದ್ದುಗೊಳಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿದ ಕಾರಣಕ್ಕಾಗಿ 1965 ರಲ್ಲಿ ರಾಮ್‌ಫಾಲ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಅವರು ತಮ್ಮ ಭಾಗವಹಿಸುವಿಕೆಯನ್ನು ಒಪ್ಪಿಕೊಂಡಿದ್ದು ಆರ್‌ಎಸ್‌ಎಸ್ ರಾಜಕೀಯ ಪಕ್ಷ ಅಲ್ಲ ಹೀಗಾಗಿ ಇದು ಯಾವುದೇ ನೀತಿ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ವಾದಿಸಿದ್ದರು.

ಪಂಜಾಬ್ ಸರ್ಕಾರವು ತನ್ನ ಅಭಿಪ್ರಾಯದಲ್ಲಿ ಆರ್‌ಎಸ್‌ಎಸ್ ಒಂದು ರಾಜಕೀಯ ಪಕ್ಷವಾಗಿದೆ. ಆದ್ದರಿಂದ, ಅವರ ಭಾಗವಹಿಸುವಿಕೆಯು ನೀತಿ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಹೇಳಿತ್ತು.ಆ ಆದೇಶವನ್ನು ರಾಮ್‌ಫಾಲ್ ಅವರು ರಿಟ್ ಅರ್ಜಿಯ ಮೂಲಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.ಆದಾಗ್ಯೂ ಆರ್‌ಎಸ್‌ಎಸ್ ರಾಜಕೀಯ ಪಕ್ಷ ಎಂದು ಹೇಳಲು ಸರ್ಕಾರಕ್ಕೆ ಯಾವುದೇ ಸಾಕ್ಷ್ಯ ಇಲ್ಲದ ಕಾರಣ ರಾಮ್ ಫಾಲ್ ಈ ಪ್ರಕರಣದಲ್ಲಿ ಗೆಲುವು ಸಾಧಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:02 pm, Mon, 22 July 24