ಈ ನಿರ್ಧಾರ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ; ನಿಷೇಧ ತೆರವುಗೊಳಿಸಿದ್ದಕ್ಕೆ ಆರ್​ಎಸ್​ಎಸ್​ ಮೆಚ್ಚುಗೆ

ಜುಲೈ 9ರಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲಿನ ದಶಕಗಳ ಹಿಂದಿನ ನಿಷೇಧವನ್ನು ತೆಗೆದುಹಾಕಿದೆ. ಈ ಕ್ರಮಕ್ಕೆ ಆರ್​ಎಸ್​ಎಸ್​ ಮೆಚ್ಚುಗೆ ವ್ಯಕ್ತಪಡಿಸಿದೆ. ಹಾಗೇ, ಸರ್ಕಾರದ ಈ ನಿರ್ಧಾರಕ್ಕೆ ಕಾಂಗ್ರೆಸ್ ತೀವ್ರ ಟೀಕೆ ಮಾಡಿದೆ.

Follow us
ಸುಷ್ಮಾ ಚಕ್ರೆ
|

Updated on:Jul 22, 2024 | 4:35 PM

ನವದೆಹಲಿ: ಹಲವು ದಶಕಗಳಿಂದ ಸರ್ಕಾರಿ ಉದ್ಯೋಗದಲ್ಲಿರುವವರು ಆರ್​ಎಸ್​ಎಸ್​ನಲ್ಲಿ ತೊಡಗಿಸಿಕೊಳ್ಳಬಾರದು ಎಂದು ನಿಷೇಧ ಹೇರಲಾಗಿತ್ತು. ಆ ನಿಷೇಧವನ್ನು ಮೋದಿ ಸರ್ಕಾರ ತೆರವುಗೊಳಿಸಿದೆ. ಈ ಕ್ರಮಕ್ಕೆ ಆರ್​ಎಸ್​ಎಸ್​ ಮೆಚ್ಚುಗೆ ವ್ಯಕ್ತಪಡಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್ಎಸ್) ಕಳೆದ 99 ವರ್ಷಗಳಿಂದ ರಾಷ್ಟ್ರದ ಪುನರ್ನಿರ್ಮಾಣ ಮತ್ತು ಸಮಾಜದ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ರಾಷ್ಟ್ರೀಯ ಭದ್ರತೆ, ಏಕತೆ-ಸಮಗ್ರತೆ ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಆರ್‌ಎಸ್‌ಎಸ್ ಕೊಡುಗೆಯಿಂದಾಗಿ ದೇಶದ ವಿವಿಧ ರೀತಿಯ ನಾಯಕತ್ವವು ಕಾಲಕಾಲಕ್ಕೆ ಆರ್‌ಎಸ್‌ಎಸ್ ಪಾತ್ರವನ್ನು ಶ್ಲಾಘಿಸಿದೆ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಮುಖ್ಯಸ್ಥ ಸುನೀಲ್ ಅಂಬೇಕರ್ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷವು (ಬಿಜೆಪಿ) ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. 58 ವರ್ಷಗಳ ನಂತರ ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಸೇರುವ ನಿಷೇಧವನ್ನು ಸರ್ಕಾರ ತೆಗೆದುಹಾಕಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ನಿರ್ಧಾರ ಪ್ರಕಟಿಸಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವಾಗತಿಸಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗಿಗಳಿಗೆ ಆರ್​ಎಸ್​ಎಸ್​ ನಿಷೇಧ ತೆರವು; ಅಧಿಕಾರಶಾಹಿಗಳೂ ಚಡ್ಡಿಯಲ್ಲಿ ಬರಬಹುದು ಎಂದು ಕಾಂಗ್ರೆಸ್ ಲೇವಡಿ

ಕಾಂಗ್ರೆಸ್ ವಿಧಿಸಿದ ನಿಷೇಧವನ್ನು ಟೀಕಿಸಿದ ಸುನೀಲ್ ಅಂಬೇಕರ್, ಕಾಂಗ್ರೆಸ್​ನವರ ರಾಜಕೀಯ ಸ್ವಹಿತಾಸಕ್ತಿಗಳಿಂದಾಗಿ ಆಗಿನ ಸರ್ಕಾರವು ಸರ್ಕಾರಿ ನೌಕರರು ಆರ್‌ಎಸ್‌ಎಸ್‌ನಂತಹ ರಚನಾತ್ಮಕ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ವಿನಾಕಾರಣ ನಿಷೇಧಿಸಿತು. ಪ್ರಸ್ತುತ ಸರ್ಕಾರದ ನಿರ್ಧಾರವು ಸೂಕ್ತವಾಗಿದೆ ಮತ್ತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರ್​ಎಸ್​ಎಸ್​ ಸದಸ್ಯರಾದ ನಾಥೂರಾಂ ಗೋಡ್ಸೆ ಅವರು ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಂತರ ಅದರ ಚಟುವಟಿಕೆಗಳ ಮೇಲಿನ ಕಳವಳದಿಂದಾಗಿ ಆರ್​ಎಸ್​ಎಸ್​ ಅನ್ನು 1948ರಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಯಿತು. 1948ರ ಫೆಬ್ರುವರಿಯಲ್ಲಿ ಗಾಂಧೀಜಿಯವರ ಹತ್ಯೆಯ ನಂತರ ಸರ್ದಾರ್ ಪಟೇಲ್ ಅವರು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದರು.

ಇದನ್ನೂ ಓದಿ: ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ಯುವ ಜನರು ಆರ್‌ಎಸ್‌ಎಸ್‌ಗೆ ಸೇರ್ಪಡೆ: ಸುನೀಲ್ ಅಂಬೇಕರ್

ಕೇಂದ್ರ ಸರ್ಕಾರವು ಹಿಂದಿನ ಕೇಂದ್ರ ಸರ್ಕಾರಗಳು ಹೊರಡಿಸಿದ 1966, 1970 ಮತ್ತು 1980 ರ ಆದೇಶಗಳನ್ನು ತಿದ್ದುಪಡಿ ಮಾಡಿದೆ. ಇದು ಸರ್ಕಾರಿ ನೌಕರರು ಇತರ ಕೆಲವು ಸಂಸ್ಥೆಗಳೊಂದಿಗೆ RSS ಶಾಖಾಗಳು ಮತ್ತು ಇತರ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿತ್ತು ಮತ್ತು ಹಾಗೆ ಮಾಡಲು ಕಠಿಣ ದಂಡದ ನಿಬಂಧನೆಗಳನ್ನು ವಿಧಿಸಿತ್ತು. ಅದನ್ನು ಈಗ ಕೇಂದ್ರ ಸರ್ಕಾರ ತೆಗೆದುಹಾಕಿದೆ.

ಹಿಂದಿನ ಸರಕಾರಗಳ ಈ ಆದೇಶದಿಂದಾಗಿ ನಿವೃತ್ತಿಯ ನಂತರವೂ ಅನೇಕ ಸರಕಾರಿ ನೌಕರರು ಪಿಂಚಣಿಯ ಕಾರಣದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೆ, ಈಗ ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:35 pm, Mon, 22 July 24