ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ: ಸೆ 27ಕ್ಕೆ ವಿಚಾರಣೆ ಮುಂದೂಡಿದ ಇಡಿ ನ್ಯಾಯಾಲಯ

ಮುಂದೆ ಕಾಂಗ್ರೆಸ್ ಸರ್ಕಾರ ಬರುತ್ತೆ ಎನ್ನುವುದು ಎಲ್ಲರಿಗೂ ಅರ್ಥವಾಗಿದೆ. ಶ್ರೀರಾಮುಲು ಮತ್ತು ಮಾಧುಸ್ವಾಮಿ ಅವರನ್ನು ಅಭಿನಂದಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ: ಸೆ 27ಕ್ಕೆ ವಿಚಾರಣೆ ಮುಂದೂಡಿದ ಇಡಿ ನ್ಯಾಯಾಲಯ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 17, 2022 | 1:02 PM

ದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿಯ ಜಾರಿ ನಿರ್ದೇಶನಾಲಯದ (Enforcement Directorate – ED) ನ್ಯಾಯಲಯವು ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ. ನ್ಯಾಯಾಲಯದ ವಿಚಾರಣೆ ಬಳಿಕ ಡಿ.ಕೆ.ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳೊಂಡಿದೆ ಮಾತನಾಡಿದರು. ‘ಇಡಿ ಅಧಿಕಾರಿಗಳು ಮುಂದಿನ ತಿಂಗಳು ದಾಖಲೆ ನೀಡುವುದಾಗಿ ಹೇಳಿದ್ದಾರೆ. ದಾಖಲೆ ನೀಡಿದ ಬಳಿಕ ನಾನು ಮಾತನಾಡುತ್ತೇನೆ. ಸಮಯ ಸಿಕ್ಕರೆ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತೇನೆ. ನಮ್ಮ ಕೆಲ ವಕೀಲರನ್ನೂ ಭೇಟಿಯಾಗಬೇಕಿದೆ’ ಎಂದು ವಿವರಿಸಿದರು.

ನ್ಯಾಯಾಲಯಕ್ಕಕೆ ಗೌರವ ಕೊಟ್ಟು ವಿಚಾರಣೆ ಹಾಜರಾಗಿದ್ದೆ. ನ್ಯಾಯಾಲಯವು ಕೆಲ ದಾಖಲೆಗಳನ್ನು ಇಡಿ ಅಧಿಕಾರಿಗಳ ಬಳಿ ಕೇಳಿದೆ. ಅವರು ದಾಖಲೆಗಳನ್ನು ಕೊಟ್ಟ ಬಳಿಕ ನಾನು ಪ್ರತಿಕ್ರಿಯಿಸುತ್ತೇನೆ. ಸದ್ಯಕ್ಕೆ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್ 27ಕ್ಕೆ ಮುಂದೂಡಿದೆ ಎಂದು ಹೇಳಿದರು. ಪ್ರಕರಣ ಸಂಬಂಧ ದಾಖಲೆ ನೀಡುವಂತೆ ಆರೋಪಿಗಳಾದ ಸಚಿನ್ ನಾರಾಯಣ್, ಸುನಿಲ್ ಶರ್ಮಾ, ರಾಜೇಂದ್ರ ಕೋರಿದ್ದರು. ಜಾರ್ಜ್​ಶೀಟ್ ಜೊತೆಗೆ ಇಡಿ ಕೋರ್ಟ್​ಗೆ ಸಲ್ಲಿಸಿರುವ ಎಲ್ಲ ದಾಖಲೆಗಳ ಒದಗಿಸಬೇಕೆಂದು ಅವರು ಮನವಿ ಸಲ್ಲಿಸಿದ್ದರು. ದಾಖಲೆ ನೀಡಲು ಇಡಿ ಪರ ವಕೀಲರು ನಾಲ್ಕೈದು ವಾರ ಸಮಯ ಬೇಕು ಎಂದು ಕೋರಿದ್ದರು. ಇದಕ್ಕೆ ನ್ಯಾಯಾಲಯವು ಸಮ್ಮತಿಸಿತು.

ಇಂದು ಸಮಯ ಸಿಕ್ಕರೆ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲರನ್ನು ಭೇಟಿಯಾಗಿ, ರಾಜ್ಯದ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ನಿನ್ನೆ ದಿನಪೂರ್ತಿ ಅವರ ಜೊತೆಗಿದ್ದರೂ ಏನೊಂದೂ ಮಾತನಾಡಲು ಸಾಧ್ಯವಾಗಿರಲಿಲ್ಲ. ದೆಹಲಿಗೆ ಬಂದಾಗ ನಮ್ಮ ನಾಯಕರನ್ನು ಭೇಟಿ ಮಾಡುವುದು ಸಂಪ್ರದಾಯ. ಹೀಗಾಗಿ ಸಮಯ ಸಿಕ್ಕರೇ ನಮ್ಮ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.

ಮುಸ್ಲಿಮರ ಕೇರಿಯಲ್ಲಿ ಸಾರ್ವಕರ್ ಪೊಟೊ ಹಾಕಿದ್ದರಿಂದ ಶಿವಮೊಗ್ಗದಲ್ಲಿ ಗಲಭೆಯಾಯಿತು ಎನ್ನುವ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಪಕ್ಷದ ನಾಯಕರೊಬ್ಬರು ಮಾತನಾಡಿದ ಮೇಲೆ ಅದಕ್ಕೆ ಅವರೇ ವಿವರಣೆ ಕೊಡುತ್ತಾನೆ. ನಾನು ಅದಕ್ಕೆ ಪ್ರತಿಯಾಗಿ ಏನೊಂದೂ ಹೇಳಲು ಆಗುವುದಿಲ್ಲ ಎಂದರು. ನಮ್ಮ ಪಕ್ಷದ ನಾಯಕರು ಹೇಳಿಕೆ ವಿಚಾರವನ್ನು ನಾನು ಮುಂದುವರಿಸುವುದಿಲ್ಲ ಎಂದರು.

ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಬಿಜೆಪಿಯವರೇ ಒಪ್ಪಿಕೊಂಡಂತೆ ಆಗಿದ್ದು ಸಂತೋಷ. ಬೇರೆ ಪಕ್ಷದ ನಾಯಕರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿರುವುದು ಖುಷಿ ವಿಚಾರ. ಮುಂದೆ ಕಾಂಗ್ರೆಸ್ ಸರ್ಕಾರ ಬರುತ್ತೆ ಎನ್ನುವುದು ಎಲ್ಲರಿಗೂ ಅರ್ಥವಾಗಿದೆ. ಶ್ರೀರಾಮುಲು ಮತ್ತು ಮಾಧುಸ್ವಾಮಿ ಅವರನ್ನು ಅಭಿನಂದಿಸುತ್ತೇನೆ ಎಂದರು. ಶ್ರೀರಾಮುಲು ಮತ್ತು ಸಿದ್ದರಾಮಯ್ಯ ಒಳ ಒಪ್ಪಂದದ ಕುರಿತು ನನ್ನ ಬಳಿ ಯಾವುದೇ ಮಾಹಿತಿಯಿಲ್ಲ. ನನಗೆ ಒಳ ಒಪ್ಪಂದದ ಅನುಭವ ಇಲ್ಲ ಎಂದು ಹೇಳಿದರು.

Published On - 1:01 pm, Wed, 17 August 22