
ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘಿಸಿ 5,551 ಕೋಟಿ ರೂ. ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಶಿಯೋಮಿ ಟೆಕ್ನಾಲಜಿ ಇಂಡಿಯಾದ (Xiaomi Technology India) ಮುಖ್ಯ ಹಣಕಾಸು ಅಧಿಕಾರಿ (CFO) ಸಮೀರ್ ರಾವ್, ಮಾಜಿ ವ್ಯವಸ್ಥಾಪಕ ನಿರ್ದೇಶಕ ಮನು ಜೈನ್ ಮತ್ತು ಮೂರು ಬ್ಯಾಂಕ್‌ಗಳಿಗೆ ಜಾರಿ ನಿರ್ದೇಶನಾಲಯ (ED) ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ವಿಚಾರವಾಗಿ ಅಧಿಕಾರಿಗಳ ಉಲ್ಲೇಖಿಸಿ ‘ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
ವರದಿಯ ಪ್ರಕಾರ, ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಅಡಿಯಲ್ಲಿ ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಇಬ್ಬರು ಕಾರ್ಯನಿರ್ವಾಹಕರು, ಸಿಟಿ ಬ್ಯಾಂಕ್, ಹೆಚ್ಎಸ್ಬಿಸಿ ಬ್ಯಾಂಕ್ ಮತ್ತು ಡಾಯ್ಚ ಬ್ಯಾಂಕ್ ಎಜಿಗೆ ಶೋಕಾಸ್ ನೋಟಿಸ್ ನೀಡಿದೆ.
ಫೆಮಾದ ಸೆಕ್ಷನ್ 37ಎ ಅಡಿಯಲ್ಲಿ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರವು ಈ ವಶಪಡಿಸಿಕೊಳ್ಳುವ ಆದೇಶವನ್ನು ದೃಢಪಡಿಸಿದೆ. 5,551.27 ಕೋಟಿ ರೂಪಾಯಿಗೆ ಸಮಾನವಾದ ವಿದೇಶಿ ವಿನಿಮಯವನ್ನು ಶಿಯೋಮಿ ಇಂಡಿಯಾವು ಅನಧಿಕೃತ ರೀತಿಯಲ್ಲಿ ಮಾಡಿದೆ. ಹೀಗಾಗಿ 1999 ರ ಫೆಮಾ ಕಾಯ್ದೆಯ ಸೆಕ್ಷನ್ 4 ಮತ್ತು 37 ಎ ನಿಬಂಧನೆಗಳ ಪ್ರಕಾರ ದಂಡ ವಸೂಲಿ ಮಾಡಬಹುದಾಗಿದೆ ಎಂದು ವರದಿ ಹೇಳಿದೆ.
ಸಾಮಾನ್ಯವಾಗಿ ಫೆಮಾ ತನಿಖೆ ಪೂರ್ಣಗೊಂಡ ನಂತರ ಶೋಕಾಸ್ ನೋಟಿಸ್ ನೀಡಲಾಗುತ್ತದೆ ಮತ್ತು ಅದು ಮುಗಿದ ನಂತರ ಶಿಯೋಮಿ ಅಪರಾಧದ ಮೂರು ಪಟ್ಟು ದಂಡವನ್ನು ಪಾವತಿಸಬೇಕಾಗಬಹುದು ಎಂದು ‘ಪಿಟಿಐ’ ವರದಿ ಉಲ್ಲೇಖಿಸಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ