ತನಿಖೆಗೆ ಅಡ್ಡಿಪಡಿಸಿದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಹೋದ ಇಡಿ

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಟಿಎಂಸಿ ಸರ್ಕಾರದ ರಾಜಕೀಯ ಸಲಹಾ ಸಂಸ್ಥೆಯಾಗಿರುವ ಐ-ಪ್ಯಾಕ್ (I-PAC) ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಕಚೇರಿಯಲ್ಲಿದ್ದ ಮೊಬೈಲ್, ಲ್ಯಾಪ್​ಟಾಪ್, ಕೆಲವು ಫೈಲ್​ಗಳನ್ನು ಸಿಎಂ ಮಮತಾ ಬ್ಯಾನರ್ಜಿ ಹೊತ್ತೊಯ್ದಿದ್ದರು. ಇದು ಇಡಿ ಮತ್ತು ಬಂಗಾಳ ಸರ್ಕಾರದ ನಡುವಿನ ವಾದ-ಪ್ರತಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಕೊಲ್ಕತ್ತಾ ಹೈಕೋರ್ಟ್ ಮುಂದೂಡಿದ ಹಿನ್ನೆಲೆಯಲ್ಲಿ ಇಡಿ ಇದೀಗ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

ತನಿಖೆಗೆ ಅಡ್ಡಿಪಡಿಸಿದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಹೋದ ಇಡಿ
Cm Mamata Banerjee

Updated on: Jan 10, 2026 | 5:29 PM

ಕೊಲ್ಕತ್ತಾ, ಜನವರಿ 10: ಐ-ಪ್ಯಾಕ್ (I-PAC) ಕಲ್ಲಿದ್ದಲು ಹಗರಣ ಪ್ರಕರಣದ ತನಿಖೆಗೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (CM Mamata Banerjee) ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಇಡಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. “ನ್ಯಾಯಯುತ ಮತ್ತು ಸ್ವತಂತ್ರ ತನಿಖೆ ನಡೆಸುವ ಹಕ್ಕನ್ನು ರಾಜ್ಯ ಸರ್ಕಾರ ಅಡ್ಡಿಪಡಿಸಿದೆ” ಎಂದು ಇಡಿ ತನ್ನ ಅರ್ಜಿಯಲ್ಲಿ ಹೇಳಿದೆ.

ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಮೇಲಿನ ದಾಳಿಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಡಿ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಗೆ ಒತ್ತಾಯಿಸಿದೆ. ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ, ಕೊಲ್ಕತ್ತಾದಲ್ಲಿರುವ ಐ-ಪ್ಯಾಕ್ ನಿರ್ದೇಶಕ ಪ್ರತೀಕ್ ಜೈನ್ ಅವರ ಮನೆ ಮೇಲೆ ದಾಳಿ ನಡೆದಾಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಸ್ಥೆಯ ತನಿಖೆಗೆ ಅಡ್ಡಿಪಡಿಸಿದರು ಮತ್ತು ಅಲ್ಲಿದ್ದ ಮಹತ್ವದ ದಾಖಲೆಗಳನ್ನು ತೆಗೆದುಕೊಂಡರು ಎಂದು ಇಡಿ ಆರೋಪಿಸಿದೆ.

ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಇಡಿ ದಾಳಿ ವೇಳೆ ಹೈಡ್ರಾಮಾ; I-PAC ಕಚೇರಿಗೆ ನುಗ್ಗಿ ಹಸಿರು ಫೈಲ್‌ ಹೊತ್ತೊಯ್ದ ಮಮತಾ ಬ್ಯಾನರ್ಜಿ

“ರಾಜ್ಯ ಪೊಲೀಸರ ಸಹಾಯದಿಂದ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಡಿ ಅಧಿಕಾರಿಗಳ ಕಾನೂನುಬದ್ಧ ಕಸ್ಟಡಿಯಿಂದ ಡಿಜಿಟಲ್ ಸಾಧನಗಳು, ಎಲೆಕ್ಟ್ರಾನಿಕ್ ಸಂಗ್ರಹಣಾ ಮಾಧ್ಯಮಗಳು ಮತ್ತು ಪ್ರಮುಖ ಅಪರಾಧ ದಾಖಲೆಗಳನ್ನು ಬಲವಂತವಾಗಿ ವಶಪಡಿಸಿಕೊಂಡು, ಮುಚ್ಚಿಟ್ಟಿದ್ದಾರೆ” ಎಂದು ಇಡಿ ಆರೋಪಿಸಿದೆ. ಆದರೆ. ಕೊಲ್ಕತ್ತಾ ಹೈಕೋರ್ಟ್ ಇಡಿಗೆ ತುರ್ತು ಪರಿಹಾರ ನೀಡಲು ನಿರಾಕರಿಸಿತ್ತು. ಈ ಪ್ರಕರಣದ ವಿಚಾರಣೆಯನ್ನು ಮುಂದೂಡಿತ್ತು. ಹೀಗಾಗಿ, ಇಡಿ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ