ಸಿಎಂ ಮಮತಾ ಬ್ಯಾನರ್ಜಿ ತನಿಖೆಗೆ ಅಡ್ಡಿಪಡಿಸಿ, ಬಲವಂತವಾಗಿ ದಾಖಲೆ ಹೊತ್ತೊಯ್ದಿದ್ದಾರೆ; ಹೈಕೋರ್ಟ್ ಮೊರೆ ಹೋದ ಇಡಿ
ಕೊಲ್ಕತ್ತಾದ ಹಲವು ಕಡೆ ಇಂದು ಇಡಿ ದಾಳಿ ನಡೆದಿತ್ತು. ಈ ವೇಳೆ I-PAC ಮುಖ್ಯಸ್ಥ ಪ್ರತೀಕ್ ಜೈನ್ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗ ಇದ್ದಕ್ಕಿದ್ದಂತೆ ಅವರ ನಿವಾಸಕ್ಕೆ ಆಗಮಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲ್ಯಾಪ್‌ಟಾಪ್, ಕೆಲವು ಫೈಲ್ಗಳನ್ನು ಎತ್ತಿಕೊಂಡು ಹೋಗಿದ್ದರು. ಇದೀಗ ಈ ವಿಚಾರವಾಗಿ ಇಡಿ ಕೊಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದೆ. ತನ್ನ ಶೋಧ ಕಾರ್ಯಾಚರಣೆಗಳ ಸಮಯದಲ್ಲಿ ಅಕ್ರಮ ಹಸ್ತಕ್ಷೇಪವನ್ನು ಆರೋಪಿಸಿ ಇಡಿ ಕೊಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು.

ಕೊಲ್ಕತ್ತಾ, ಜನವರಿ 8: ಕೊಲ್ಕತ್ತಾದಲ್ಲಿ ಜಾರಿ ನಿರ್ದೇಶನಾಲಯದ ದಾಳಿಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ತಮ್ಮ ಚುನಾವಣಾ ಸಲಹೆಗಾರ I-PAC ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮತ್ತು ಅವರ ಕಚೇರಿಗಳಿಂದ ಲ್ಯಾಪ್‌ಟಾಪ್, ಫೋನ್ ಮತ್ತು ಹಲವು ದಾಖಲೆಗಳನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ಇಡಿ ಆರೋಪಿಸಿದೆ. ಹಾಗೇ, ಸಿಎಂ ಮಮತಾ ಬ್ಯಾನರ್ಜಿ ತಮ್ಮ ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ ಮತ್ತು ಕಲ್ಲಿದ್ದಲು ಕಳ್ಳಸಾಗಣೆ, ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಇಡಿ ಹೈಕೋರ್ಟ್ ಮೊರೆಹೋಗಿದೆ.
“ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಹೆಚ್ಚಿನ ಸಂಖ್ಯೆಯ ಪೊಲೀಸ್ ಅಧಿಕಾರಿಗಳು ಆಗಮಿಸುವವರೆಗೂ ವಿಚಾರಣೆ ಶಾಂತಿಯುತ ಮತ್ತು ವೃತ್ತಿಪರ ರೀತಿಯಲ್ಲಿ ನಡೆಯುತ್ತಿತ್ತು. ಆದರೆ, ಸಿಎಂ ಮಮತಾ ಬ್ಯಾನರ್ಜಿ ಪ್ರತೀಕ್ ಜೈನ್ ಅವರ ನಿವಾಸದ ಆವರಣಕ್ಕೆ ಪ್ರವೇಶಿಸಿ, ಅನೇಕ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳು ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ತೆಗೆದುಕೊಂಡು ಹೋದರು. ಇದರಿಂದ ನಮ್ಮ ತನಿಖೆಗೆ ಅಡ್ಡಿಯಾಗಿದೆ” ಎಂದು ಇಡಿ ದೂರಿನಲ್ಲಿ ತಿಳಿಸಿದೆ.
ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಇಡಿ ದಾಳಿ ವೇಳೆ ಹೈಡ್ರಾಮಾ; I-PAC ಕಚೇರಿಗೆ ನುಗ್ಗಿ ಹಸಿರು ಫೈಲ್ ಹೊತ್ತೊಯ್ದ ಮಮತಾ ಬ್ಯಾನರ್ಜಿ
ಹೈಕೋರ್ಟ್ ನಾಳೆ (ಶುಕ್ರವಾರ) ಈ ಪ್ರಕರಣವನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಈ ದಾಳಿ ರಾಜಕೀಯ ಪ್ರೇರಿತ ಮತ್ತು ಬಿಜೆಪಿಯ ಪ್ಲಾನ್ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಆದರೆ, ಇಡಿ ಈ ಆರೋಪಗಳನ್ನು ನಿರಾಕರಿಸಿದೆ. ಇದು ಯಾವುದೇ ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲ ಎಂದು ಹೇಳಿದೆ. ನಾವು ಯಾವುದೇ ಪಕ್ಷದ ಕಚೇರಿಯನ್ನು ಶೋಧಿಸಿಲ್ಲ. ಈ ಶೋಧನೆಯು ಯಾವುದೇ ಚುನಾವಣೆಗಳಿಗೆ ಸಂಬಂಧಿಸಿಲ್ಲ ಮತ್ತು ಹಣ ವರ್ಗಾವಣೆಯ ವಿರುದ್ಧ ನಿಯಮಿತ ಕ್ರಮದ ಭಾಗವಾಗಿದೆ ಎಂದು ED ಅಧಿಕಾರಿಗಳು ತಿಳಿಸಿದ್ದಾರೆ.
ED Headquarters Unit is conducting search action at 10 premises (6 in West Bengal and 4 in Delhi) under PMLA in connection with coal smuggling syndicate led by Anup Majee used to steal and illegally excavate coal from ECL leasehold areas of West Bengal. The search action was… pic.twitter.com/ab7PCReiJo
— ED (@dir_ed) January 8, 2026
ಇದರ ನಡುವೆ, ಇಡಿ ದಾಳಿಯ ಸಮಯದಲ್ಲಿ ಪ್ರಮುಖ ದಾಖಲೆಗಳ ಕಳ್ಳತನವಾಗಿದೆ ಎಂದು ಆರೋಪಿಸಿ ಪ್ರತೀಕ್ ಜೈನ್ ಅವರ ಕುಟುಂಬವು ಜಾರಿ ನಿರ್ದೇಶನಾಲಯದ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
