ಸಾವನ್ನಪ್ಪಿದ ಭಿಕ್ಷುಕನ ಬ್ಯಾಗ್ನಲ್ಲಿತ್ತು 4.5 ಲಕ್ಷ ರೂ. ವಿದೇಶಿ ಕರೆನ್ಸಿ
ಕೇರಳದಲ್ಲಿ ರಸ್ತೆ ಅಪಘಾತದಲ್ಲಿ ಭಿಕ್ಷುಕನೊಬ್ಬ ಸಾವನ್ನಪ್ಪಿದ್ದ. ಆತನ ಗುರುತನ್ನು ಪತ್ತೆಹಚ್ಚಲು ಬ್ಯಾಗ್ ಪರಿಶೀಲಿಸಿದಾಗ ಪೊಲೀಸರಿಗೇ ಶಾಕ್ ಆಗಿತ್ತು. ಆತನ ಬ್ಯಾಗ್ನಲ್ಲಿ 4.5 ಲಕ್ಷ ರೂ.ಗಳಿಗಿಂತ ಹೆಚ್ಚು ಹಣ ಪತ್ತೆಯಾಗಿದೆ. ಈಗಾಗಲೇ ಬ್ಯಾನ್ ಆಗಿರುವ 2,000 ರೂ. ನೋಟುಗಳು ಮತ್ತು ವಿದೇಶಿ ಕರೆನ್ಸಿ ಕೂಡ ಅದರಲ್ಲಿತ್ತು. ಅನಿಲ್ ಕಿಶೋರ್ ಪ್ರತಿದಿನ ಊಟಕ್ಕಾಗಿ ಭಿಕ್ಷೆ ಬೇಡುತ್ತಿದ್ದ. ಆದರೆ, ಆತ ಲಕ್ಷಾಧೀಶ್ವರನಾಗಿದ್ದರೂ ಯಾಕೆ ಭಿಕ್ಷೆ ಬೇಡಿ ತಿನ್ನುತ್ತಿದ್ದ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ.

ಆಲಪ್ಪುಳ, ಜನವರಿ 8: ಕೇರಳದ ರಸ್ತೆ ಅಪಘಾತದ ನಂತರ ಸಾವನ್ನಪ್ಪಿದ ಭಿಕ್ಷುಕನೊಬ್ಬನ ಬಳಿ 4.5 ಲಕ್ಷ ರೂಪಾಯಿಗೂ ಹೆಚ್ಚು ಹಣ ಇದ್ದುದು ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಲು ಪೊಲೀಸರು ಆತನ ಬ್ಯಾಗ್ ಪರಿಶೀಲಿಸಿದರು. ಈ ವೇಳೆ ಅಲ್ಲಿದ್ದ ಭಾರೀ ಪ್ರಮಾಣದ ವಿದೇಶಿ ಕರೆನ್ಸಿಯನ್ನು ಕಂಡು ಆಲಪ್ಪುಳ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ಆಘಾತವಾಗಿದೆ. ಚಾರುಮ್ಮೂಟ್ ಮತ್ತು ಆಲಪ್ಪುಳ ಹತ್ತಿರದ ಪ್ರದೇಶಗಳಲ್ಲಿ ಪರಿಚಿತ ವ್ಯಕ್ತಿಯಾಗಿದ್ದ ಭಿಕ್ಷುಕನಿಗೆ (Beggar) ಸೇರಿದ ಬ್ಯಾಗ್ನಿಂದ ಲಕ್ಷಾಂತರ ರೂ ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಸೋಮವಾರ ರಾತ್ರಿ ಭಿಕ್ಷುಕ ಅಪಘಾತಕ್ಕೀಡಾದಾಗ ಈ ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿಗಳು ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಯಾರೊಂದಿಗೂ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳದೆ ಆ ವ್ಯಕ್ತಿ ತಾನೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಟುಹೋದ. ಆಸ್ಪತ್ರೆ ದಾಖಲೆಗಳ ಪ್ರಕಾರ, ಆ ವ್ಯಕ್ತಿ ತನ್ನ ಹೆಸರು ಅನಿಲ್ ಕಿಶೋರ್ ಎಂದು ಹೇಳಿದ್ದ.
ಮಂಗಳವಾರ ಬೆಳಿಗ್ಗೆ ಅಂಗಡಿಯೊಂದರ ಹೊರಗೆ ಅನಿಲ್ ಕಿಶೋರ್ ಮೃತಪಟ್ಟಿರುವುದು ಕಂಡುಬಂದಿದೆ. ಆತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಆ ಶವದ ಬಳಿ ಸಿಕ್ಕಿದ ಬ್ಯಾಗ್ ಅನ್ನು ಪರಿಶೀಲನೆಗಾಗಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಯಿತು.
ಇದನ್ನೂ ಓದಿ: 14 ವರ್ಷದ ಬಾಲಕಿ ಮೇಲೆ ಚಲಿಸುವ ಕಾರಿನೊಳಗೆ ಯೂಟ್ಯೂಬರ್, ಪೊಲೀಸ್ ಸೇರಿ ಅತ್ಯಾಚಾರ
ಸ್ಥಳೀಯ ಪಂಚಾಯತ್ ಸದಸ್ಯ ಫಿಲಿಪ್ ಉಮ್ಮನ್ ಅವರ ಸಮ್ಮುಖದಲ್ಲಿ ಬ್ಯಾಗ್ ತೆರೆದಾಗ ಪೊಲೀಸ್ ಅಧಿಕಾರಿಗಳು ದಿಗ್ಭ್ರಮೆಗೊಂಡರು. ಆ ಬ್ಯಾಗ್ನಲ್ಲಿ ಬ್ಯಾನ್ ಆಗಿರುವ ನೋಟುಗಳು ಮತ್ತು ವಿದೇಶಿ ಕರೆನ್ಸಿಗಳಿದ್ದವು. ಆ ಬ್ಯಾಗ್ನಲ್ಲಿ ಒಟ್ಟು 4.5 ಲಕ್ಷ ರೂ.ಗಳಿಗೂ ಹೆಚ್ಚು ಹಣ ಸಿಕ್ಕಿತು. ಆ ಹಣವನ್ನು ಒಂದು ಹಳೆಯ ಪ್ಲಾಸ್ಟಿಕ್ ಬಾಕ್ಸ್ ಒಳಗೆ ಹಾಕಿ, ಆ ಬಾಕ್ಸನ್ನು ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದ. ನಗದು ಹಣದಲ್ಲಿ ನಿಷೇಧಿತ 2,000 ರೂ. ನೋಟುಗಳು ಮತ್ತು ವಿದೇಶಿ ಕರೆನ್ಸಿ ಕೂಡ ಸೇರಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಅನಿಲ್ ಕಿಶೋರ್ ಪ್ರತಿದಿನ ಹಣಕ್ಕಾಗಿ ಭಿಕ್ಷೆ ಬೇಡುತ್ತಿದ್ದ. ಆಹಾರಕ್ಕಾಗಿ ಎಲ್ಲರ ಬಳಿ ಹಣ ಕೇಳುತ್ತಿದ್ದ. ಊಟಕ್ಕೇ ಹಣವಿಲ್ಲವೆಂದು ಹೇಳುತ್ತಿದ್ದ ಆ ಭಿಕ್ಷುಕ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದಾನೆಂದು ಯಾರಿಗೂ ತಿಳಿದಿರಲಿಲ್ಲ. ಈ ವಿಷಯ ಕೇಳಿ ಸುತ್ತಲಿನ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: ಆಗಷ್ಟೇ ಹುಟ್ಟಿದ ಮಗುವನ್ನು ಕಸದ ತೊಟ್ಟಿಗೆ ಎಸೆದ ತಾಯಿ!
ಈ ಹಣದ ಮೂಲವೇನು? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಆತನ ಕುಟುಂಬದ ಯಾವುದೇ ಸದಸ್ಯರು ಅದನ್ನು ಪಡೆಯಲು ಮುಂದೆ ಬರುತ್ತಾರೋ ಇಲ್ಲವೋ ಎಂಬುದನ್ನು ನೋಡಿಕೊಂಡು, ನಂತರ ಆ ಹಣವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
