ಆಗಷ್ಟೇ ಹುಟ್ಟಿದ ಮಗುವನ್ನು ಕಸದ ತೊಟ್ಟಿಗೆ ಎಸೆದ ತಾಯಿ!
ತಾಯಿ ತನಗೆಷ್ಟೇ ಕಷ್ಟವಾದರೂ ಮಕ್ಕಳಿಗೆ ನೋವಾಗದಂತೆ ನೋಡಿಕೊಳ್ಳುತ್ತಾಳೆ. ಅಮ್ಮ ಮಕ್ಕಳಿಗಾಗಿ ಯಾವ ತ್ಯಾಗ ಬೇಕಾದರೂ ಮಾಡುತ್ತಾಳೆ. ಅದೇ ಕಾರಣಕ್ಕೆ ತಾಯಿಗೆ ದೇವರ ಸ್ಥಾನ ನೀಡಲಾಗಿದೆ. ಆದರೆ, ತಮಿಳುನಾಡಿನ ತಿರುಚೆಂಡೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ಖಾಸಗಿ ಆಸ್ಪತ್ರೆಯ ಕಸದ ತೊಟ್ಟಿಗೆ ಯುವತಿಯೊಬ್ಬಳು ಮಗುವನ್ನು ಎಸೆದ ಆಘಾತಕಾರಿ ಘಟನೆ ನಡೆದಿದೆ. ತೂತುಕುಡಿ ಜಿಲ್ಲೆಯ ತಿರುಚೆಂಡೂರಿನಲ್ಲಿ ಯುವತಿಯೊಬ್ಬಳು ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿ ಆ ಮಗುವನ್ನು ಆಸ್ಪತ್ರೆಯ ಕಸದ ತೊಟ್ಟಿಗೆ ಎಸೆದಿದ್ದಾಳೆ. ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

ಚೆನ್ನೈ, ಜನವರಿ 5: ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯ ತಿರುಚೆಂದೂರಿನ ಯುವತಿಯೊಬ್ಬಳು ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದ (Delivery) ಕೆಲವೇ ಗಂಟೆಗಳಲ್ಲಿ ಯುವತಿಯೊಬ್ಬಳು ತನ್ನ ಮಗುವನ್ನು ಕಸದ ತೊಟ್ಟಿಗೆ ಎಸೆದಿದ್ದಾಳೆ. ಕಸದ ತೊಟ್ಟಿಯಲ್ಲಿ ಮಗು ಸಿಕ್ಕ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಮಗು ಜನಿಸಿದ ಕೆಲವೇ ಗಂಟೆಗಳಲ್ಲಿ ನವಜಾತ ಶಿಶುವನ್ನು ಎಸೆಯಲಾಗಿದೆ.
ಆ ಯುವತಿಗೆ ಯುವಕನೊಬ್ಬನ ಜೊತೆ ನಿಶ್ಚಿತಾರ್ಥವಾಗಿತ್ತು. ಆದರೆ ಆತನೊಂದಿಗಿನ ನಿಕಟ ಸಂಬಂಧದಿಂದಾಗಿ ಆಕೆ ಗರ್ಭಿಣಿಯಾದಳು ಎಂದು ತಿಳಿದುಬಂದಿದೆ. ಆ ಯುವತಿ ಮತ್ತು ಆಕೆ ಮದುವೆಯಾಗಬೇಕಿದ್ದ ಯುವಕ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಅಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಳು. ಮದುವೆಗೂ ಮೊದಲೇ ತಾವು ಅಪ್ಪ-ಅಮ್ಮ ಆದ ವಿಷಯ ಗೊತ್ತಾದರೆ ಮನೆಯವರು ಸುಮ್ಮನಿರುವುದಿಲ್ಲ ಎಂಬ ಕಾರಣಕ್ಕೆ ಅವರಿಬ್ಬರೂ ಸೇರಿಯೇ ಯಾರಿಗೂ ತಿಳಿಯದಂತೆ ಆ ಮಗುವನ್ನು ಕಸದ ತೊಟ್ಟಿಗೆ ಎಸೆದಿದ್ದಾರೆ.
ಇದನ್ನೂ ಓದಿ: ಹೆತ್ತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿ ಗರ್ಭಿಣಿ ಮಾಡಿದ ಅಪ್ಪನಿಗೆ ಗಲ್ಲು ಶಿಕ್ಷೆ!
ಈ ವಿಷಯಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಆಡಳಿತ ಮಂಡಳಿ ನೀಡಿದ ಮಾಹಿತಿಯ ಪ್ರಕಾರ, ಈ ಘಟನೆ ನಡೆದ ಸ್ಥಳಕ್ಕೆ ತೆರಳಿ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಮಗುವನ್ನು ಕಾಪಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ತಿರುಚೆಂಡೂರು ತಾಲ್ಲೂಕು ಪೊಲೀಸರು ಯುವತಿ ಮತ್ತು ಆಕೆ ಮದುವೆಯಾಗಲಿರುವ ಯುವಕನನ್ನು ಬಂಧಿಸಿ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
