ಹೆತ್ತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿ ಗರ್ಭಿಣಿ ಮಾಡಿದ ಅಪ್ಪನಿಗೆ ಗಲ್ಲು ಶಿಕ್ಷೆ!
ತಮಿಳುನಾಡಿನಲ್ಲಿ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯನ್ನಾಗಿ ಮಾಡಿದ್ದಕ್ಕಾಗಿ ಆ ಬಾಲಕಿಯ ತಂದೆಗೆ ಪೋಕ್ಸೋ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ತನ್ನ 14 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯನ್ನಾಗಿ ಮಾಡಿದ್ದಕ್ಕಾಗಿ ತಮಿಳುನಾಡಿನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ನ್ಯಾಯಾಲಯವು ತಂದೆಗೆ ಗಲ್ಲು ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.

ತಿರುನಲ್ವೇಲಿ, ಜನವರಿ 5: ಹೆಣ್ಣುಮಕ್ಕಳ ಪಾಲಿಗೆ ತಮ್ಮ ತಂದೆಯೇ ಮೊದಲ ಹೀರೋ. ಆದರೆ, ತಮಿಳುನಾಡಿನಲ್ಲಿ 14 ವರ್ಷದ ಬಾಲಕಿಯೊಬ್ಬಳ ಪಾಲಿಗೆ ಆಕೆಯ ಅಪ್ಪನೇ ವಿಲನ್ ಆಗಿದ್ದಾನೆ. ತಿರುನಲ್ವೇಲಿ ಜಿಲ್ಲೆಯ ವಲಿಯೂರು ಬಳಿ ಅಪ್ರಾಪ್ತ ಬಾಲಕಿಯನ್ನು ಆಕೆಯ ತಂದೆಯೇ ಗರ್ಭಿಣಿಯನ್ನಾಗಿ (Pregnant) ಮಾಡಿದ್ದಾನೆ. ಆಕೆ ಮಗುವನ್ನೂ ಹೆತ್ತಿದ್ದಾಳೆ. ಡಿಎನ್‌ಎ ಪರೀಕ್ಷೆಯಲ್ಲಿ ಆಕೆಯ ಮಗುವಿಗೆ ಆಕೆಯ ಅಪ್ಪನೇ ತಂದೆ ಎಂಬುದು ದೃಢಪಟ್ಟ ನಂತರ ಪೋಕ್ಸೊ ನ್ಯಾಯಾಲಯವು ಆ ಬಾಲಕಿಯ ತಂದೆಗೆ ಮರಣದಂಡನೆ ವಿಧಿಸಿದೆ.
ತಿರುನೆಲ್ವೇಲಿ ಜಿಲ್ಲೆಯ ಪಣಗುಡಿ ಪ್ರದೇಶದ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುವ ವ್ಯಕ್ತಿಗೆ ಇಬ್ಬರು ಹೆಂಡತಿಯರಿದ್ದಾರೆ. ಅವನ ಎರಡನೇ ಹೆಂಡತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆತನ 14 ವರ್ಷದ ಕಿರಿಯ ಮಗಳು 10ನೇ ತರಗತಿಯಲ್ಲಿ ಓದುತ್ತಿದ್ದಳು. ಕಳೆದ ವರ್ಷ ಅಂದರೆ 2025ರ ಜನವರಿಯಲ್ಲಿ ಆ ಹುಡುಗಿಯ ತಾಯಿಗೆ ತನ್ನ ಮಗಳ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿರುವುದು ಗಮನಕ್ಕೆ ಬಂದಿತ್ತು. ಹೀಗಾಗಿ, ಆಕೆ ತಪಾಸಣೆಗಾಗಿ ಮಗಳನ್ನು ಆಸ್ಪತ್ರೆಗೆ ಕರೆದೊಯ್ದರು. ಆಗ ವೈದ್ಯರು ಆ ಹುಡುಗಿ 5 ತಿಂಗಳ ಗರ್ಭಿಣಿಯಾಗಿದ್ದಾಳೆಂದು ಹೇಳಿದರು. ಈ ವಿಷಯವನ್ನು ತಿಳಿದು ತಾಯಿಗೆ ಮಾತ್ರವಲ್ಲದೆ ವೈದ್ಯರಿಗೂ ಆಘಾತ ಉಂಟಾಯಿತು.
ಇದನ್ನೂ ಓದಿ: ಗರ್ಭಿಣಿಯರೇ… ನೀವು ಚಳಿಗಾಲದಲ್ಲಿ ಮಾಡುವ ಈ ಒಂದು ತಪ್ಪು ಮಗುವಿನ ತೂಕದ ಮೇಲೆ ಪರಿಣಾಮ ಬೀರುತ್ತೆ
ಇದರ ನಂತರ, ಆ ಬಾಲಕಿಯನ್ನು ವಿಚಾರಿಸಿದಾಗ ತನ್ನ ತಂದೆ 2024ರಿಂದ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಅವಳು ಅಳುತ್ತಾ ಹೇಳಿದಳು. ಇದನ್ನು ಕೇಳಿ ತೀವ್ರ ದುಃಖಿತಳಾದ ಆಕೆಯ ತಾಯಿ ಕಳೆದ ವರ್ಷ ಫೆಬ್ರವರಿಯಲ್ಲಿ ವಲ್ಲಿಯೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆತನ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಯಿತು, ತನಿಖೆಯ ಭಾಗವಾಗಿ ಡಿಎನ್ಎ ಪುರಾವೆಗಳನ್ನು ಸಂಗ್ರಹಿಸಲಾಯಿತು.
2024ರಲ್ಲಿ ಮನೆಯಲ್ಲಿ ಬೇರೆ ಯಾರೂ ಇಲ್ಲದಿದ್ದಾಗ ತನ್ನ ಕಿರಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಘಟನೆಯು ಕಳೆದ ವರ್ಷ ಬೆಳಕಿಗೆ ಬಂದ ನಂತರ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿಸಿತ್ತು. ತನಿಖೆಯ ಭಾಗವಾಗಿ ನಡೆಸಲಾದ ಡಿಎನ್ಎ ಪರೀಕ್ಷೆಯಲ್ಲಿ ಆಕೆಯ ಗರ್ಭದಲ್ಲಿರುವ ಮಗುವಿನ ಡಿಎನ್ಎ ಆರೋಪಿಯ ಡಿಎನ್ಎಗೆ ಹೊಂದಿಕೆಯಾಗುವುದು ಕಂಡುಬಂದಿದ್ದು, ನ್ಯಾಯಾಲಯದಲ್ಲಿ ಅಪರಾಧವನ್ನು ದೃಢಪಡಿಸಿತ್ತು.
ಇದನ್ನೂ ಓದಿ: ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹಂತಕನ ಪ್ಲಾನ್ ಏನಿತ್ತು ಗೊತ್ತಾದ್ರೆ ಬೆಚ್ಚಿಬೀಳ್ತೀರಿ!
ಈ ಪ್ರಕರಣದ ಅಂತಿಮ ತೀರ್ಪು ಇಂದು ತಿರುನಲ್ವೇಲಿ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಾಧೀಶ ಸುರೇಶ್ ಕುಮಾರ್, ಈ ಪ್ರಕರಣದಲ್ಲಿ ಕನಿಷ್ಠ ಶಿಕ್ಷೆಯನ್ನು ಪರಿಗಣಿಸಲಾಗಿದೆ ಎಂದು ತೀರ್ಪಿನಲ್ಲಿ ತಿಳಿಸಿದ್ದರು. ಆದರೆ, ಸಂತ್ರಸ್ತ ಬಾಲಕಿ ಮತ್ತು ಆಕೆಯ ತಾಯಿ ಗರಿಷ್ಠ ಶಿಕ್ಷೆಯನ್ನು ಕೋರಿದ್ದರು. ಕೊನೆಗೆ, ತನ್ನ ಸ್ವಂತ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ ಅಪರಾಧಕ್ಕಾಗಿ ಅಪರಾಧಿಗೆ ಮರಣದಂಡನೆ ವಿಧಿಸಲಾಗುತ್ತಿದೆ ಎಂದು ನ್ಯಾಯಾಧೀಶರು ಘೋಷಿಸಿದರು.
ಇದೇ ತಿರುನಲ್ವೇಲಿಯ ಪೋಕ್ಸೊ ವಿಶೇಷ ನ್ಯಾಯಾಲಯವು 11 ದಿನಗಳ ಹಿಂದೆ ತನ್ನ ಮಗಳನ್ನು ಗರ್ಭಿಣಿಯನ್ನಾಗಿ ಮಾಡಿದ್ದಕ್ಕಾಗಿ ಮತ್ತೊಬ್ಬ ತಂದೆಗೆ ಕೂಡ ಮರಣದಂಡನೆ ವಿಧಿಸಿತ್ತು. ಕಡಿಮೆ ಅವಧಿಯಲ್ಲಿ ಒಂದೇ ರೀತಿಯ ಅಪರಾಧಕ್ಕೆ ಎರಡನೇ ಮರಣದಂಡನೆ ವಿಧಿಸಿರುವುದು ಈ ಪ್ರದೇಶದಲ್ಲಿ ಭಾರಿ ಆಘಾತ ಉಂಟು ಮಾಡಿದೆ. ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳು ಹೆಚ್ಚಾಗುತ್ತಿರುವುದಕ್ಕೆ ಕಳವಳವೂ ವ್ಯಕ್ತವಾಗಿದೆ. ಮಕ್ಕಳ ಪಾಲಿಗೆ ರಕ್ಷಕನಾಗಬೇಕಾದ ಅಪ್ಪನೇ ಅವರ ಜೀವನವನ್ನು ಹಾಳು ಮಾಡುತ್ತಿರುವುದು ಆತಂಕಕಾರಿ ಸಂಗತಿ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
