ವರದಕ್ಷಿಣೆಗಾಗಿ ಗರ್ಭಿಣಿಯನ್ನು ಕೊಂದು ರಹಸ್ಯವಾಗಿ ಅತ್ತೆ-ಮಾವನಿಂದ ಅಂತ್ಯ ಸಂಸ್ಕಾರ
ರಾಜಸ್ಥಾನದ ಧೋಲ್ಪುರದಲ್ಲಿ ವರದಕ್ಷಿಣೆ ಪಿಡುಗಿನ ಭೀಕರತೆ ಬಯಲಾಗಿದೆ. ವರದಕ್ಷಿಣೆಗಾಗಿ ನಾಲ್ಕು ತಿಂಗಳ ಗರ್ಭಿಣಿಯನ್ನು ಅತ್ತೆ-ಮಾವಂದಿರು ಕೊಲೆ ಮಾಡಿ, ಕುಟುಂಬಕ್ಕೆ ತಿಳಿಸದೆ ರಹಸ್ಯವಾಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಅಕ್ಕ ನೀಡಿದ ಮಾಹಿತಿ ಮೇರೆಗೆ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಕೈಗೊಂಡು ಪತಿಯನ್ನು ಬಂಧಿಸಿದ್ದಾರೆ. ವರದಕ್ಷಿಣೆ ದೌರ್ಜನ್ಯದ ವಿರುದ್ಧ ಮತ್ತೊಂದು ಕಠೋರ ಉದಾಹರಣೆ ಇದಾಗಿದೆ

ಜೈಪುರ, ಜನವರಿ 05: ದೇಶ ಎಷ್ಟೇ ಮುಂದುವರೆದಿದ್ದರೂ, ಜನರು ಎಷ್ಟೇ ಶಿಕ್ಷಣ ಪಡೆದಿದ್ದರೂ ಸಮಾಜದಲ್ಲಿ ವರದಕ್ಷಿಣೆ(Dowry) ಎಂಬುದು ಪಿಡುಗಾಗಿಯೇ ಉಳಿದಿದೆ. ಇನ್ನೂ ಕೂಡ ವರದಕ್ಷಿಣೆಗಾಗಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಂತಿಲ್ಲ. ರಾಜಸ್ಥಾನದ ಧೋಲ್ಪುರದಲ್ಲಿ ವರದಕ್ಷಿಣೆ ತಂದಿಲ್ಲವೆಂದು ನಾಲ್ಕು ತಿಂಗಳ ಗರ್ಭಿಣಿಯನ್ನೇ ಅತೆತ-ಮಾವ ಕೊಲೆ ಮಾಡಿ ರಹಸ್ಯವಾಗಿ ಅಂತ್ಯ ಸಂಸ್ಕಾರ ನಡೆಸಿರುವ ಘಟನೆ ವರದಿಯಾಗಿದೆ.
ಆರೋಪಿ ಕುಟುಂಬ ಸದಸ್ಯರು ಆಕೆಯ ಪೋಷಕರಿಗೆ ತಿಳಿಸದೆ ಆಕೆಯ ಶವವನ್ನು ಅಂತ್ಯಸಂಸ್ಕಾರ ಮಾಡಿ ಗ್ರಾಮದಿಂದ ಪರಾರಿಯಾಗಿದ್ದಾರೆ. 24 ವರ್ಷದ ಗುಡಿಯಾ ಎಂಬ ಯುವತಿಯನ್ನು ಇಂಚಾಪುರ ಗ್ರಾಮದ ನಿವಾಸಿ ಪಂಕಜ್ ಠಾಕೂರ್ ಎಂಬಾತ ವಿವಾಹವಾಗಿದ್ದಳು.ಶನಿವಾರ ಆಕೆಯ ಅತ್ತೆಯ ಮನೆಯಲ್ಲಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಆಕೆಯ ಅತ್ತೆ-ಮಾವಂದಿರು ಆಕೆಯ ದೇಹವನ್ನು ಸಗಣಿಯಿಂದ ಮಾಡಿದ ಚಿತೆಯ ಮೇಲೆ ಇರಿಸಿ, ಆಕೆಯ ಕುಟುಂಬಕ್ಕೆ ತಿಳಿಸದೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಗುಡಿಯಾಳ ಅಕ್ಕ ಪೋಷಕರಿಗೆ ಮಾಹಿತಿ ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಕುಟುಂಬdವರು ಗ್ರಾಮಕ್ಕೆ ಓಡಿ ಬಂದಾಗ, ಆಕೆಯ ಚಿತೆ ಇನ್ನೂ ಉರಿಯುತ್ತಿರುವುದನ್ನು ಕಂಡು ಕುಸಿದು ಕುಳಿತರು. ಅವರು ನೀರಿನಿಂದ ಬೆಂಕಿಯನ್ನು ನಂದಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.
ಮತ್ತಷ್ಟು ಒದಿ: ನೊಯ್ಡಾ ವರದಕ್ಷಿಣೆ ಕಿರುಕುಳ ಪ್ರಕರಣ; ನಿಕ್ಕಿಯನ್ನು ಸುಟ್ಟು ಕೊಲ್ಲಲು 1 ತಿಂಗಳಿಂದ ರೆಡಿಯಾಗಿತ್ತು ಪ್ಲಾನ್!
ಹಿರಿಯ ಪೊಲೀಸ್ ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದರು. ಚಿತೆಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು ಮತ್ತು ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ತಂಡವು ಸ್ಥಳದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿತು. ಡಿಎನ್‌ಎ ವಿಶ್ಲೇಷಣೆಗಾಗಿ ಮಾದರಿಗಳನ್ನು ಸಹ ತೆಗೆದುಕೊಳ್ಳಲಾಗಿದೆ.
ಮನೆಯೊಳಗೆ ರಕ್ತದ ಕಲೆಗಳು ಪತ್ತೆಯಾಗಿದ್ದು, ಕೊಡಲಿ, ಸನಿಕೆ, ಕೋಲುಗಳು ಮತ್ತು ಇತರ ವಸ್ತುಗಳು ಸೇರಿದಂತೆ ಆಯುಧಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಆ ರಾತ್ರಿ ನಂತರ ಸಂತ್ರಸ್ತೆಯ ಪತಿ ಪಂಕಜ್ ಠಾಕೂರ್ ಅವರನ್ನು ಬಂಧಿಸಿದ್ದಾರೆ. ಅತ್ತೆ-ಮಾವನ ಕುಟುಂಬದ ಇತರ ಸದಸ್ಯರು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ನಿವಾಸಿಯಾಗಿರುವ ಸಂತ್ರಸ್ತೆಯ ತಂದೆ ದೇವೇಂದ್ರ ಸಿಂಗ್ ಪರ್ಮಾರ್ ತಮ್ಮ ದೂರಿನಲ್ಲಿ, ತಮ್ಮ ಮಗಳನ್ನು ಪಂಕಜ್ ಠಾಕೂರ್ ಅವರೊಂದಿಗೆ ಮೇ 28, 2025 ರಂದು ವಿವಾಹವಾಗಿದ್ದರು ಎಂದು ಹೇಳಿದ್ದಾರೆ. ಮದುವೆಯ ಸಮಯದಲ್ಲಿ 15 ಲಕ್ಷ ರೂಪಾಯಿ ನಗದು, ಬೈಕ್, ಗೃಹೋಪಯೋಗಿ ವಸ್ತುಗಳು ಮತ್ತು ಆಭರಣಗಳನ್ನು ವರದಕ್ಷಿಣೆಯಾಗಿ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದರ ಹೊರತಾಗಿಯೂ, ಅತ್ತೆ-ಮಾವಂದಿರು ಕಾರು, ಚಿನ್ನದ ಸರ ಮತ್ತು ಎಮ್ಮೆ ಸೇರಿದಂತೆ ಹೆಚ್ಚುವರಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದರು ಮತ್ತು ಗುಡಿಯಾಳಿಗೆ ಮಾನಸಿಕ ಕಿರುಕುಳ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
