- Kannada News Photo gallery Beggar Donated Rs 1.8 Lakh to Anjaneya Swamy Temple Renovation in Raichur
ಆಂಜನೇಯ ದೇಗುಲ ಜೀರ್ಣೋದ್ಧಾರಕ್ಕೆ 1.80 ಲಕ್ಷ ರೂ. ದೇಣಿಗೆ ನೀಡಿದ ಭಿಕ್ಷುಕಿ
ರಾಯಚೂರು ತಾಲೂಕಿನ ಬಿಜ್ಜನಗೆರಾ ಗ್ರಾಮದ ಭಿಕ್ಷುಕಿ ರಂಗಮ್ಮ ಅವರು 40 ವರ್ಷಗಳಿಂದ ಭಿಕ್ಷಾಟನೆಯಿಂದ ಸಂಗ್ರಹಿಸಿದ 1.80 ಲಕ್ಷ ರೂಪಾಯಿ ಹಣವನ್ನು ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ದಾನ ಮಾಡಿದ್ದಾರೆ. ಈ ಕಾರ್ಯದಿಂದ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಮತ್ತು ರಂಗಮ್ಮ ಅವರ ದಾನಶೀಲತೆಯನ್ನು ಮೆಚ್ಚಿಕೊಂಡಿದ್ದಾರೆ.
Updated on:Aug 08, 2025 | 5:13 PM

ಈಗಿನ ಕಾಲದಲ್ಲಿ ಕಷ್ಟಕ್ಕೆ ಸ್ಪಂದಿಸುವವರು ಬಹಳ ವಿರಳ. ಅದರಲ್ಲೂ ಗ್ರಾಮದ ಅಭಿವೃದ್ಧಿಗೆ, ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ವೈಯಕ್ತಿಕವಾಗಿ, ಆರ್ಥಿಕವಾಗಿ ಸ್ಪಂದಿಸುವುದು ತೀರ ಕಡಿಮೆ. ಆದರೆ ರಾಯಚೂರಿನಲ್ಲಿ ಓರ್ವ ಭಿಕ್ಷುಕಿ ಗ್ರಾಮದ ದೇವಸ್ಥಾನವೊಂದರ ಜೀರ್ಣೋದ್ಧಾರಕ್ಕಾಗಿ ತಾನು ಭಿಕ್ಷಾಟನೆ ಮಾಡಿದ ಲಕ್ಷಾಂತರ ರೂಪಾಯಿ ಹಣವನ್ನು ದಾನವಾಗಿ ನೀಡಿ ಗ್ರಾಮದ ದೇವತೆ ಎನಿಸಿಕೊಂಡಿದ್ದಾಳೆ.

ರಾಯಚೂರು ತಾಲೂಕಿನ ಬಿಜ್ಜನಗೆರಾ ಗ್ರಾಮದ ರಂಗಮ್ಮ ಎಂಬವರು ಭಿಕ್ಷಾಟನೆಯಿಂದ ಬಂದ ಹಣವನ್ನು ಆಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೀಡಿದ್ದಾರೆ. ಭಿಕ್ಷಾಟನೆ ಹಣದಲ್ಲಿ ಮಜಾ ಉಡಾಯಿಸುವರ ಮಧ್ಯೆ ಜನರ ದುಡ್ಡು ಜನರಿಗೆ ತಲುಪಿಸಿದ ಹೃದಯವಂತೆ ಎಂಬ ಹೆಗ್ಗಳಿಕೆಗೆ ಭಿಕ್ಷುಕಿ ರಂಗಮ್ಮ ಪಾತ್ರರಾಗಿದ್ದಾರೆ.

ಭಿಕ್ಷುಕಿ ರಂಗಮ್ಮ ಸಾವಿರ, ಎರಡು ಸಾವಿರವಲ್ಲ, ಬರೋಬ್ಬರಿ 1 ಲಕ್ಷ 80 ಸಾವಿರ ರೂಪಾಯಿ ದಾನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕಳೆದ ಆರು ವರ್ಷಗಳಿಂದ ಸಂಗ್ರಹಿಸಿದ್ದ ಭಿಕ್ಷಾಟನೆ ಹಣವನ್ನು ದಾನ ಮಾಡಿದ ರಂಗಮ್ಮ ಇಡೀ ಗ್ರಾಮಸ್ಥರಿಗೆ ಅಚ್ಚುಮೆಚ್ಚಾಗಿದ್ದಾರೆ.

ರಾಯಚೂರು ತಾಲ್ಲೂಕಿನ ಬಿಜ್ಜನಗೇರಾ ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆದಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿಜ್ಜನಗೆರಾ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಮಾಡುತ್ತಿರುವ ವಿಚಾರ ಭಿಕ್ಷುಕಿ ರಂಗಮ್ಮರಿಗೆ ಗೊತ್ತಾಗಿದೆ. ಬಳಿಕ ರಂಗಮ್ಮ ತಾನು ಆರ್ಥಿಕ ಸಹಾಯ ಮಾಡಿವ ಬಗ್ಗೆ ಗ್ರಾಮಸ್ಥರ ಮುಂದೆ ಹೇಳಿಕೊಂಡಿದ್ದರು. ಭಿಕ್ಷುಕಿ ರಂಗಮ್ಮ ಬಳಿ ಏನೋ ಸಾವಿರ, ಎರಡು ಸಾವಿರ ಹಣ ಇರಬಹುದು ಎಂದು ಗ್ರಾಮಸ್ಥರು ಅಂದುಕೊಂಡಿದ್ದರು.

ಆದರೆ, ರಂಗಮ್ಮ ಮೂರು ಗೋಣಿ ಚೀಲದಲ್ಲಿ ತುಂಬಲಾಗಿದ್ದ ನೋಟುಗಳು, ನಾಣ್ಯಗಳನ್ನು ತಂದು ಗ್ರಾಮಸ್ಥರಿಗೆ ಕೊಟ್ಟಿದ್ದಾರೆ. ಆ ಬಳಿಕ ಗ್ರಾಮದ ಹಿರಿಯರೆಲ್ಲ ಸೇರಿ ಮುರೂ ಗೋಣಿ ಚೀಲದಲ್ಲಿದ್ದ ನೋಟುಗಳು, ಚಿಲ್ಲರೆ ಹಣ ಎಣಿಕೆ ಶುರು ಮಾಡಿದರು. 20 ಕ್ಕೂ ಹೆಚ್ಚು ಜನರು 6 ಗಂಟೆಗಳ ಕಾಲ ನೋಟು ಮತ್ತು ಚಿಲ್ಲರೆ ಹಣ ಎಣಿಕೆ ಮಾಡಿದ್ದಾರೆ. ಒಟ್ಟು 2 ಲಕ್ಷ ರೂಪಾಯಿ ಇತ್ತು. ಆದರೆ, 20 ಸಾವಿರ ಮೌಲ್ಯದಷ್ಟು ನೋಟುಗಳು ತೇವಗೊಂಡು ಹಾಳಾಗಿದ್ದವು. ಉಳಿದ 1 ಲಕ್ಷ 80 ಸಾವಿರ ಹಣವನ್ನ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಭಿಕ್ಷುಕಿ ರಂಗಮ್ಮ ದಾನವಾಗಿ ನೀಡಿದ್ದಾರೆ.

ರಂಗಮ್ಮ ಮೂಲತಃ ಆಂದ್ರಪ್ರದೇಶದವರು. ಕಳೆದ 40 ವರ್ಷಗಳ ಹಿಂದೆಯೇ ಬಿಜ್ಜನಗೆರಾ ಗ್ರಾಮಕ್ಕೆ ಕೆಲಸವೊಂದರ ನಿಮಿತ್ತ ಆಗಮಿಸಿದ್ದರು. ಆ ಬಳಿಕ ರಂಗಮ್ಮ ವಾಪಸ್ ಹೋಗದೆ ಅಂದಿನಿಂದ ಬಿಜ್ಜನಗೇರಾ ಗ್ರಾಮದಲ್ಲಿ ಭಿಕ್ಷಾಟನೆ ಮಾಡಲು ಶುರು ಮಾಡಿದ್ದರು. ಬೈಕ್ ಸವಾರರು, ಆಟೋ ಸೇರಿ ವಿವಿಧ ವಾಹನಗಳ ಸವಾರರಿಂದ ಮಾತ್ರ ರಂಗಮ್ಮ ಭಿಕ್ಷೆ ಕೇಳುತ್ತಾರೆ.

Beggar Donated 1.5 Lakhs To Temple In Raichur (8)

ಈ ಹಿಂದೆ ಆಕೆಯ ಭಿಕ್ಷಾಟನೆ ಹಣದಲ್ಲೇ 1 ಲಕ್ಷ ರೂ. ವೆಚ್ಚದಲ್ಲಿ ಗ್ರಾಮಸ್ಥರು ರಂಗಮ್ಮರಿಗೆ ಸೂರು ನಿರ್ಮಿಸಿ ಕೊಟ್ಟಿದ್ದರು. ಈಗ ಜನರ ದುಡ್ಡನ್ನು ಜನರಿಗಾಗಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನೀಡಿ ಹೃದಯವಂತೆಯಾಗಿದ್ದಾಳೆ .
Published On - 3:29 pm, Fri, 8 August 25



